ಕರ್ನಾಟಕ ‘ಮೌಢ್ಯ ರಾಜ್ಯ’ ವಾಗದಿರಲಿ

ಜಾತಿವಾದಿಗಳಿಗೆ ಧಿಕ್ಕಾರ * ಮಡೆಸ್ನಾನ ಮೌಢ್ಯದ ಪರಮಾವಧಿ

ರಾಜ್ಯದಲ್ಲಿ ಮೌಢ್ಯದ ಪರಮಾವಧಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಯಾವುದೇ ಅಡೆತಡೆ ಇಲ್ಲದೆ ಸಾಗಿದೆ. ಸನಾತನ ಸಂಸ್ಕೃತಿಯ ಹೆಸರಿನಲ್ಲಿ ಅನಿಷ್ಟ ಆಚರಣೆಗಳು ನಡೆಯುತ್ತಿದ್ದು ಈ ಮೂಲಕ ಕರ್ನಾಟಕ ಭ್ರಷ್ಟಾಚಾರ, ಕೋಮುವಾದ, ಮತ್ತು ಜಾತಿವಾದಗಳಂತಹ ಕುಖ್ಯಾತಿಗಳೊಂದಿಗೆ ‘ಮೌಢ್ಯ ರಾಜ್ಯ’ವಾಗಿಯೂ ವಿಜೃಂಭಿಸುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶಿಷ್ಟ ಆಚರಣೆಯ ನಾಮಧೇಯದಲ್ಲಿ ನಡೆಯುತ್ತಿರುವ ಹರಕೆಯ ಮಡೆಸ್ನಾನ ಅವೈಜ್ಞಾನಿಕ ಆಚರಣೆ ಎಂಬುದು ನಿಸ್ಸಂದೇಹ. ಪರಂಪರಾಗತವಾಗಿ ನಿಮ್ನ ಜಾತಿಯ ಜನರನ್ನು ಮೌಢ್ಯದ ಅಂಧಕಾರದ ಅಧೀನದಲ್ಲೇ ಇಟ್ಟಿರಬೇಕೆಂಬ ಮೇಲ್ ಜಾತಿಯವರ ಧಾರ್ಮಿಕ ಹೇರಿಕೆಯ ಹುನ್ನಾರ ಈ ಮಡೆ-ಮಡೆ ಸ್ನಾನ.

ಕುಕ್ಕೆಯಲ್ಲಿ ನಡೆಯುತ್ತಿರುವ ಈ ಅನಿಷ್ಟ ಪದ್ದತಿಯ ಹರಕೆ ಸ್ವರೂಪವನ್ನು ವೀಕ್ಷಿಸುವುದಕ್ಕೆ ತೆರಳಿದ ಮೈಸೂರಿನ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷರ ಮೇಲೆ ಗುಂಪೊಂದು ಪೋಲಿಸರ ಎದುರಲ್ಲೇ ನಡೆಸಿದ ಹಲ್ಲೆ ಖಂಡನೀಯ. ದೇವಾಲಯದ ಆಡಳಿತ ಮಂಡಳಿಯರ ಕಟ್ಟಪ್ಪಣೆಗೆ ಶರಣಾದ ಜಿಲ್ಲಾಡಳಿತ, ನಿರ್ಲಕ್ಷ್ಯವಹಿಸಿದ್ದು ಹಾಗೂ ಪೊಲೀಸ್ರು ಮೂಕ ಪ್ರೇಕ್ಷಕರಂತೆ ವರ್ತಿಸಿಧು ಬೇಜವಾಬ್ದಾರಿಯ ಪರಮಾವಧಿ.

ಮಡೆಸ್ನಾನಕ್ಕೆ ಚರ್ಮರೋಗ, ಹಾಗೂ ಇನ್ನಿತರ ಅಗೋಚರ ಕಾಯಿಲೆಗಳನ್ನು ವಾಸಿಮಾಡುವ ಗುಣವಿದೆ ಎಂದು ಬೊಬ್ಬಿಡುವ ಸಚಿವ ಅಚಾರ್ಯರು ನಿಜವಾಗಲೂ ವೈದ್ಯರೇ ಅಥವಾ ದೇವಸ್ಥಾನದ ಅರ್ಚಕರೇ ಎಂಬುವ ಪ್ರಶ್ನೆ ಮೂಡಿದೆ.

ವಾದಿರಾಜರ ‘ಸ್ಕಂದ’ ಪುರಾಣಗಳಲ್ಲಿಯೇ (15ನೇ ಶತಮಾನ) ಮಡೆಸ್ನಾನದ ಬಗ್ಗೆ ಉಲ್ಲೇಖವಿದೆಯೆಂದು, ಧಾಮರ್ಿಕ ನಂಬಿಕೆಗೆ ಸಂಬಂಧ ಪಟ್ಟಿದೆಯೆಂದು ಸಮರ್ಥಿಸಿ ಕೊಳ್ಳುವ ಹಾಲಿ ಬಿಜೆಪಿ ಸರ್ಕಾರಕೆ ಈ ದೇಶದ ಕಾನೂನು ಸಂವಿಧಾನದದ ಬಗ್ಗೆ ಕಿಂಚಿತ್ತೂ ಪರಿವೆ, ಗೌರವವೂ ಇಲ್ಲ ಎಂಬುದು ಸಾಬೀತಾಗಿದೆ.

ಸಂವಿಧಾನದ ಪ್ರಕಾರ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಜನ ಪ್ರತಿನಿಧಿಗಳು ಸಂಪ್ರದಾಯದ ಹೆಸರಿನಲ್ಲಿ ಅವೈಜ್ಞಾನಿಕ ಆಚರಣೆಗಳನ್ನೂ, ಪದ್ಧತಿಗಳನ್ನು ಸಮರ್ಥಿಸಿಕೊಳ್ಳುವುದು ಸಂವಿಧಾನಕ್ಕೆ ಬಗೆದ ದ್ರೋಹ ಹಾಗೂ ಸಂವಿಧಾನ ವಿರೋಧಿ ನಡವಳಿಕೆ.

“ಸತಿ ಪದ್ಧತಿ, ದೇವದಾಸಿ ಪದ್ಧತಿ, ವಿಧವಾ ಕೇಶ ಮುಂಡನ, ಬೆತ್ತಲೆ ಸೇವೆಯಂತಹ ಅವೈಜ್ಞಾನಿಕ ಆಚರಣೆಗಳ ವಿರುದ್ಧ ಇಂದಿಗೂ ಸಹ ಅವಿರತವಾದ ಹೋರಾಟ-ಸಂಘರ್ಷಗಳು ನಡೆಯುತ್ತಿವೆ.

ಜನತೆಯಲ್ಲಿ ವೈಜ್ಞಾನಿಕ ಚಿಂತನೆಯನ್ನೂ, ವೈಚಾರಿಕ ಪ್ರಜ್ಞೆಯನ್ನು ಮೂಡಿಸುತ್ತೇವೆಂದು ಪ್ರತಿಜ್ಞೆ ಮಾಡುವ ಜನ ಪ್ರತಿನಿಧಿಗಳೇ ಅಜ್ಞಾನಿಗಳಂತೆ ವರ್ತಿಸುತ್ತಿರುವುದು ರಾಜ್ಯದ ದುರಂತ.

ಮಡೆಸ್ನಾನವನ್ನು ನಿಷೇಧಿಸಿವುದಕ್ಕೆ ಪೇಜಾವರದ ಮಠಾಧೀಪತಿಗಳನ್ನು, ಧರ್ಮಸ್ಥಳದ ಪೀಠಾಧಿಪತಿಗಳ ಅನುಮತಿ ಕೇಳಬೇಕೆನ್ನುವ ಸಚಿವರ ಹೇಳಿಕೆ ರಾಜ್ಯದಲ್ಲಿ ಜನರಿಂದ ಆರಿಸಲ್ಪಟ್ಟ ಚುನಾಯಿತ ಸರ್ಕಾರವಿದೆಯೋ ಅಥವಾ ಮಠಾಧೀಪತಿಗಳ ಹಿಂದು ತಾಲಿಬಾನ್ ಸರ್ಕಾರವಿದೆಯೋ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡಿದೆ.

ಮೌಢ್ಯದ ದುರ್ನಾತ ಸೂಸುವ ಮಡೆಸ್ನಾನದ ನಿಷೇಧಕ್ಕಾಗಿ ಆಗ್ರಹಿಸಿ ನಿಷೇಧ ಮಾಡಿದರೆ ಅದರಿಂದ ಸ್ಥಳೀಯರ ಭಾವನೆಗೆ ಧಕ್ಕೆ, ಧಾರ್ಮಿಕ ನುಂಬಿಕೆಗೆ ನೋವುಂಟಾಗುವುದೆಂದು, ಮತ್ತು ಸನಾತನ ಸಂಸ್ಕೃತಿ ಮುಖ್ಯವೆಂದು ಸಚಿವರು ಹಲುಬಿದ್ದಾರೆ.

ಹಾಗಾದಲಿ, ಪ್ರೇಮಿಗಳ ದಿನಾಚರಣೆಯಂದು (ವ್ಯಾಲಂಟೈನ್ಸ್ ಡೇ) ಸಂಘ ಪರಿವಾರದ ಬಾಲಗೋಚಿಯಾದ ಭಜರಂಗದಳದವರು ಅಡ್ಡಿಪಡ್ಡಿಸಿ ಪ್ರೇಮಿಗಳ ಮೇಲೆ ಹಲ್ಲೆ ಹಾಗು ಬಲವಂತವಾಗಿ ರಾಖಿ-ತಾಳಿ ಕಟ್ಟಿಸುವುದು ಯಾವ ಸಂಸ್ಕೃತಿಯ ಪ್ರತೀಕ? ಇದರಿಂದ ಬೇರೊಂದು ಜನಸಂಸ್ಕೃತಿಯ ಅನುಯಾಯಿಗಳಿಗೆ ನೋವುಂಟು ಮಾಡುವುದರ ಬಗ್ಗೆ ಬಿಜೆಪಿಯ ವಕ್ತಾರರಿಗೆ ಕಾಳಜಿಯಿದೆಯೇ?

ಗೋ ಹತ್ಯಾ ಮಸೂದೆ ಕಾನೂನಿಗೆ ಟೊಂಕಕಟ್ಟಿ ನಿಂತಿರುವ ಬಿಜೆಪಿ ಸರ್ಕಾರಕ್ಕೆ ಮಸೂದೆ ಜಾರಿಯಾದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ-ಕ್ರೈಸ್ತ-ದಲಿತ ಹಾಗೂ ಇನ್ನಿತರರ ಆಹಾರ ಸಂಸ್ಕೃತಿಗೆ ಕುತ್ತು ಉಂಟಾಗುವುದೆಂಬ ಕಾಳಜಿ ಇದೆಯೇ?

ಪಬ್ಗಳಿಗೆ ಹೋಗುವ ಹುಡುಗಿಯರನ್ನು ಅನಾಗರಿಕವಾಗಿ ಶಿಕ್ಷಿಸುವಂಥ ಗೂಂಡಾಗಿರಿ ಪ್ರಧರ್ಶಿಸುವಾಗ ಹಿಂದು ಸನಾತನ ಸಂಸ್ಕೃತಿ ಗೊಬ್ಬರ ತಿನ್ನುತ್ತಿತ್ತೇ ?

ಇತ್ತೀಚೆಗೆ ಮಡೆಸ್ನಾನದ ನಿಷೇಧದ ಬಗ್ಗೆ ನಡೆದ ಚರ್ಚೆಯಲ್ಲಿ ಪೇಜಾವರ ಮಠಾಧಿಪತಿಗಳು, ನಿಷೇಧ ಜಾರಿಯಾದಲ್ಲಿ ಮಠದೊಳಗಿನ ನೂರಾರು ಹಳಸು ಸಂಪ್ರದಾಯ ಆಚರಣೆಗಳಿಗೂ ಕುತ್ತು ಬರಬಹುದೆಂಬ ಭಯದಿಂದ ಮತ್ತು ಮೇಲ್ ಜಾತಿಗಳ ಪ್ರತಿಷ್ಠೆ ಮತ್ತು ಪ್ರತ್ಯೇಕತೆಗಳನ್ನು ಕಾಪಾಡಿ ಕೊಳ್ಳುವುದಕ್ಕಾಗಿ ಧರ್ಮಶಾಸ್ತ್ರವೇ ಬೇರೆ ಸಂವಿಧಾನವೇ ಬೇರೆ ಎಂದು ಹೇಳಿ ಚರ್ಚೆಯಿಂದ ಪಲಾಯನಗೈದಿದ್ದಾರೆ.

* ಜಾತಿವಾದಿಗಳಿಗೆ ಧಿಕ್ಕಾರ.
* ಮಡೆಸ್ನಾನ ಮೌಢ್ಯದ ಪರಮಾವಧಿ
* ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದವರಿಗೆ ಕಠಿಣ ಶಿಕ್ಷೆಯಾಗಲಿ
* ರಾಜ್ಯದಲ್ಲಿ ಆಚರಣೆಯಲ್ಲಿರುವ ಮಡೆಸ್ನಾನ ಹಾಗು ಇನ್ನಿತರ ಅನಿಷ್ಟ ಪದ್ಧತಿಗಳ ನಿಷೇಧಕ್ಕಾಗಿ ಪ್ರಜ್ಞಾವಂತರ ಒಕ್ಕೂಟ ಸಂಘಗಳು ನಿರ್ಮಾಣವಾಗಲಿ.

ವಿಶ್ವನಾಥ್, ಬೆಂಗಳೂರು.