ಒಗ್ಗೂಡಿದ ಕಾರ್ಮಿಕರ ಹೋರಾಟಕ್ಕೆ ಸೋಲೆಂಬುದಿಲ್ಲ!
ಭಾರತದ ಶ್ರಮಜೀವಿಗಳು ಮತ್ತೊಮ್ಮೆ ಸಾರ್ವತ್ರಿಕ ಮುಷ್ಕರದ ಮೂಲಕ ಈ ದೇಶದ ಬಂಡವಾಳಶಾಹಿ ಆಡಳಿತ ವ್ಯವಸ್ಥೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಬೀದಿಗಿಳಿದಿದ್ದಾರೆ. “ಸುಧಾರಣೆಗಳು” ಎಂಬ ಮೋಸದ ಶೀರ್ಷಿಕೆಯಡಿ ಜಾರಿಯಾದ ನವ ಉದಾರೀಕರಣ ನೀತಿಗಳು, ಅಂದಿನಿಂದ ಇಂದಿನವರೆಗೂ ಈ ದೇಶದ ಮತ್ತು ವಿದೇಶದ ಬಂಡವಾಳಿಗರ ಗುಲಾಮಗಿರಿ ಮಾಡುತ್ತಾ ಭಾರತದ ೯೯% ಜನರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳನ್ನು ಅಧೋಗತಿ ಮುಟ್ಟಿಸಿವೆ. ಕಳೆದ ಎರಡುವರೆ ದಶಕಗಳಲ್ಲಿ ೧೯ನೇ ಬಾರಿ ನಡೆಯುತ್ತಿರುವ ಈ ಜನರಲ್ ಸ್ಟ್ರೈಕ್, ದೊಡ್ಡ ಬಂಡವಾಳಿಗರ ಈ ಸಂಚನ್ನು ನಿರ್ಣಾಯಕವಾಗಿ ಹಿಮ್ಮೆಟ್ಟಲು ಕಾರ್ಮಿಕ ಜನಸ್ತೋಮವನ್ನು ಅಣಿಗೊಳಿಸಿದೆ.