ಭಾರತದ ಶ್ರಮಜೀವಿಗಳು ಮತ್ತೊಮ್ಮೆ ಸಾರ್ವತ್ರಿಕ ಮುಷ್ಕರದ ಮೂಲಕ ಈ ದೇಶದ ಬಂಡವಾಳಶಾಹಿ ಆಡಳಿತ ವ್ಯವಸ್ಥೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಬೀದಿಗಿಳಿದಿದ್ದಾರೆ. “ಸುಧಾರಣೆಗಳು” ಎಂಬ ಮೋಸದ ಶೀರ್ಷಿಕೆಯಡಿ ಜಾರಿಯಾದ ನವ ಉದಾರೀಕರಣ ನೀತಿಗಳು, ಅಂದಿನಿಂದ ಇಂದಿನವರೆಗೂ ಈ ದೇಶದ ಮತ್ತು ವಿದೇಶದ ಬಂಡವಾಳಿಗರ ಗುಲಾಮಗಿರಿ ಮಾಡುತ್ತಾ ಭಾರತದ ೯೯% ಜನರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳನ್ನು ಅಧೋಗತಿ ಮುಟ್ಟಿಸಿವೆ. ಕಳೆದ ಎರಡುವರೆ ದಶಕಗಳಲ್ಲಿ ೧೯ನೇ ಬಾರಿ ನಡೆಯುತ್ತಿರುವ ಈ ಜನರಲ್ ಸ್ಟ್ರೈಕ್, ದೊಡ್ಡ ಬಂಡವಾಳಿಗರ ಈ ಸಂಚನ್ನು ನಿರ್ಣಾಯಕವಾಗಿ ಹಿಮ್ಮೆಟ್ಟಲು ಕಾರ್ಮಿಕ ಜನಸ್ತೋಮವನ್ನು ಅಣಿಗೊಳಿಸಿದೆ.
ಜಗತ್ತಿನಾದ್ಯಂತ ಬಂಡವಾಳಶಾಹಿ ಚರಿತ್ರೆಯಲ್ಲಿ ಕೈಗಾರಿಕಾ ಸಾರ್ವತ್ರಿಕ ಮುಷ್ಕರಗಳು, ಬಂಡವಾಳಶಾಹಿಗಳು ನಡೆಸುವ ಶೋಷಣೆಯ ವಿರುದ್ಧ ಶ್ರಮಜೀವಿಗಳು ತಮ್ಮ ಸಾಂದ್ರಿತ ಆಕ್ರೋಶವನ್ನು ವ್ಯಕ್ತಪಡಿಸುತ್ತಲೇ ಬಂದಿವೆ. ಹೆಚ್ಚಿನ ಆರ್ಥಿಕ ಗಳಿಕೆ ಮತ್ತು ಜೀವನ ಮಟ್ಟಗಳ ಸುಧಾರಣೆಗಾಗಿ ಈ ಮುಷ್ಕರಗಳು ಆಯೋಜಿತಗೊಂಡರೂ, ಆರ್ಥಿಕತೆಯ ಉದ್ದೇಶಗಳಿಂದಾಚೆಗೆ ಮೀರಿ ನಿಂತು ತಮ್ಮ ವರ್ಗ ಶಕ್ತಿಯ ಮೂಲಕ ಇಡೀ ಔದ್ಯೋಗಿಕ ಆರ್ಥಿಕ ವ್ಯವಸ್ಥೆಯನ್ನು ಸ್ಥಗಿತಗೊಳಿಸಿ ಬಂಡವಾಳಿ ಮೇಲ್ವರ್ಗಗಳಿಗೆ ಸಡ್ಡು ಹೊಡೆಯುವ ಸಾಧ್ಯತೆ ಹೊಂದಿದೆ. ಸಾರ್ವತ್ರಿಕ ಮುಷ್ಕರಗಳು ವರ್ಗಸಂಘರ್ಷದ ಕ್ರಿಯಾಶೀಲತೆಯನ್ನು ವ್ಯಕ್ತಗೊಳಿಸಿ, ತದನಂತರದ ಹಲವು ಸಂಚಿತ ಹೋರಾಟಗಳಿಗೆ ಬುನಾದಿ ಹಾಕಿ ಒಂದು ಆರ್ಥಿಕ ಮತ್ತು ಸಾಮಾಜಿಕ ಕ್ರಾಂತಿಕಾರಿ ಬದಲಾವಣೆಯನ್ನು ಜಾರಿಗೆ ತರುವ ಸಾಧ್ಯತೆಯತ್ತ ದಾಪುಗಾಲು ಹಾಕಬಹುದಾಗಿದೆ.
ಇಂದಿನ ಭಾರತ
ಜನವರಿ ೮ರಂದು ಮುಷ್ಕರ ನಡೆಯಲಿದ್ದು ಅದೇ ಸಂದರ್ಭದಲ್ಲಿ ಭಾರತದಾದ್ಯಂತ ಹಿಂದೆಂದೂ ಕಂಡರಿಯದ ಏಕಕಾಲದ ಬೃಹತ್ ಸಾಮಾಜಿಕ ಚಳುವಳಿ ಭುಗಿಲೇದ್ದಿದೆ. ಕಾರ್ಮಿಕ ಜನತೆ ಮತ್ತು ಮಿಶ್ರ ಜನಾಂಗಗಳ ಸ್ವಯಂಪ್ರೇರಿತ ಜನ ಚಳುವಳಿಗಳನ್ನು ನಾವು ನಾಡಿನಾದ್ಯಂತ ಇಂದು ವೀಕ್ಷಿಸುತ್ತಿದ್ದೇವೆ. ಇದುವರೆವಿಗೂ ಅದುಮಿಡಲಾದ ಹಲವು ವರುಷಗಳ ಹತಾಶೆ–ನಿರಾಶೆಗಳು ಇಂದು ವ್ಯಗ್ರವಾಗಿ ಹೊರಹೊಮ್ಮುತ್ತಿವೆ. ಜೀವನಸ್ತರಗಳ ತೀವ್ರ ಇಳಿಕೆ, ಎಲ್ಲಾ ಮೂಲಭೂತ ಹಕ್ಕುಗಳ ಮೇಲೆ ನಿರಂತರ ಹಲ್ಲೆ, ಕೃಷಿ ಮತ್ತು ರೈತಾಪಿಗಳ ಅಪಾಯಕರ ಸ್ಥಿತಿ ಮತ್ತು ಸಹಸ್ರಾರು ಕೃಷಿಕರ ಆತ್ಮಹತ್ಯೆಗಳು, ಕಳೆದ ನಾಲ್ಕೂವರೆ ದಶಕಗಳಲ್ಲಿ ಕಾಣದಷ್ಟು ತೀವ್ರಗೊಂಡ ನಿರುದ್ಯೋಗ ಸಮಸ್ಯೆ, ಈ ಎಲ್ಲಾ ಮಡುಗಟ್ಟಿದ ಕಾರಣಗಳು ಇಂದು ಭೋರ್ಗರೆವ ಪ್ರವಾಹದಂತೆ ಸಿಡಿದೆದ್ದಿದೆ.
ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಂದ ಭಾರತ ಸ್ವಾತಂತ್ರ್ಯಗಳಿಸಿ ಏಳು ದಶಕಗಳೇ ಕಳೆದರೂ ಇಂದಿಗೂ ಜಾತಿವಾದ ಮತ್ತು ಅಸಹ್ಯ ಸಾಮಾಜಿಕ ತಾರತಮ್ಯಗಳು ತಾಂಡವವಾಡುತ್ತಿದ್ದು ಹಿಂದೆಂದೂ ದಾಖಲಾಗದ ಕ್ಷುದ್ರ ಪರಿಸ್ಥಿತಿಗೆ ಬಂದು ನಿಂತಿದೆ. ದಲಿತ, ಆದಿವಾಸಿ ಜನಾಂಗಗಳು ಮತ್ತು ಇತರ ತುಳಿತಕ್ಕೊಳಗಾದ ಸಮುದಾಯಗಳು ಹೇಯ ಉಪೇಕ್ಷೆ ಮತ್ತು ಅವಮಾನಗಳತ್ತ ಬಲವಂತವಾಗಿ ದೂಡಲ್ಪಟ್ಟಿವೆ. ಅವರುಗಳು ದೀರ್ಘ ಹೋರಾಟಗಳ ಮೂಲಕ ಗಳಿಸಿದ ಸಾಂವಿಧಾನಿಕ ಹಕ್ಕುಗಳ ಚ್ಯುತಿ ನಿರಂತರ ಸಾಗುತ್ತಿದೆ. ಈ ವ್ಯವಸ್ಥಿತ ಹಲ್ಲೆಗಳು ಸಾಮಂತಶಾಹಿ ವಿಚಾರಗಳ ಬಲಪಂಥೀಯರಿಂದ ನಡೆಯುತ್ತಿದ್ದು, ದಿನ ನಿತ್ಯ ಅವಹೇಳನ, ದ್ವೇಷ, ಲೈಂಗಿಕ ಬಲಾತ್ಕಾರ, ಜೀವಂತ ದಹನ ಮತ್ತು ಕೊಲೆಗಳನ್ನು ನಡೆಸುತ್ತಿದ್ದು ಸಂತ್ರಸ್ತ ಬಹುಜನ ಸಮುದಾಯಗಳನ್ನು ಸದಾ ಭೀತಿಯ ವಾತಾವರಣದಲ್ಲಿ ಮುದುಡಿ ಹೋಗುವಂತೆ ಮಾಡಿದೆ.
ಇದುವರೆವಿಗೆ ಭಾರತದಲ್ಲಿ ಎಲ್ಲಾ ಜನಸಮುದಾಯಗಳಿಗೂ ಖಾತರಿಯಾಗಿದ್ದ ಪೌರತ್ವದ ಹಕ್ಕು ಮೊಟುಕುಗೊಳ್ಳುವ ಭೀತಿಯ ಸುತ್ತಾ ಭುಗಿಲೆದ್ದ ಅಪರಿಮಿತ ಕೋಲಾಹಲ ಆಳುವ ವರ್ಗಗಳನ್ನು ಚಕಿತಗೊಳಿಸಿದೆ. ಬಲಪಂಥೀಯ ರಾಜಕೀಯ ಪಾಳಯದ ಹಲವು ಪಕ್ಷಗಳೂ, ಇದು ಭಾರತದ “ಪ್ರಜಾತಂತ್ರ”ಕ್ಕೆ ಬಂದೊದಗಿರುವ ಅತಿ ದೊಡ್ಡ ಅಪಾಯವೆಂದು ಉದ್ಗಾರವೆತ್ತಿವೆ. ಪೌರತ್ವ ತಿದ್ದುಪಡಿ ಕಾನೂನಿನ(ಸಿ.ಎ.ಎ) ಸಾಮಾಜಿಕ ಒಡಕುಂಟು ಮಾಡುವ ಅಜೆಂಡಾ ಮಾತ್ರವಲ್ಲದೆ ಮುಂಬರಲಿರುವ ಭೀಕರ ಅವಲಕ್ಷಣದ ರಾಷ್ಟ್ರೀಯ ಪೌರತ್ವದ ದಾಖಲೆ(ಎನ್.ಆರ್.ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರು(ಎನ್.ಪಿ.ಆರ್) ಚಿತಾವಣೆಗಳು ಭಾರತೀಯ ಜನತಾ ಪಕ್ಷದ(ಬಿಜೆಪಿ) ಇದರ ಹಿಂದಿರುವ ಕುಟಿಲತೆಯನ್ನು ಬಯಲುಗೊಳಿಸಿದೆ. ಈ ಹುನ್ನಾರದಲ್ಲಡಗಿರುವ ಬಿಜೆಪಿಯ ಬಹುದಿನದ ಉದ್ದೇಶವಾದ ಧಾರ್ಮಿಕ ಬಹುಸಂಖ್ಯಾತರ ಹಿಂದೂ ರಾಷ್ಟ್ರದ ಪರಿಕಲ್ಪನೆ, ಹಿಟ್ಲರ್ ನ ನಾಜಿ಼ ಜರ್ಮನಿಯ ಭಯಾನಕತೆಯನ್ನು ನೆನಪಿಗೆ ತರುತ್ತದೆ.
ಜಗತ್ತಿನಾದ್ಯಂತ ಸಾಮಾಜಿಕ ಕ್ಷೋಭೆ
ಜನವರಿ ೮ ರ ಭಾರತದ ಸಾರ್ವತ್ರಿಕ ಮುಷ್ಕರ, ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ವರ್ಗ ಸಂಘರ್ಷ ಮತ್ತೊಮ್ಮೆ ನಿಚ್ಚಳವಾಗಿ ತಲೆಯೆತ್ತಿದ ಸಂದರ್ಭದಲೇ ನಡೆಯುತ್ತಿದೆ. ಭಾರತದ ಸಧ್ಯದ ಸಾಮಾಜಿಕ ಪರಿಸ್ಥಿತಿಯನ್ನು ಇದೇ ರೀತಿಯ ಕೋಲಾಹಲದಲ್ಲಿ ಮುಳುಗಿರುವ ಚಿಲಿ ಮತ್ತು ಹಾಂಗ್ ಕಾಂಗ್ ದೇಶಗಳಿಗೆ ಹೋಲಿಸಬಹುದಾಗಿದೆ. ಈ ಎರಡೂ ಉದಾಹರಣೆಗಳಲ್ಲೂ ಅಲ್ಲಿನ ಯುವಕರು ಹೋರಾಟದ ಮುಂಚೂಣಿಗಳಲ್ಲಿದ್ದಾರೆ. ಜಾಗತಿಕ ಬಂಡವಾಳಿ ವರ್ಗ, ಚಿಲಿ ದೇಶವನ್ನು ಎಲ್ಲಾ ದೇಶಗಳಿಗೂ ಮಾದರಿ ಎಂಬಂತೆ ಕೊಂಡಾಡಿದ್ದರು, ಏಕೆಂದರೆ ಅಲ್ಲಿ ಕಾಣಸಿಗುತ್ತಿದ್ದ ಪಾಶವೀ ನವ ಉದಾರೀಕರಣ ನೀತಿಗಳು ಮತ್ತು ತುಲನ್ಮಾತಕ ಸಾಮಾಜಿಕ ಸ್ಥಿರತೆ. ಆದರೆ ಇತ್ತೀಚೆಗೆ ಮಿಲಿಯಾಂತರ ಜನತೆ ಬೀದಿಗಿಳಿದು ಹೋರಾಟ ಪ್ರಾರಂಭಿಸಿದ ನಂತರ ಈ “ಮಾದರಿ” ಮಾಯವಾಯಿತು. ಯುವಜನತೆ ಸಾರ್ವತ್ರಿಕ ಹರತಾಳಗಳಲ್ಲಿ ಭಾಗವಹಿಸಿ ಮಿಲಿಟರಿಯೊಂದಿಗೆ ಸೆಣೆಸಿ ಸರ್ಕಾರವನ್ನು ಹಿಮ್ಮೆಟ್ಟುವಂತೆ ಮಾಡಿದರು.
ಹಾಂಗ್ ಕಾಂಗಿನ ಧೈರ್ಯಶಾಲಿ ಯುವಕರು ಅಲ್ಲಿ “ಕಮ್ಯುನಿಸ್ಟ್” ಎಂದು ನಾಮಂಕಿತವಾದ ಚೀನಾ ದೇಶದ ಸರ್ವಾಧಿಕಾರಿ ಪ್ರಭುತ್ವದ ಊರುಗೋಲಿನ ಸಹಾಯದಿಂದ ಸ್ಥಾಪಿತವಾದ ಸ್ಥಳೀಯ ಬದಲಾಳು ಸರ್ಕಾರದ ವಿರುದ್ಧ ದಿಟ್ಟ ಹೋರಾಟ ನಡೆಸಿದ್ದಾರೆ. ತೆರೆಮರೆಯಲ್ಲಿ ನಿಂತು ತನಗೊಪ್ಪುವಂತೆ ಚುನಾವಣೆಗಳ ಫಲಿತಾಂಶಗಳನ್ನು ತಿರುಚುವ ಚೀನಾದ“ಕೆಂಪು” ಪ್ರಭುತ್ವಕ್ಕೆ ಪದೇ–ಪದೇ ಸಡ್ಡು ಹೊಡೆಯುವ ಅಲ್ಲಿನ ವಿಧ್ಯಾರ್ಥಿ ಯುವಜನತೆ, ಪೊಲೀಸರ ಎಲ್ಲಾ ದುರುಳತೆ, ಖಾತರಿ ಸಾವಿನ ಆತಂಕವಿದ್ದಾಗ್ಯು ಜನಪ್ರಿಯತೆಯ ಪ್ರಜಾತಾಂತ್ರಿಕ ಪಲಿತವನ್ನು ಕಾಯ್ದುಕೊಳ್ಳುವ ದಾರ್ಷ್ಟ್ಯತೆಯನ್ನು ಮತ್ತೊಮ್ಮೆ ಮಗದೊಮ್ಮೆ ತೋರುತ್ತಲೇ ಇದ್ದಾರೆ.
ಭಯದ ಅವಧಿ ಕೊನೆಗೊಂಡಿದೆ
ಭಾರತದ ಬಹುಪಾಲು ಜನಸಂಖ್ಯೆ ಅತಿದಾರಿದ್ರ್ಯವನ್ನು ಯಾತನೆಯನ್ನು ಹೊರವುದಲ್ಲದೆ, ಹಿಂದಿನ ಎಲ್ಲಾ “ಪ್ರಜಾತಾಂತ್ರಿಕ” ಮತ್ತು “ಜಾತ್ಯಾತೀತ” ಎಂದು ಕರೆಯಲಾಗುತ್ತಿದ್ದ ಎಲ್ಲಾ ಆಡಳಿತಗಳಡಿಯಲ್ಲೂ ನಿರಂತರವಾದ ಕೆಟ್ಟ ಪಂಥೀಯತೆ, ಧಾರ್ಮಿಕ ಕಲಹ ಮತ್ತು ನಿರ್ದಯ ಜಾತಿ ತಾರತಮ್ಯಕ್ಕೆ ಗುರಿಯಾಗಿತ್ತಲೇ ಬಂದಿದ್ದಾರೆ. ಆದರೆ ಅಂತಿಮವಾಗಿ ಈಗಿನ ನಿರಂಕುಶ ನರೇಂದ್ರ ಮೋದಿ ನೇತೃತ್ವದ ಆರು ವರುಷಗಳ ಬಹುಸಂಖ್ಯಾತ ಹಿಂದುತ್ವದ ಆಡಳಿತವು ನಿರ್ದಾಕ್ಷಿಣ್ಯವಾಗಿ ಮುಸ್ಲಿಂ ವಿರೋಧಿ, ಹಿಂದೂಗಳಲ್ಲದ ಎಲ್ಲಾ ಅಲ್ಪಸಂಖ್ಯಾತರ ವಿರೋಧಿ, ದಲಿತ ಮತ್ತು ಆದಿವಾಸಿ ವಿರೋಧಿ ಎಂಬುದನ್ನು ನಿಚ್ಚಳವಾಗಿ ಸಾಬೀತುಪಡಿಸಿದೆ. ಇದರಿಂದಾಗಿ ವಿಧಿಯಿಲ್ಲದೇ ಏನೇ ಅಪಾಯವಿರಲಿ ದಿಟ್ಟ ಹೋರಾಟಕ್ಕೆ ಮುಂದಾಗ ಬೇಕಾದ ಅನಿರ್ವಾಯತೆ ಅವರಲ್ಲಿ ತಲೆದೋರಿದೆ.
ಬಿಜೆಪಿಯ ಎಲ್ಲಾ ಸಂಚು ಮತ್ತು ಕುಕೃತ್ಯಗಳಿಗೂ ಬೆಂಬಲಕ್ಕೆ ನಿಂತ 95 ವರುಷದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್.ಎಸ್.ಎಸ್.) ದೇಶಾದ್ಯಂತ ೬೦ ಸಾವಿರ ಶಾಖೆಗಳನ್ನು ಹೊಂದಿದ್ದು ಸರಿಸುಮಾರು ೬೦ ಲಕ್ಷ ಕಾಲಾಳುಗಳನ್ನು ಹಲವು ದಶಕಗಳಿಂದ ವ್ಯವಸ್ಥಿತವಾಗಿ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಭಯದ ವಾತಾವರಣವನ್ನು ನಿರ್ಮಿಸುವ ಕಾರ್ಯದಲ್ಲಿ ತಮ್ಮ ಕೋಮುವಾದಿ ಮತ್ತು ಹಿಂಸಾತ್ಮಕ ಕಾರ್ಯಪ್ರಣಾಳಿಯ ಮೂಲಕ ಅನೂಚಾನವಾಗಿ ನಡೆಸುತ್ತಿದೆ. ಆರ್.ಎಸ್.ಎಸ್ ತಮ್ಮ ನಿಜ ಸ್ವರೂಪವನ್ನು ಇದುವರೆವಿಗೆ “ಸಾಂಸ್ಕೃತಿಕ ರಾಷ್ಟ್ರವಾದ”, “ಸಮಗ್ರ ಮಾನವತಾ ವಾದ” ಮತ್ತು “ಗಾಂಧಿ ಸಮಾಜವಾದ” ಎಂಬ ಪೊಳ್ಳು ಘೋಷಣೆಗಳಡಿ ಅವರ ಗೋಮುಖ ವ್ಯಾಘ್ರವನ್ನು ಮರೆಮಾಚುತ್ತಿದ್ದರು. ಇದುವರೆವಿಗೆ ತಮ್ಮದು ಕೇವಲ ಸಾಂಸ್ಕೃತಿಕ ಸಂಘಟನೆ ಮತ್ತು “ವಸುದೈವ ಕುಟುಂಬಕಂ”(ಜಗತ್ತೆಲ್ಲಾ ನನ್ನ ಕುಟುಂಬ) ಎಂಬ “ಉದಾತ್ತ” ಧೋರಣೆಯಡಿ ಎಲ್ಲರ ಒಳಿತಿಗಾಗಿ ಶ್ರಮಿಸುತ್ತೇವೆ ಎಂಬ ಹಸಿ ಸುಳ್ಳಿನ ಚಿತಾವಣೆಯ ಮೂಲಕ ತಮ್ಮ ಕೋಮುವಾದಿ ಬೇರುಗಳನ್ನು ಬಹು ಆಳಕ್ಕೆ ಇಳಿಸಿದ್ದರು. ಆದರೆ ಅವರ ಮುಖವಾಡ ಕಳಚಿ ಬಿದ್ದದ್ದು ಅವರದೇ ಗರಡಿಯಲ್ಲಿ ಪಳಗಿದ ಒಬ್ಬ ಪ್ರಖರ ಅನುಯಾಯಿ ಗುಜರಾತಿನ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಮತ್ತು ೨೦೧೪ರಲ್ಲಿ ಈ ದೇಶದ ಪ್ರಧಾನ ಮಂತ್ರಿ ಗದ್ದುಗೆಯೇರಿದಾಗ.
ಮೋದಿಯ ಸಾಧನೆ
ಗುಜರಾತ್ ಅವಧಿಯ ಮೋದಿಯ ಚರಿತ್ರೆ ಕೊಲೆಭರಿತ ಮತ್ತು ರಕ್ತದೋಕುಳಿಯ ದಾಖಲೆ ಎನ್ನಿಸಿಕೊಳ್ಳುತ್ತದೆ. ೧೯೯೨ರ ಬಾಬ್ರಿ ಮಸೀದಿ ಧ್ವಂಸದ ಸಮಯದಲ್ಲಿ ನಡೆದ ಹಾಗೂ ೨೦೦೨ರ ಗೋಧ್ರಾ ರೈಲು ಘಟನೆಯ ನಂತರ ವ್ಯವಸ್ಥಿತವಾಗಿ ನಡೆಸಲಾದ ಸಹಸ್ರಾರು ಮುಸ್ಲಿಮರ ನರಮೇಧ ಮತ್ತು ಎರಡನೆಯ ಬಾರಿ ೨೦೧೯ರಲ್ಲಿ ಮತ್ತೊಮ್ಮೆ ಪ್ರಧಾನಿಯಾದದ್ದು ಮತ್ತು ಅವರ ಕಟ್ಟಾ ಅನುಯಾಯಿ ಅಮಿತ್ ಶಾರನ್ನು ಗೃಹಮಂತ್ರಿಯಾಗಿಸಿದ್ದು ಎಲ್ಲಾ ಸಂಸದೀಯ ವಿಪಕ್ಷಗಳೂ, ಎಡಪಕ್ಷಗಳನ್ನೂ ಸೇರಿದಂತೆ ಎಲ್ಲರಲ್ಲೂ ಒಂದು ರೀತಿಯ ಅಸಹಾಯಕತೆಯ ಭಾವನೆ ತಲೆದೋರಿ ರಾಜಕೀಯ ನಿಷ್ಕ್ರಿಯತೆ ಮನೆಮಾಡಿತು.
ಮೋದಿ ಆಡಳಿತದ ಆರ್ಥಿಕ ಪ್ರಮಾದಗಳಾದ – ನೋಟು ರದ್ದತಿ ಮತ್ತು ಜಿ.ಎಸ್.ಟಿ. ಹಗರಣಗಳು ಯಾವುದೇ ನಿರ್ದಿಷ್ಟ ರಾಜಕೀಯ ಪ್ರತಿರೋಧವಿಲ್ಲದೆ ತಣ್ಣಗಾಯಿತು. ಇವು ಮಾತ್ರವಲ್ಲದೆ ತದನಂತರದ ನಿಂದಾತ್ಮಕವಾದ, ಅದುವರೆವಿಗೆ ಚಾಲ್ತಿಯಲ್ಲಿದ್ದ ಸಾಂವಿಧಾನಿಕ ಮಾನ್ಯತೆ ಪಡೆದಿದ್ದ ಜಮ್ಮು–ಕಾಶ್ಮೀರದ 370ರ ವಿಧಿಯನ್ನು ರದ್ದತಿ ಮಾಡಿದ್ದು ಸಹ ವಿಪಕ್ಷಗಳಿಂದ ಯಾವುದೇ ನಿರ್ಣಾಯಕ ಹಾಗೂ ದಿಟ್ಟ ವಿರೋಧ ವ್ಯಕ್ತವಾಗದೇ ಮಾನ್ಯತೆ ಗಳಿಸಿ ಜನಸಾಮಾನ್ಯರಲ್ಲಿ ಮುಖ್ಯವಾಗಿ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಹತಾಶೆ ಮತ್ತು ಕೋಪ ಮಡುಗಟ್ಟುವಂತೆ ಮಾಡಿ ಮೋದಿ ಸರ್ಕಾರದ ವಿರುದ್ಧ ಯುವಜನಾಂಗ ಪ್ರತಿರೋಧದ ಅವಕಾಶಕ್ಕಾಗಿ ಕಾಯುತ್ತಿತ್ತು.
ಆದರೆ ನಾವು ಕಳೆದ ಮೂರು ವಾರಗಳಿಂದ ವೀಕ್ಷಿಸುತ್ತಿರುವ ಅಭೂತಪೂರ್ವ ಜಾಗೃತ ಮುಸ್ಲಿಮರ, ವಿದ್ಯಾರ್ಥಿ ಯುವಜನರ, ಇದಲ್ಲದೆ ತುಳಿತಕ್ಕೊಳಗಾದ ಅಸಂಖ್ಯಾತ ಜನಾಂಗಗಳ ಮತ್ತು ಯುವ ಮಹಿಳೆಯರ ದಿಟ್ಟ ಹೋರಾಟ ಮನೋಭಾವ ಕಳೆದಾರು ವರುಷಗಳಿಂದ ಸಂಚಿತವಾಗಿ ಮಡುಗಟ್ಟಿದ್ದ, ಹತಾಶೆ ಮತ್ತು ಅಸಹಾಯಕತೆ ಇಂದು ಸಿಎಎಯನ್ನು ಹಿಮ್ಮೆಟ್ಟಿಯೇತೀರುವ ನಿರ್ಧಾರಕ್ಕೆ ನೂಕಿದೆ. ಇಂದು ಸ್ವಯಂ ಪ್ರೇರಿತರಾಗಿ ಮಿಲಿಯಾಂತರ ಸಾಮಾನ್ಯ ಜನ ಬೀದಿಗಿಳಿದು ಪ್ರತಿಭಟನೆಗಳನ್ನು ಹಮ್ಮಿ, ಪ್ರಾಣಾಪಾಯ ಮತ್ತು ಮಾರಣಾಂತಿಕ ಹಲ್ಲೆಗಳನ್ನು ಲೆಕ್ಕಿಸದೆ ಮುನ್ನುಗ್ಗುತ್ತಿರುವುದು ಭಯದ ಅವಧಿ ಮುಗಿದಿದೆ ಎಂಬುದರ ಪ್ರತೀಕ.
ನಾವು ಇತ್ತೀಚೆಗೆ ಸಿಎಎ ಬಗ್ಗೆ ಬರೆದಂತೆ “ಪೌರತ್ವ ತಿದ್ದುಪಡಿ ಕಾನೂನು” ಹಲವಾರು ರಾಷ್ಟ್ರೀಯತೆಗಳು ಮತ್ತು ಜನಪಂಗಡಗಳು ವ್ಯಗ್ರಗೊಂಡು ಹೋರಾಟದತ್ತ ಹೆಜ್ಜೆಗಳನ್ನಿಡುವಂತೆ ಪ್ರೇರೇಪಿಸಿದೆ. ಸಿಎಎಯನ್ನು ಮೊದಲಾಗಿಸಿದ ಬಿಜೆಪಿ ಅವರಿಗರಿವಿಲ್ಲದಂತೆಯೆ ಒಂದು ರಾಷ್ಟ್ರೀಯತೆಗಳ ಹುತ್ತಕ್ಕೆ ಕೈಹಾಕಿದ್ದಾರೆ. ಈ ವಿಶೇಷ ಪರಿಸ್ಥಿತಿ, ತಮ್ಮಗಳ ನಡುವಿನ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸಂಬಂಧಗಳ ಬೇರ್ಪಡೆ–ಪ್ರತ್ಯೇಕತೆಗಳನ್ನು ಪಕ್ಕಕ್ಕಿಟ್ಟು ಹೋರಾಟಕ್ಕೆ ಅಣಿಯಾಗುವಂತೆ ಮಾಡಿದೆ. ಹಲವು ರಾಷ್ಟ್ರೀಯತೆಗಳ ಬಂಧೀಖಾನೆಯೆಂದೆ ಬಣ್ಣಿಸಲಾಗುವ ಭಾರತದ ಜನತೆಗೆ ಬಹುಕಾಲದ ನಂತರ ಹೋರಾಡಲು ಎಲ್ಲರಿಗೂ ಸಂಬಂಧಿಸಿದ ಒಂದು ಸಾಮಾನ್ಯ ಕಾರಣ ಮತ್ತು ಸಾಮಾನ್ಯ ಶತ್ರು ದೊರಕಿದಂತಿದೆ.
ಸಾರ್ವತ್ರಿಕ ಮುಷ್ಕರ ಮತ್ತು ಅದು ಎದುರಿಸುತ್ತಿರುವ ಮಹತ್ತರ ಸವಾಲು
ಮೋದಿ–ಶಾರ ನಿರಂಕುಶ ಆಡಳಿತದ ವಿರುದ್ಧ ನಮ್ಮ ಪ್ರತಿಭಟನೆಗೆ ಮರುಧ್ವನಿಯಾಗಿ ಬೆಂಬಲ ನೀಡುವ ಎಲ್ಲಾ ಪ್ರಯತ್ನಗಳು ಶೋಷಿತ ವರ್ಗದ ಯಶಸ್ಸಿಗೆ ಅತ್ಯಗತ್ಯ. ಕೇಂದ್ರೀಯ ಕಾರ್ಮಿಕ ಸಂಘಗಳು ಕರೆಯಿತ್ತಿರುವ ಜನವರಿ ೮ರ ಸಾರ್ವತ್ರಿಕ ಹರತಾಳವೂ ದೇಶಾದ್ಯಂತ ಸಾಮಾನ್ಯ ಜನತೆ ಮತ್ತು ಅಲ್ಪಸಂಖ್ಯಾತರು ನಡೆಸುತ್ತಿರುವ ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ನಡೆಸುತ್ತಿರುವ ಸಾಮಾಜಿಕ ಮತ್ತು ರಾಜಕೀಯ ಹೋರಾಟವನ್ನು ಬೆಂಬಲಿಸಿ ಪ್ರತಿಧ್ವನಿಸಬೇಕು. ಕಾರ್ಮಿಕ ಸಂಘಗಳು, ನಿರ್ದಿಷ್ಟವಾಗಿ ಹೇಳುವುದಾದಲ್ಲಿ ಅದರ ನಾಯಕತ್ವಗಳು ಕೇವಲ ಬೆಂಬಲದ ಠರಾವುಗಳ “ಎಂದಿನಂತೆ ವ್ಯವಹಾರ”ಕ್ಕೆ ಸೀಮಿತಗೊಳಿಸದೆ ವರ್ಗದ ನಡುವೆ ಸಕ್ರಿಯ ಪ್ರಚಾರವನ್ನು ಕೈಗೊಂಡು, ಧಾರ್ಮಿಕ ಅಲ್ಪಸಂಖ್ಯಾತರ ಮತ್ತು ಇನ್ನಿತರರ ತಲೆಯ ಮೇಲೆ ಡೆಮೊಕ್ಲೆಸ್ ನ ಕತ್ತಿಯಂತೆ ತೂಗಾಡುತ್ತಿರುವ ಪೌರತ್ವ ತಿದ್ದುಪಡಿ ಕಾನೂನನ್ನು ನಿರ್ದಾಕ್ಷಿಣ್ಯವಾಗಿ ಮತ್ತು ಕಡುವಾಗಿ ವಿರೋಧಿಸುವತ್ತ ಸಕ್ರಿಯರಾಗಬೇಕು. ಹಲವು ವಿಶ್ಲೇಷಕರು ಭಯಪಡುವಂತೆ ಸಿಎಎ ಭಾರತದ “ವಿಭಜನೆ 2.0″ಯ ದುರ್ವಾಸನೆಯನ್ನು ಬೀರುತ್ತಿದೆ.
ಬಹುಪಾಲು ಸಂಘಟಿತ ಕಾರ್ಮಿಕರನ್ನೇ ಪ್ರತಿನಿಧಿಸುವ ಕಾರ್ಮಿಕ ಸಂಘಗಳು(ಒಟ್ಟು ಶ್ರಮಿಕರ ಪೈಕಿ ಕೇವಲ ೭%ಗಿಂತ ಕಡಿಮೆ ಇರುವ) ತಮ್ಮ ಸದಸ್ಯರ ಆರ್ಥಿಕ ಯೋಗಕ್ಷೇಮವನ್ನು ಬಲಪಡಿಸಲು ಮತ್ತು ರಕ್ಷಿಸಲು ಹೋರಾಡುತ್ತಿರುವುದು ಸ್ವಾಗತಾರ್ಹ ಮತ್ತು ಸರಿಯಷ್ಟೆ. ಆದರೆ ತಮ್ಮ ಸಂಘಟನೆಯನ್ನು ಸಂಘೇತರ ಹಾಗೂ ಅಸಂಘಟಿತ ಶ್ರಮಜೀವಿಗಳಿಗೆ ವಿಸ್ತರಿಸುವ ಐತಿಹಾಸಿಕ ಜವಾಬ್ದಾರಿಯೂ ಸಹ ಅವರ ಮೇಲಿದೆ. ವಾಸ್ತವವಾಗಿ ಪ್ರಸ್ತುತದಲ್ಲಿ ಸಿಎಎಯಿಂದಾಗಿ ತಮ್ಮ ಪೌರತ್ವಕ್ಕೆ ಕಂಟಕ ಬಂದಿದೆಯೆಂದು ಮನಗಂಡು ವಿರೋಧವನ್ನು ವ್ಯಕ್ತಪಡಿಸುವ ಬಹುಜನರು ಅಸಂಘಟಿತವಲಯದವರೆ.
ವಿಪರ್ಯಾಸವೆಂದರೆ ಕೆಲವು ಕಾರ್ಮಿಕ ಸಂಘಗಳ ನಾಯಕತ್ವಗಳು ಭಾರತಾದ್ಯಂತ ನಡೆಯುತ್ತಿರುವ ಮೋದಿ ವಿರೋಧಿ ಅಭೂತಪೂರ್ವ ಜನ ಚಳುವಳಿಗಳೊಂದಿಗೆ ಸೇರಿ ಐಕ್ಯ ಹೋರಾಟವನ್ನು ನಡೆಸುವಲ್ಲಿ ತೋರುತ್ತಿರುವ ಅಚ್ಚರಿಗೊಳಿಸುವ ಉದಾಸೀನತೆ! ಮೋದಿ ಸರ್ಕಾರ ಭಾರತದ ಎಲ್ಲಾ ಸಾಮಾಜಿಕ ಆರ್ಥಿಕ, ರಾಜಕೀಯ ರಂಗಗಳಲ್ಲೂ ಸಂಪೂರ್ಣವಾಗಿ ವಿಫಲಗೊಂಡಿದೆ, ಹೀಗಿರುವಾಗ ಕಾಡುತ್ತಿರುವ ಬೃಹತ್ತಾದ ನಿರುದ್ಯೋಗ, ಬರಗೆಟ್ಟ ಸಂಬಳ–ಕೂಲಿ, ಕೃಷಿ ಮತ್ತು ರೈತಾಪಿಗಳ ಉದ್ವಿಗ್ನ ಸಂಕಟ, ಗಗನಕ್ಕೇರಿದ ಬೆಲೆಗಳು ಮತ್ತು ಸಾರ್ವಜನಿಕ ವಲಯದ ಉದ್ಯೋಗ ಮತ್ತು ಸೇವೆಗಳು ಖಾಸಗೀಕರಣಗೊಳ್ಳುತ್ತಿರುವುದು, ದೇಶದ ಬಹುಪಾಲು ಜನರ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ. ಈ ರೀತಿಯ ಸಂದರ್ಭದಲ್ಲಿ ಈ ಮೇಲಿನ ವಿಷಯಗಳು ಸಂಘಟಿತ ಕಾರ್ಮಿಕ ವರ್ಗಗಳಿಗೆ ಮಾತ್ರ ಸೀಮಿತ ಮಾಡುವುದು ಗುರುತರವಾದ ತಪ್ಪಾಗುತ್ತದೆ.
ಇಬ್ಬಗೆಯ ಜವಾಬ್ದಾರಿ
ವಾಸ್ತವದಲ್ಲಿ, ಸಿಎಎ ಮತ್ತು ಎನ್.ಆರ್.ಸಿ ಹೋರಾಟಕ್ಕೆ ಒಂದು ಸ್ಪಷ್ಟ ದೃಷ್ಟಿಕೋನ ಹೊಂದಿದ ನಾಯಕತ್ವದ ಅಭಾವ ನಿಚ್ಚಳವಾಗಿ ಕಾಣುತ್ತದೆ. ಸಿಎಎ ಮತ್ತು ಎನ್.ಆರ್.ಸಿಗಳ ರದ್ಧತಿ ಬೇಡಿಕೆಗಳ ಈಡೇರಿಕೆ ಸಾಧ್ಯವಾಗಬೇಕಾದಲ್ಲಿ, ಮೋದಿ–ಬಿಜೆಪಿ ಆಡಳಿತವನ್ನು ಕೊನೆಗೊಳಿಸಬೇಕಾದುದು ಅನಿರ್ವಾಯ.
ಕೇವಲ ಒಂದು ಪ್ರಜ್ಞಾಪೂರ್ವಕ ಎಡಪಂಥೀಯ ಶಕ್ತಿ ಮತ್ತು ಅದಕ್ಕೆ ಬೆಂಬಲವಾಗಿ ನಿಂತ ದೊಡ್ಡ ಉದ್ಯಮಗಳಲ್ಲಿ, ಲಘು ಕೈಗಾರಿಕೆಗಳಲ್ಲಿ, ಕೃಷಿ ವಲಯದ ರೈತಾಪೀಗಳು, ಬ್ಯಾಂಕಿಂಗ್, ರೈಲು ಸೇವೆ, ಆರೋಗ್ಯ ಸೇವೆ, ಅಂಚೆ ಸೇವೆಗಳು ಮತ್ತು ಇನ್ನಿತರ ಪ್ರಮುಖ ಆರ್ಥಿಕ ವಲಯಗಳಲ್ಲಿ ಸಾಂದ್ರಿತವಾದ ಕಾರ್ಮಿಕ–ರೈತ ಅಪರಿಮಿತ ವರ್ಗ ಶಕ್ತಿ ಮಾತ್ರ ಈ ರೀತಿಯ ರಾಜಕೀಯ ಹೋರಾಟವನ್ನು ಯಶಸ್ವಿಯಾಗಿ ಮುನ್ನಡೆಸುವ ಸಾಧ್ಯತೆ ಹೊಂದಿದೆ. ಮೋದಿ–ಬಿಜೆಪಿಗಳ ಕೋಮುವಾದಿ ಆಡಳಿತಕ್ಕೆ ಸಡ್ಡು ಹೊಡೆಯಬಹುದಾದ ವರ್ಗಶಕ್ತಿ ಕಾರ್ಮಿಕ–ರೈತಾಪಿಗಳಿಗೆ ಮಾತ್ರ ಸಾಧ್ಯ. ಈ ರೀತಿಯಲ್ಲಿ ಕಾರ್ಮಿಕ ಸಂಘಗಳು ಮುನ್ನಡೆದಲ್ಲಿ ಒಟ್ಟಾರೆ ಶ್ರಮಿಜೀವಿಗಳ ವಿಶ್ವಾಸ ಮತ್ತು ನಂಬಿಕೆಗಳನ್ನು ಪಡೆದುಕೊಳ್ಳಬಹುದಾಗಿದೆ. ಅದಲ್ಲದೆ ಅಸಂಘಟಿತ ಶ್ರಮಿಕರು ಸಂಘಟಿತರಾಗದೇ ಉಳಿದಿರುವುದು ಅವರದ್ದೇ ಇಚ್ಛೆಯಿಂದಾಗಿ ಅಲ್ಲ, ಬದಲಾಗಿ ಯಾವುದೇ ಪ್ರಜ್ಞಾಪೂರ್ವಕ ಪ್ರಯತ್ನಗಳು ಇಲ್ಲವಾಗಿದ್ದರಿಂದ.
ಭಾರತದ ಕಾರ್ಮಿಕ ಸಂಘಗಳು ಮತ್ತು ಎಡಶಕ್ತಿಗಳು ಒಂದು ವಿಶಿಷ್ಟವಾದ ಮತ್ತು ಬೃಹತ್ತಾದ ದಿಟ್ಟ ಹೋರಾಟಗಳನ್ನು ನಡೆಸಿರುವ ಚರಿತ್ರೆಯಿದೆ. ಜನವರಿ ೮ರ ಹರತಾಳವನ್ನು ಆಯೋಜಿಸಿರುವ ಈ ಸಂದರ್ಭದಲ್ಲಿ ಕಾರ್ಮಿಕರ ಮತ್ತು ಜನ ಚಳುವಳಿಗಳ ಐಕ್ಯ ಹೋರಾಟದತ್ತ ನಿರ್ಣಾಯಕ ಹೆಜ್ಜೆಯನ್ನಿಟ್ಟಲ್ಲಿ ಇಡೀBಭಾರತದ ದೊಡ್ಡ ಬಂಡವಾಳಿಗಳ ಔದ್ಯೋಗಿಕ–ವಹೀವಾಟಿನ್ನು ಸ್ಥಗಿತಗೊಳಿಸುವುದು ಮಾತ್ರವಲ್ಲದೆ ಈ ದೇಶದ ಮುಂಬರುವ ಇತಿಹಾಸವನ್ನೇ ಬದಲಿಸ ಬಹುದಾದ ಸಾಧ್ಯತೆ ಈ ಹೋರಾಟದ ಗರ್ಭದಲ್ಲಡಗಿದೆ. ಈ ರೀತಿಯ ಸ್ಪಷ್ಟ ಸಾಧ್ಯತೆ ಹಿಂದಿನ ವರುಷಗಳ ಹಲವಾರು ಸಾರ್ವತ್ರಿಕ ಹರತಾಳಗಳಲ್ಲಿ ಮಿಲಿಯಾಂತರ ಜನರ ಭಾಗವಹಿಸುವಿಕೆಯಿಂದ ಮತ್ತು ಕಳೆದ 20೧೯ರ ಜನವರಿಯ ಎರಡು ದಿನದ ಮುಷ್ಕರದಲ್ಲಿ ಜಗತ್ತಿನಲ್ಲೇ ದಾಖಲೆಯೆನಿಸಿದ ೨೨೦ ಮಿಲಿಯನ್ ಕಾರ್ಮಿಕರ ಪಾಲ್ಗೊಳುವಿಕೆ ನಮ್ಮ, ಮೇಲೆ ಹೇಳಿದ ವರ್ಗ ವಿಶ್ವಾಸವನ್ನು ಖಾತರಿ ಪಡಿಸುತ್ತದೆ.
ಜನವರಿ 8
ಭಾರತದ 10 ಕೇಂದ್ರೀಯ ಕಾರ್ಮಿಕ ಸಂಘಗಳು ಜನವರಿ ೮ರಂದು ನಡೆಸಲಿರುವ ಸಾರ್ವತ್ರಿಕ ಕಾರ್ಮಿಕ ಮುಷ್ಕರ ಇದುವರೆವಿಗೂ ಕಾಣಸಿಗುವ ಎಲ್ಲ ದಾಖಲೆಗಳನ್ನು ಮುರಿವ ಸಾಧ್ಯತೆಯಿದ್ದು, ಒಂದು ಅಂದಾಜಿನ ಪ್ರಕಾರ 300 ಮಿಲಿಯನ್‌ಗೂ(30 ಕೋಟಿ) ಹೆಚ್ಚು ಕಾರ್ಮಿಕರು–ಶ್ರಮಜೀವಿಗಳು ಭಾಗವಹಿಸಲಿದ್ದಾರೆ. ಈ ಕೆಳಗೆ ಪಟ್ಟಿ ಮಾಡಲಾದ ಆರ್ಥಿಕ ಮತ್ತು ಕೈಗಾರಿಕಾ ಆಗ್ರಹಗಳು ಮೋದಿ ಮತ್ತು ಬಿಜೆಪಿಯ ಪ್ರತಿಗಾಮಿ ಆಡಳಿತದಡಿಯಲ್ಲಿ ದುಡಿಯುವ ಜನರ ಜೀವನ್ಮರಣ ವಿಷಯಗಳಾಗಿವೆ. ಬಿಜೆಪಿಯ ಒಲವು ಕೇವಲ ದೊಡ್ಡ ಬಂಡವಾಳಿ ಉದ್ಯಮಗಳನ್ನು ಓಲೈಸುವುದೇ ಆಗಿದ್ದು ನಿರ್ಲಜ್ಜ ಬಂಡವಾಳಶಾಹಿ ವರ್ಗಕ್ಕೆ ಕೆಂಪುಹಾಸು ಹಾಸುವ ಭಟ್ಟಂಗಿ ವೃಂದವೇ ಆಗಿದೆ.
ಕಾರ್ಮಿಕ ಸಂಘಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಆರ್ಥಿಕ ಹೋರಾಟ ಮತ್ತು ಅಸಂಖ್ಯಾತ ಜನಸಾಮಾನ್ಯರು, ತಮ್ಮ ಪೌರತ್ವ ಹಕ್ಕುಗಳಿಗೆ ಚ್ಯುತಿ ಬರದಂತೆ ನಡೆಸುತ್ತಿರುವ ಜನ ಚಳುವಳಿ ಪ್ರತ್ಯೇಕವಾಗಿ ಉಳಿಯಬೇಕಿಲ್ಲ. ಈ ಎರಡು ಹೋರಾಟ–ಚಳುವಳಿಗಳು, ಒಂದು ಸಮೀಚೀನ, ಐಕ್ಯ ಹೋರಾಟ ನಡೆಸಿದಲ್ಲಿ ಮೋದಿ–ಶಾ–ಬಿಜೆಪಿಗಳು ನೆಲಕಚ್ಚುವುದು ನಿಸ್ಸಂದೇಹ. ಈ ರೀತಿಯ ಯಥಾದೃಷ್ಟಿಯಲ್ಲಿ ಮಾತ್ರ ನಮ್ಮ ವರ್ಗ ಮತ್ತು ತುಳಿತಕ್ಕೊಳಗಾದ ಜನಪಂಗಡಗಳು ಹೋರಾಟಗಳ ಮೂಲಕ ಗಳಿಸಿದ ಹಕ್ಕು–ಸುಧಾರಣೆಗಳನ್ನು ಕಾಪಾಡಿಕೊಳ್ಳಬಹುದಾಗಿದೆ, ಅದಲ್ಲದೇ ಎಲ್ಲಾ ದಮನಿತ ವರ್ಗ–ಜಾತಿಗಳ ಮತ್ತು ಅಲ್ಪಸಂಖ್ಯಾತರ ಪೌರತ್ವವನ್ನು ಖಾತರಿ ಪಡೆಸಬಹುದಾಗಿದೆ.
ಕಾರ್ಮಿಕ ಸಂಘಗಳು ಸಾರ್ವತ್ರಿಕ ಹರತಾಳದ ಮೂಲಕ ಈ ದೇಶದ ಜನತೆಯ ಆರ್ಥಿಕ ಪರಿಸ್ಥಿತಿಯನ್ನು ಯೋಗ್ಯ ರೀತಿಯಲ್ಲಿ ಸುಧಾರಿಸಲು ಈ ಕೆಳಕಂಡ ಬೇಡಿಕೆಗಳನ್ನು ಆಗ್ರಹಿಸಿದ್ದಾರೆ. ಎಲ್ಲಾ ಜನಸಾಮಾನ್ಯರು ಮತ್ತು ಅಸಂಘಟಿತರು ಸಹ ಈ ಸಾರ್ವತ್ರಿಕ ಹರತಾಳವನ್ನು ಬೆಂಬಲಿಸುವುದು ನಮ್ಮ ಆದ್ಯ ಕರ್ತವ್ಯ.
* ದೇಶಾದ್ಯಂತ ಎಲ್ಲಾ ಶ್ರಮಜೀವಿಗಳಿಗೂ ರೂ.21000/-ಕನಿಷ್ಟ ವೇತನ–ಕೂಲಿ.
* ಎಲ್ಲರಿಗೂ ಪಿಂಚಣಿ ಸೌಲಭ್ಯ– ರಾಷ್ಟ್ರೀಯ ಪಿಂಚಣಿ ಯೋಜನೆ ಎಂಬ ಮೋಸ ಬೇಡ. ಹಿಂದಿದ್ದ ಪಿಂಚಣಿ ಯೋಜನೆಯ ಮರುಸ್ಥಾಪನೆ.
* ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮೇಲೆ ತಡೆ ಮತ್ತು ಸಾರ್ವತ್ರಿಕ ವಿತರಣಾ ವ್ಯವಸ್ಥೆಯ ಮೇಲೆ ಕಡು ನಿಯಂತ್ರಣ.
* ನೂತನ ಉದ್ಯೋಗಗಳ ನಿರ್ಮಾಣ ಮತ್ತು ಖಾಲಿಯಿರುವ ಹುದ್ದೆಗಳ ಭರ್ತಿ.
* ಕಾಂಟ್ರ್ಯಾಕ್ಟ್ ಉದ್ಯೋಗಿ ಮತ್ತು ಕಾರ್ಮಿಕರಿಗೆ ಖಾತರಿ ನಿರಂತರ ಉದ್ಯೋಗ.
* ಸಮಾನ ಕೆಲಸಕ್ಕೆ ಸಮಾನ ವೇತನ – ಅಸಂಘಟಿತ ವಲಯದ ಕಾರ್ಮಿಕರಿಗೆ ಬಲಯುತ ಕಲ್ಯಾಣ ಮಂಡಳಿಗಳು.
* ಮನರೇಗಾ ಮತ್ತು ಕೃಷಿಗೆ ಹೆಚ್ಚಿನ ಬಜೆಟ್.
* ಕಾರ್ಮಿಕ ಕಾನೂನುಗಳ ಯೋಜಿತ ಕೋಡಿಂಗ್ ಈ ಕೂಡಲೇ ಸ್ಥಗಿತವಾಗಲಿ.
* ನಿಗದಿತ ಅವಧಿಯ ಉದ್ಯೋಗಗಳ ಯೋಜನೆಯ ರದ್ಧತಿ ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣ ಬೇಡವೇ ಬೇಡ.
* ರೈಲ್ವೆ, ರಕ್ಷಣಾ ವಲಯ, ಕಲ್ಲಿದ್ದಲು ಮತ್ತು ಇನ್ನಿತರ ಸಾರ್ವಜನಿಕ ಉದ್ಯಮಗಳಲ್ಲಿ ಶೇ.೧೦೦% ವಿದೇಶಿ ಬಂಡವಾಳದ ಹೂಡಿಕೆ ಸ್ಥಗಿತಗೊಳ್ಳಲಿ. ಎಲ್ಲಾ ಬ್ಯಾಂಕ್ ವಿಲೀನಗಳನ್ನು ಸ್ಥಗಿತಗೊಳಿಸಿ.
ಈ ಮೇಲೆ ಪಟ್ಟಿ ಮಾಡಿದ ಆರ್ಥಿಕ ಬೇಡಿಕೆಗಳೊಂದಿಗೆ ಇದೀಗ ಹೊಸದಾಗಿ ಕಾನೂನಾದ ಸಿಎಎ ವಿರುದ್ಧ ಐಕ್ಯ ಹೋರಾಟ ಅತ್ಯವಶ್ಯಕ. ಈ ಎರಡೂ ಬೇಡಿಕೆಗಳ ಮಿಳಿತ ಎಲ್ಲರನ್ನೂ ಒಗ್ಗೂಡಿಸಿ ಹೋರಾಟಕ್ಕೆ ಅಣಿಮಾಡುವ ಕಾರ್ಯಕ್ರಮವೊಂದು ಅತಿ ವೇಗವಾಗಿ ನಮ್ಮೆಲ್ಲರ ಭವಿಷ್ಯವನ್ನು ಸುಂದರವಾಗಿ ರೂಪಿಸಬಹುದಾದ ಬಂಡವಾಳಶಾಹಿ ವಿರೋಧಿ ಮತ್ತು ಜಮೀನ್ದಾರಿ ಪಳೆಯುಳಿಕೆಗಳಿಗೆ ಚರಮಗೀತೆ ಹಾಡಿ ಭಾರತವನ್ನು ಒಂದು ಕಾರ್ಮಿಕ ಜನತೆಯ, ರೈತಾಪಿಗಳ, ಯುವಜನರ ಮತ್ತು ಅಸಂಘಟಿತ ಬಡಜನಗಳಿಂದ ನಿರ್ಮಿತವಾದ ಪ್ರಜಾತಾಂತ್ರಿಕ ಸಮಾಜವಾದಿ ನೀತಿಗಳ ಒಂದು ಬೃಹತ್ ಸಂಘಟನೆಯನ್ನು ನಿರ್ಮಾಣ ಮಾಡಬಹುದು ಮತ್ತು ಜನ ಸಾಮಾನ್ಯರ ಹಾಗೂ ಶ್ರಮಜೀವಿಗಳ ನೇತೃತ್ವದ ಸಮಾಜವಾದಿ ವ್ಯವಸ್ಥಿತ ಆರ್ಥಿಕ ಸಮಾಜವನ್ನು ಎಲ್ಲರ ಒಳಿತಿಗಾಗಿ ನಿರ್ಮಿಸಬಹುದು.
* ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ ಯೋಜನೆಗಳು ತಿಪ್ಪೆ ಸೇರಲಿ.
* ಪ್ರತಿಯೊಬ್ಬ ಶರಣಾರ್ತಿ/ವಲಸಿಗರಿಗೂ ಪೌರತ್ವದ ಹಕ್ಕು.
* ಯಾರೊಬ್ಬರ ಗಡೀಪಾರು ಸಲ್ಲ. ಎಲ್ಲಾ ಜನರ ಸಾಂವಿಧಾನಿಕ ಮತ್ತು ಅದರಾಚೆಯ ಹಕ್ಕುಗಳನ್ನು ರಕ್ಷಿಸಿ.
* ಯಾವುದೇ ಧರ್ಮಾಚರಣೆಯ ಸ್ವಾತಂತ್ರ್ಯ ಮತ್ತು ಎಲ್ಲಾ ಧರ್ಮಗಳನ್ನು ನಿರಾಕರಿಸಿ ಮಾನವೀಯತೆಯನ್ನು ಆಚರಿಸುವ ಸ್ವಾತಂತ್ರ್ಯ.
* ಮುಸ್ಲಿಂ ಸಮುದಾಯದ ಮೇಲಾಗುವ ಎಲ್ಲಾ ಶೋಷಣೆ–ದಬ್ಬಾಳಿಕೆ ನಿಲ್ಲಲಿ. ಇಸ್ಲಾಮೋಫೋಬಿಯಾಗೆ ಧಿಕ್ಕಾರ.
* ಹೋರಾಟಗಾರರ ಮೇಲೆ ಪೊಲೀಸರ ಹಲ್ಲೆಗಳು ನಿಲ್ಲಲಿ ಮತ್ತು ಪೊಲೀಸೇತರ ಗೂಂಡಾಗಳಿಗೆ ಧಿಕ್ಕಾರ. ವಾಕ್ ಸ್ವಾತಂತ್ರ್ಯ ಮತ್ತು ವಿರೋಧದ ಪ್ರತಿಪಾದನೆಯ ಜನತಾಂತ್ರಿಕ ಹಕ್ಕು ಎಲ್ಲರಿಗೂ ಇರಲಿ.
* ಎಲ್ಲಾ ದಮನಿತ ರಾಷ್ಟ್ರೀಯತೆಗಳಿಗೂ ಆತ್ಮನಿರ್ಣಯದ ಹಕ್ಕು ಬೇಕೇ ಬೇಕು.
* ಭಾರತ ಉಪಖಂಡದ ಸಮಾಜವಾದಿ ರಾಷ್ಟ್ರಗಳ ಮಹಾಒಕ್ಕೂಟಕ್ಕಾಗಿ.