ರ್ಥಿಕ ಉನ್ನತಿಯ ಸನ್ನಿ ಹಿಡಿದಿರುವ ಭಾರತದ ಆಳುವ ವರ್ಗ ಮತ್ತು ಅವರ ಬಾಲಂಗೋಚಿ ಭಟ್ಟಂಗಿಗಳು ಮನಮೋಹನ್ ಸಿಂಗ್ರ ಆಡಳಿತದ 2ನೇಯ ಆವೃತ್ತಿ 2009 ಆವತರಣಿಕೆಯಾದ ಮೇಲೆ ಭಾರತ ಸೂಪರ್ ಪವರ್ ಆಗುವ ಮನಸ್ಸಿನ ಮಂಡಿಗೆಯನ್ನು ದೇಶದ ಎಲ್ಲಾ ಮೇಲ್ ಮಧ್ಯಮ ವರ್ಗದವರಿಗೆ ಉಣಬಡಿಸುತ್ತಿದ್ದಾರೆ.
ಮನಮೋಹನ್-ಚಿದಂಬರಂ-ಪ್ರಣಬ್ ಮತ್ತು ಮಾಂಟೆಕ್ ಚತುಷ್ಪಾದ ಜೀವಿಗಳು ಶೇ.8-ಶೇ.9ರ ಅಭಿವೃದ್ಧಿ ಅಂಕಿಗಳ ದೊಂಬರಾಟಕ್ಕೆ ಈ ದೇಶದ ಸಾಮಾನ್ಯ ಬಹುಜನರ ಭವಿಷ್ಯವನ್ನೇ ಜೂಜಾಟದಲ್ಲಿ ತೊಡಗಿಸಿದ್ದಾರೆ.
2020ರ ಹೊತ್ತಿಗೆ ಭಾರತವನ್ನು ಬಂಡವಾಳಶಾಹಿ ಅಗ್ರ ಗುಂಪಿಗೆ ಎಳೆದೊಯ್ಯುವ ಪಣತೊಟ್ಟಿರುವ ಈ ಮೇಲಿನ ಮೇಧಾವಿಗಳು, ಬಹುರಾಷ್ಟ್ರೀಯ ಕಂಪನಿಗಳ ಹಾಗೂ ದೇಶೀಯ ಬೃಹತ್ ಉದ್ದಿಮೆದಾರರ ಕೈ-ಕೂಲಿಗಳಂತೆ ವರ್ತಿಸುತ್ತಾ, ಜನಸಾಮಾನ್ಯರ, ಪರಿಸರದ ಮತ್ತು ಸಾಮಾಜಿಕ ಭದ್ರತೆಯ ಕಾಳಜಿಗಳನ್ನು ಗಾಳಿಗೆ ತೂರಿ ಅಣುಶಕ್ತಿ ಭಾರತಕ್ಕೆ ಅನಿವಾರ್ಯವೆಂಬ ರೀತಿಯಲ್ಲಿ ಇಡೀ ಸರ್ಕಾರದ ಯಂತ್ರವನ್ನು ಮತ್ತು ಭಟ್ಟಂಗಿ ರಾಜಕಾರಣಿ, (ಅ)ವಿಜ್ಞಾನಿ ಮತ್ತು ಎಡಬಿಡಂಗಿ “ಬುದ್ಧಿ” ಜೀವಿಗಳನ್ನು ಬಾಡಿಗೆಗೆ ಪಡೆದು ಅಣು ಉದ್ಯಮದ ಪರವಾದ ಪ್ರಚಾರಾಂದೋಲನವನ್ನು ಪ್ರಾರಂಭಿಸಿದ್ದಾರೆ.
ಇತ್ತೀಚಿಗೆ, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಕೂಡಂಕುಳಂ ಅಣುಸ್ಥಾವರ ಸ್ಥಾಪನೆಯ ಕುರಿತು ವಿವಾದ ಹಾಗೂ ಅಲ್ಲಿನ ಸ್ಥಳೀಯರ ಅಣು ವಿರೋಧಿ ದಿಟ್ಟ ಹೋರಾಟ ಭಾರತದ ಆಳುವ ವರ್ಗಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ.
ಕಳೆದ ಕಾಂಗ್ರೇಸ್ಸ್ನ ಯುಪಿಎ-1ರ ಆಡಳಿತ ಸಮಯದಲ್ಲಿ ಅತ್ಯಂತ ವಿವಾದಾಸ್ಪದ ಒಪ್ಪಂದವಾಗಿದ್ದ ಅಮೇರಿಕಾದೊಂದಿಗಿನ 123 ಒಪ್ಪಂದದ ಕಾಳಸರ್ಪ ಇದೀಗ ತನ್ನ ಹೆಡೆಬಿಚ್ಚಿ ಆ ಒಪ್ಪಂದದ ನಗ್ನ ಸತ್ಯದ ನರ್ತನವನ್ನು ಆರಂಭಿಸಿದೆ.
ಸೋವಿಯತ್ ಯೂನಿಯನ್ ಹಾಗೂ ಅಮೇರಿಕಾ ಸಾಮ್ರಾಜ್ಯಶಾಹಿಯ ಶೀತಲ ಯುದ್ಧದ ಸಂದರ್ಭದಲ್ಲಿ ಸೋವಿಯತ್ ದೇಶಗಳ ತಂತ್ರಜ್ಞಾನವನ್ನಾಧರಿಸಿದ ಅಣು ಸ್ಥಾವರಗಳು ನರೋರಾ, ರಾವತ್ಭಟ, ಕಕ್ರಪಾರ್, ತಾರಾಪುರ್, ಕೈಗಾ ಮತ್ತು ಕಲ್ಪಾಕಂಗಳಲ್ಲಿ ಸ್ಥಾಪನೆಗೊಂಡು ದೇಶದ 6 ಕಡೆಗಳಲ್ಲಿ 8080 ಮೆ.ವಾ. ವಿದ್ಯುತ್ತ್ನ್ನು ತಯಾರಿಸುತ್ತಿದೆ.
2010ರ ನಂತರ ಅಮೇರಿಕದೊಂದಿಗಿನ 123-ಅಣು ಒಪ್ಪಂದ ಜಾರಿಗೆ ಬಂದು ಇನ್ನು 6 ಅಣುಸ್ಥಾವರಗಳು ಹರಿಯಾಣದ ಕುಮ್ಹರಿಯಾ, ಪಶ್ಚಿಮ ಬಂಗಾಳದ ಹರಿಪುರ, ಮಧ್ಯಪ್ರದೇಶದ ಬಾರ್ಗಿ, ಗುಜರಾತಿನ ಮಿಥಿ ವಿರ್ಧಿ, ಮಹಾರಾಷ್ಟ್ರದ ಜೈತಾಪುರ್ ಮತ್ತು ತಮಿಳುನಾಡಿನ ಕೂಡಂಕುಳಂಗಳಲ್ಲಿ ಸ್ಥಾಪನೆಗೊಂಡು ವಿದ್ಯುತ್ತ್ ತಯಾರು ಮಾಡುವ ಹುನ್ನಾರ ನಡೆದಿದೆ.
ಇವೆಲ್ಲವೂ ಯುವಜನರಿಗೆ ಉದ್ಯೋಗ, ಕತ್ತಲಿಗೆ ಬೆಳಕು, ಬಡಜನರಿಗೆ ಬಾಳು ಎಂದೆಲ್ಲಾ ಹುಯಿಲೆಬ್ಬಿಸುತ್ತಿದ್ದರೂ ಈ ಚಿತಾವಣೆಯಲ್ಲಿ ರಾಷ್ಟ್ರೀಯ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಲಾಭಕೋರ ಪ್ರವೃತ್ತಿಯ ದುರ್ನಾತ ಸೂಸುತ್ತಿದೆಯೆಂಬುದು ಎಲ್ಲಾರಿಗೂ ತಿಳಿದ ವಿಷಯವೇ.
ದಕ್ಷಿಣ ಭಾರತದ, ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಕೂಡಂಕುಳಂ ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ವ್ಯವಸಾಯಿಗಳು, ಮೀನುಗಾರ ಕುಟುಂಬಗಳು ಮತ್ತು ಯುವಜನರು ಅಣುಸ್ಥಾವರದ ಸ್ಥಾಪನೆಯನ್ನು ಮತ್ತು ಆ ಮೂಲದಿಂದ ವಿದ್ಯುತ್ತ್ ತಯಾರಿಕೆಯನ್ನು ಶತಾಯಃ ಗತಾಯಃ ಒಪ್ಪಿಕೊಳ್ಳವೆಂಬ ಧೃಡ ನಿಲುವನ್ನು ತಾಳಿದ್ದಾರೆ.
ಈಗಾಗಲೇ 100 ದಿನ ತುಂಬಿರುವ ಈ ಜನ ಹೋರಾಟಕ್ಕೆ ತಮಿಳುನಾಡಿನಾದ್ಯಂತ ಪಕ್ಷಾತೀತವಾದ ಬೆಂಬಲ ದೊರಕಿದೆ. ಪ್ರತಿನಿತ್ಯ 25 ಸಾವಿರದಿಂದ 35 ಸಾವಿರದವರೆಗೆ ಹೋರಾಟಗಾರರು ಸರದಿ ಉಪವಾಸದಲ್ಲಿ ತೊಡಗಿದ್ದು ಹೋರಾಟದ ಚರಿತ್ರೆಗೆ ಹೊಸ ಪುಟಗಳು ದಾಖಾಲಾಗಿವೆ. ಸಾಮಾನ್ಯವಾಗಿ ಅಧಿಕಾರವನ್ನು ಜನರ ಅಭಿಪ್ರಾಯವನ್ನು ದಮನ ಮಾಡಲು ಉಪಯೋಗಿಸುವ ಜಯಲಲಿತಾರ ಸರ್ಕಾರ ಕೂಡ ಹೋರಾಟದ ತೀವ್ರತೆಯನ್ನು ಕಡೆಗಣಿಸಲಾಗದೆ, ತಮಿಳುನಾಡಿನ ವಿಧಾನಸಭೆಯಲ್ಲಿ ಕೂಡಂಕುಳಂ ಅಣುಸ್ಥಾವರದ ಸ್ಥಾಪನೆಯನ್ನು ಕೈ ಬಿಡಬೇಕೆಂಬ ನಿರ್ಣಯವೊಂದನ್ನು ಅಂಗೀಕರಿಸಿದೆ.
ಕೇಂದ್ರ ಸಕರ್ಾರದ ಪಟ್ಟಭದ್ರ ಹಿತಾಸಕ್ತಿಗಳಿಗೆ ಪ್ರಜಾತಂತ್ರದ ಪದಗಳು ಪರಿಚಯವಿದೆಯೇ ಹೊರತು ಅದರ ಪಾಲನೆಯ ಪಾಠ ಅವರು ಕಲಿತಿಲ್ಲ. ಹೀಗಾಗಿ ಸಾಮ-ದಾನ-ದಂಡ ಮತ್ತು ಭೇದದ ನೀತಿಯನ್ನು ಅನುಸರಿಸಿ ಭಟ್ಟಂಗಿ ವಿಜ್ಞಾನಿಗಳನ್ನು ಛೂ ಬಿಟ್ಟು ಹೋರಾಟವನ್ನು ಒಡೆಯುವ ಮತ್ತು ಮೊಟಕು ಗೊಳಿಸುವ ಕುತಂತ್ರಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
ಭಾರತ ರಾಜಕೀಯ ಚರಿತ್ರೆಯ ಆಕಸ್ಮಿಕವೆಂದು ಗುರುತಿಸ ಬಹುದಾದ ಮಾಜಿ ರಾಷ್ಟ್ರಪತಿ, ಕ್ಯಾತೆ ಅವಿಜ್ಞಾನಿ, ಕೋಡಂಗಿ ಕಲಾಮರನ್ನು ದೊಂಬರಾಟಕ್ಕೆ ಎಳೆದು ಅಭಿಪ್ರಾಯ ಭೇದವನ್ನು ಸೃಷ್ಟಿಸಿ ಹೋರಾಟವನ್ನು ದಾರಿ ತಪ್ಪುವಂತೆ ಮಾಡುತ್ತಿದೆ.
ಆದರೆ ಜಪಾನಿನ ಫಕುಶಿಮಾ ಅಣುಸ್ಥಾವರ ಸ್ಪೋಟದ ನಂತರ ಜನರ ಆತಂಕ ಅರಿವುಗಳು ಹೆಚ್ಚಾಗಿ ಪರಿಸರ ಮತ್ತು ಅಣು ಅಪಾಯಗಳ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚೆತ್ತ ಪ್ರಜ್ಞೆಯಿದೆ. ಇಂದು ತಮಿಳುನಾಡಿನಲ್ಲಂತೂ ಅಣುಶಕ್ತಿಯ ಪರ-ವಿರೋಧ ಜಿಜ್ಞಾಸೆ ಚರ್ಚೆಗಳು ಭರದಿಂದ ಸಾಗಿದ್ದು ನಾಡಿನಾದ್ಯಾಂತ ‘ಕೂಡಂಕುಳಂ ರಕ್ಷಿಸಿ’ ಎಂಬ ಚಳುವಳಿ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ.
ಕೂಡಂಕುಳಂ ಜನರ ದಿಟ್ಟ ಅಣುವಿರೋಧಿ ಹೋರಾಟದಿಂದ ಪ್ರಭಾವಿತಗೊಂಡು ಬೇರೆಲ್ಲಾ ಅಣು ಸ್ಥಾವರ ನೆಲೆಗಳಲ್ಲೂ ಹೋರಾಟದ ಪ್ರಯತ್ನಗಳು ಶುರುವಾಗಿದೆ. ಇತ್ತೀಚೆಗೆ ತಿರುವನಂತಪುರಂನಲ್ಲಿ ನಡೆದ “ಪೀಪಲ್ಸ್ ಸಾರ್ಕ್” ಸಮಾವೇಶದಲ್ಲಿ ಅಣುಶಕ್ತಿ ಪರ-ವಿರೋಧದ ಬಣಗಳ ನಡುವೆ ಕಾವೇರಿದ ಚರ್ಚೆ ನಡೆದಿದ್ದು ಹೋರಾಟಕ್ಕೆ ಮತ್ತಷ್ಟು ಮೊನಚು ತಂದಿದೆ.
ಕಳೆದ ಶತಮಾನದ ಹಿರೋಶಿಮಾ-ನಾಗಾಸಾಕಿ ಯುದ್ದ ದುರಂತಗಳಾಗಲಿ, ತ್ರೀ-ಮೈಲ್ ಐಲ್ಯಾಂಡ್, ಚೆರ್ನೋಬ್ಯ್ಲ್ ಮತ್ತು ಇತ್ತೀಚಿನ ಫುಕುಶಿಮಾ ಅಣು ಸ್ಪೋಟಗಳು ಶತಮಾನಗಳವರೆಗೆ ಮರೆಯಲಾಗದ ದುರಂತ ಹಾಗೂ ಎಚ್ಚರಿಕೆಯ ಘಂಟೆಗಳು.
ಅಣು ಪರ ವಿಜ್ಞಾನಿಗಳ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಅವೈಜ್ಞಾನಿಕ ತರ್ಕಗಳೇನೆ ಇರಲಿ, ಅಣು ವಿಕಿರಣ, ಮತ್ತು ಅಣು ತ್ಯಾಜ್ಯಗಳ ವಿಲೇವಾರಿಗೆ ಯಾವುದೇ ತಂತ್ರಜ್ಞಾನ ಪರಿಹಾರಗಳನ್ನು ಹುಡುಕಿಲ್ಲ. ಕಲ್ಪಾಕಂ, ನರೋರಾ, ಮತ್ತು ಕೈಗಾ ಸ್ಥಾವರಗಳಿಂದ ಅಣು ವಿಕಿರಣ ಸೋರಿಕೆ ಆ ಪ್ರದೇಶಗಳಲ್ಲಿ ಹೆಚ್ಚಿದ ಅರ್ಬುದ ವ್ಯಾಧಿಗಳು (ಕ್ಯಾನ್ಸರ್), ಅಣು ವಿಜ್ಞಾನದ ಪರವಾಗಿ ಸಮಜಾಯಿಷಿ ಹೇಳುವ ಎಲ್ಲಾ ಅತಿ ಬುದ್ಧಿವಂತರನ್ನು ಬಾಯಿ ಮುಚ್ಚುವಂತೆ ಸದಾ ಪಾಠ ಹೇಳುತ್ತದೆ.
ಅಣು ವಿಜ್ಞಾನ, ಎರಡು ವಿಶ್ವ ಮಹಾ ಯುದ್ಧಗಳ ಬಳುವಳಿ. ಮತ್ತೊಂದು ಯುದ್ಧದಲ್ಲಿ ಅಣುಬಾಂಬಿನ ಪ್ರಯೋಗ ನಡೆಯದಿದ್ದರೂ ಶಾಂತಿಗಾಗಿ ಅಣು ವಿಜ್ಞಾನ ಎಂಬ ಪೊಳ್ಳು ಘೋಷಣೆ ಬಂಡವಾಳಶಾಹಿ ಲಾಭಕೋರ ವ್ಯವಸ್ಥೆಯ ಕುತಂತ್ರ.
ಐಷಾರಾಮ ಜೀವನ ಪದ್ಧತಿಯ, ಪರಿಸರ ಶತ್ರು ಕೊಳ್ಳುಬಾಕ ಸಂಸ್ಕೃತಿಗೆ ಅಪರಿಮಿತ ವಿದ್ಯುಚ್ಛಕ್ತಿಯ ಅವಶ್ಯಕತೆಯಿದೆ. ಈ ಮಾದರಿಯ ಬಂಡವಾಳಶಾಹಿ ಅಭಿವೃದ್ಧಿ ಬಹುಜನರ, ಪರಿಸರದ ಮತ್ತು ಇನ್ನಿತರ ಜೀವರಾಶಿಗಳಿಗೆ ಮಾರಕ. ಬಂಡವಾಳಶಾಹಿ ಅವೈಜ್ಞಾನಿಕ, ಪರಿಸರ ಮಾರಕ ಅಭಿವೃದ್ಧಿ ಮಾದರಿಯನ್ನು ದುಡಿಯುವ ವರ್ಗ ತಿರಸ್ಕರಿಸಲೇ ಬೇಕಿದೆ. ಇದರರ್ಥ ನಾವುಗಳು ಕಾಲಚಕ್ರ ಹಿಂದಕ್ಕೆ ತಿರುಗುವಂತೆ ಮಾಡುತ್ತೇವೆಂದಲ್ಲ. ಮಾನವನ ಬದುಕಿಗೆ ಪರಿಸರ ಹಾಗೂ ಇನ್ನಿತರ ಜೀವರಾಶಿಗಳು ಸಾಮರಸ್ಯದೊಂದಿಗೆ ಸಹಜೀವನ ನಡೆಸುವುದು ಅತ್ಯಾವಶ್ಯಕ. ಇದರಿಂದಾಗಿ ನಮ್ಮ ಬದುಕಿಗೆ ಅತ್ಯಾವಶ್ಯಕವಾಗಿ ಬೇಕಾದ ಶಕ್ತಿ ಸಂಪನ್ಮೂಲಗಳು, ಪುರ್ನಬಳಕೆ ಮಾಡಬಹುದಾದ ಪರಿಸರಹಿತ ಕಾಯುವ ಸೌರಶಕ್ತಿ, ವಾಯುಶಕ್ತಿ, ಕಡಲು ಅಲೆಗಳಶಕ್ತಿ ಮತ್ತು ಸಣ್ಣ ಪ್ರಮಾಣದ ಜಲಾಶಯಗಳ ಮೂಲದಿಂದ ಬರಬೇಕಾದದ್ದು ಅನಿವಾರ್ಯ.
ಈಗಿರುವ ಲಾಭಕೋರ ಬಂಡವಾಳಶಾಹಿ ವ್ಯವಸ್ಥೆಗೆ ಈ ರೀತಿಯ ಮಾನವ ಸ್ನೇಹಿ, ಪರಿಸರ ಸ್ನೇಹಿ, ಸಂಪನ್ಮೂಲಗಳನ್ನು ಹುಡುಕುವುದರಲ್ಲಿ ಆಸಕ್ತಿ ಇಲ್ಲ. ಏಕೆಂದರೆ ಈ ಅವಿಷ್ಕಾರಗಳಲ್ಲಿ ತೊಡಗಿಸಬೇಕಾದ ಹಣದಿಂದ ಲಾಭಗಳಿಕೆ ಕಮ್ಮಿ. ಈ ಷಡ್ಯಂತ್ರವೇ ಇಂದು ಅಪಾಯಕಾರಿ ಅಣುಶಕ್ತಿಯನ್ನು ಅನಿವಾರ್ಯವೆಂಬಂತೆ ನಮ್ಮ ಮುಂದಿಡಲಾಗುತ್ತಿರುವುದು.
ಜಗದೀಶ್ ಜಿ. ಚಂದ್ರ.