ವೋಲ್ವೋ : ಮತ್ತೋಮ್ಮೆ ಕಾರ್ಮಿಕರ ಮುಷ್ಕರ

ಆಡಳಿತ ಮಂಡಳಿಯ ಜೊತೆ ರಾಜ್ಯ ಬಿ.ಜೆ.ಪಿ. ಸರ್ಕಾರ ನೇರ ಶಾಮೀಲು

ವೊಲ್ವೋ ಬಸ್ಸ್ ಇಂಡಿಯಾ ಪ್ರೈ.ಲಿ.ನ ಆಡಳಿತ ಮಂಡಳಿಯ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸತತ 72 ದಿನಗಳ ಕಾಲ ನಡೆದ ಮುಷ್ಕರವನ್ನು ಕಾರ್ಮಿಕರು ತಾತ್ಕಾಲಿಕವಾಗಿ ಹಿಂತೆಗೆದು ಕೊಂಡಿದ್ದಾರೆ. ಒಂದು ವರುಷದ ಹಿಂದೆಯು ಸಹ ಇದೇ ಬೇಡಿಕೆಗಳಿಗಾಗಿ ನಡೆದ 22 ದಿನಗಳ ಮುಷ್ಕರ, ಕಾರ್ಮಿಕರ ಆಯೋಗದ ಸಂಧಾನದ ಮುಖಾಂತರ ಕೊನೆಗೊಂಡಿತ್ತು.

ಪ್ರಾರಂಭವಾಗಿ ಮೂರುವರೆ ವರ್ಷಗಳೂ ಕಳೆದರೂ ಸ್ವೀಡನ್ನಿನ ಈ ಬಹು ರಾಷ್ಟ್ರೀಯ ಕಂಪನಿ-ವೊಲ್ವೋ ಬಸಸ್ ಇಂಡಿಯಾ ಪ್ರೈ .ಲಿಮಿಟೆಡ್ ಇಂದಿಗೂ ಕಾರ್ಮಿಕರಿಗೆ ಮೂಲಭೂತ ಹಕ್ಕುಗಳನ್ನು ನೀಡಲು ಹಿಂದೇಟು ಹಾಕುತ್ತಿದೆ. 650 ಕಾರ್ಮಿಕರಿರುವ ಈ ಕಂಪನಿಯಲ್ಲಿ 250 ಕಾರ್ಮಿಕರು ಖಾಯಂ ನೌಕರರಿದ್ದು ಉಳಿದವರು ತರಬೇತಿ ಮತ್ತು ಪರೀಕ್ಷಾ ಅವಧಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

72 ದಿನಗಳ ಕಾಲ ಕಾರ್ಮಿಕರು ಮುಷ್ಕರ ಹೂಡಿದರೂ ಕ್ಯಾರೆ ಎನ್ನದ ಆಡಳಿತ ಮಂಡಳಿ, ಹಿಂದೆ ಅನುಸರಿಸಿದ ರೀತಿಯಲ್ಲೇ ಗುತ್ತಿಗೆ ಆಧಾರದಲ್ಲಿ ದಿನಗೂಲಿ ಕಾರ್ಮಿಕರ ಕೈಯಲ್ಲಿ ದುಡಿಸಿಕೊಂಡು ತನ್ನ ಚಾಳಿಯನ್ನು ಮುಂದುವರಿಸಿತು.

72 ದಿನಗಳಲ್ಲಿ ಪ್ರತಿಭಟನೆ, ಹಾಗೂ ರಾಜ್ಯಪಾಲರಿಗೆ, ಕಾರ್ಮಿಕ ಸಚಿವರುಗಳಿಗೆ, ಮುಖ್ಯಮಂತ್ರಿಗಳಿಗೆ ಮನವಿ ಪತ್ರಗಳನ್ನು ನೀಡಿದರೂ ನಿರಾಶದಾಯಕ ಫಲಿತಾಂಶವನ್ನು ಕಾರ್ಮಿಕರ ಎದುರಿಸಬೇಕಾಯಿತು. ಸಂಬಂಧ ಪಟ್ಟ ಅಧಿಕಾರಿಗಳಾಗಲಿ, ಸಚಿವರಾಗಲಿ ಖುದ್ದು ಭೇಟಿ ನೀಡಲಿಲ್ಲ. ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲೂ ಸಹ ಜನಪ್ರತಿನಿಧಿಗಳಿಗೆ ಪುರುಸೊತ್ತಿರಲ್ಲಿಲ್ಲ.

ಆದರೆ ಬೆಂಗಳೂರಿನಲ್ಲೇ ನಡೆದ ವೋಲ್ವೋ ಕಂಪನಿಯ ದಶಮಾನೋತ್ಸವ ಸಂಭ್ರಮಾಚರಣೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ, ಸಾರಿಗೆ ಸಚಿವ ಆರ್. ಅಶೋಕ್, ಕಾರ್ಮಿಕ ಸಚಿವ ಬಚ್ಚೆಗೌಡ ಭಾಗವಹಿಸಿ ಕಂಪನಿಗೆ ಇನ್ನೂ ಮುಂದೆಯೂ ಇದೇ ರೀತಿಯ ಸಕಲ ಸೌಲಭ್ಯ ರಿಯಾಯತಿಗಳನ್ನು ಮುಂದುವರಿಸುವ ಆಶ್ವಾಸನೆಯನ್ನು ನೀಡಿಬಂದಿದ್ದಾರೆ.

ಇದನ್ನು ನೋಡಿದರೆ ರಾಜ್ಯ ಸರ್ಕಾರ ಆಡಳಿತ ಮಂಡಳಿಯ ಜೊತೆ ಶಾಮೀಲಾಗಿರುವುದು ಜಗಜ್ಜಾಹೀರಾಗಿದೆ.

ವೋಲ್ವೋ ಬಸ್ಸ್ ಕಾರ್ಮಿಕರ ಹೋರಾಟಕ್ಕೆ ಬೆಂಗಳೂರಿನ ಇನ್ನಿತರ ಕಾರ್ಖಾನೆಗಳ ಕಾರ್ಮಿಕರು ಬಹುದೊಡ್ಡ ಸಂಖ್ಯೆಯಲ್ಲಿ ಬೆಂಬಲ ನೀಡಿದ್ದರೆ, ಕಂಪನಿ ಮಾಲಿಕ ವರ್ಗವನ್ನು ಮಣಿಸಬಹುದಾಗಿತ್ತು. ಅಲ್ಲದೇ ಬಂಡವಾಳಿಗರ ಪರವಾಗಿರುವ ಸರ್ಕಾರಕ್ಕೂ ಸಹ ಬಿಸಿಯನ್ನು ಮುಟ್ಟಿಸಬಹುದಾಗಿತ್ತು.

ಆದ್ದರಿಂದ ಇದು ಅಂತ್ಯವಲ್ಲ, ಆರಂಭವಷ್ಟೇ. ಹಿಂದಿನ ತಪ್ಪುಗಳನ್ನು ಮಾಡದೇ ಮುಂದಿನ ಹೋರಾಟಕ್ಕೆ ಕಾರ್ಮಿಕರು ಸಜ್ಜಾಗಬೇಕಿದೆ. ಈ ನಿಟ್ಟಿನಲ್ಲಿ ನೈಜ ಬೃಹತ್ ಕಾರ್ಮಿಕರು ಸಂಘಟನೆಯ ನಿರ್ಮಾಣದ ಅವಶ್ಯಕತೆಯಿದ್ದು ಅದರ ನೇತೃತ್ವದಲ್ಲಿ ಕಾರ್ಮಿಕರು ಹೋರಾಟಕ್ಕೆ ಧುಮಕಬೇಕಾಗಿದೆ.

– ದುಡಿಯೋರ ಹೋರಾಟದ ವರಧಿ