‘ಅಖಿಲ ಭಾರತ ಮಾನವ ಅಭಿವೃದ್ಧಿ’ 2009-10 ವರದಿ

ಭಾರತದ ಆರ್ಥಿಕ ಪ್ರಗತಿ ?
ಕೇವಲ ಉಳ್ಳವರ ಉನ್ನತಿ – ಹಿಂದುಳಿದವರ ಅಧೋಗತಿ

ಭಾರತದ ಯುವಜನಾಂಗ ಅದರಲ್ಲೂ ಮೇಲ್ ಮಧ್ಯಮ ವರ್ಗದ ಜನರಲ್ಲಿ ಇಂದು ಪ್ರಚ್ಛನ್ನ ಜಾತೀಯತೆ ಮತ್ತಷ್ಟು ಕುದಿಯುತ್ತಿದೆ. ಕಾಲೇಜು ಯುವಕ ಯುವತಿಯರನ್ನು ಮಾತಿಗೆಳೆದರೆ ತಮ್ಮಲ್ಲಿ ಹುದುಗಿರುವ ಜಾತೀಯತೆಯನ್ನು ಹೊರಹಾಕುತ್ತಾರೆ.

ಮೀಸಲಾತಿಯಿಂದ ಉದ್ಯೋಗ, ಶಿಕ್ಷಣ ಕ್ಷೇತ್ರಗಳಲ್ಲಿ ಹಿಂದುಳಿದ ಜಾತಿ, ಪಂಗಡ, ಹಾಗೂ ಮುಸ್ಲಿಮರು ಅವಕಾಶಗಳನ್ನು ಬಾಚಿ ನಮ್ಮ ಸ್ಥಾನವನ್ನು ಆಕ್ರಮಿಸಿಕೊಂಡಿರುವುದಲ್ಲದೇ ನಮ್ಮ ಪ್ರತಿಭೆಗೆ ಅಡ್ಡ ಬರುತ್ತಿದ್ದಾರೆಂದು ಮೀಸಲಾತಿಯ ಬಗೆಗೆ ಕಿಡಿಕಾರುತ್ತಾರೆ.

ತಳ ಸಮುದಾಯದ ಜನರು ಮೀಸಲಾತಿಯಿಂದ ಸರ್ಕಾರಿ ಉದ್ಯೋಗ, ಹಾಗೂ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶಗಳನ್ನು ತಮ್ಮದಾಗಿಸಿ ಉದ್ಧಾರವಾಗುತ್ತಿದ್ದಾರೆಂಬ ಕೂಗುಮಾರಿ ಜೋರಾಗಿಯೇ ಕೇಳಿಸ ತೊಡಗಿದೆ. ಇದರಲ್ಲಿ ಅಣ್ಣಾ ಹಜಾರೆ ತಂಡದ ಅರವಿಂದ ಕ್ರೇಜಿವಾಲಾರು ಸಹ ಒಬ್ಬರು.

ಹಾಗಾದರೆ ನಿಜವಾಗಲೂ ಮೀಸಲಾತಿಯಿಂದ ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾದ ಜನರು ಉದ್ಯೋಗಗಳನ್ನು ಪಡೆದು ಉದ್ದಾರವಾಗುತ್ತಿದ್ದಾರೆಯೇ ? ಅವರ ಜೀವನ ಮಟ್ಟ ಸುಧಾರಣೆಗೊಂಡಿದೆಯೇ ? ಸಂಪನ್ಮೂಲಗಳ ಮೇಲೆ ಅವರ ಹಿಡಿತ, ಹಾಗೂ ವರಮಾನದಲ್ಲಿ ಬದಲಾವಣೆಗಳಾಗಿವೆಯೇ ?

ಈ ಮೇಲಿನ ಪ್ರಶ್ನೆಗಳಿಗೆ ಇತ್ತೀಚೆಗೆ ಸರ್ಕಾರವೇ ಬಿಡುಗಡೆ ಗೊಳಿಸಿದ ‘ಅಖಿಲ ಭಾರತ ಮಾನವ ಅಭಿವೃದ್ಧಿ’ 2009- 2010 ವರದಿ ಸ್ಪಷ್ಟ ಉತ್ತರವನ್ನು ನೀಡುತ್ತಿದೆ. ಅಷ್ಟು ಮಾತ್ರವಲ್ಲದೇ ವಾಸ್ತವಾಂಶದ ಕಡೆಗೆ ಬೆಳಕು ಚೆಲ್ಲಿದೆ.

ಪ್ರಸಕ್ತ ಸಾಲಿನ ವರದಿಯ ಪ್ರಕಾರ ನಗರ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿಯರವರ ನಿರುದ್ಯೋಗ ಪ್ರಮಾಣ ಶೇ. 9.4ರಷ್ಟು ಮತ್ತು ಗ್ರಾಮೀಣ ಭಾಗದಲ್ಲಿ ಶೇ. 7 ರಷ್ಟು ಹೆಚ್ಚಳವಾಗಿದೆ. ಹಾಗೆಯೇ ಪರಿಶಿಷ್ಟ ಪಂಗಡದಲ್ಲಿ ಕ್ರಮವಾಗಿ ಶೇ.6.3 ಮತ್ತು ಶೇ.7.8ರಷ್ಟು ನಿರುದ್ಯೋಗ ಕಾಣಿಸಿಕೊಂಡಿದೆ. ಇತರ ಗುಂಪುಗಳ ನಿರುದ್ಯೋಗ ಪ್ರಮಾಣಗಳ ಪೈಕಿ ಪರಿಶಿಷ್ಟ ಜಾತಿ ನಿರುದ್ಯೋಗ ಪ್ರಮಾಣ ನಗರ ಪ್ರದೇಶದಲ್ಲಿ ಹೆಚ್ಚಳವಾಗಿರುವುದು ಆಳುವ ವರ್ಗಗವನ್ನು ಪೇಚಿಗೆ ಸಿಲುಕಿಸಿದೆ.

ಸರ್ಕಾರಗಳ ಸಮಾಜ ಕಲ್ಯಾಣ ಕಾರ್ಯಕ್ರಮಗಳು ನಿಷ್ಪ್ರಯೋಜಕವಾಗಿದ್ದು, ತಳ ಸಮುದಾಯವರನ್ನು ಮೇಲೆತ್ತಲು ವಿಫಲವಾಗಿರುವುದು ಈ ವರದಿಯಿಂದ ಸಾಬೀತಾಗಿದೆ.

ಆರ್ಥಿಕ ರಂಗದಲ್ಲಿ ಖಾಸಗೀಕರಣಕ್ಕೆ ಹೆಚ್ಚಿನ ಒತ್ತು ನೀಡಿ ಉದ್ಯೋಗಗಳನ್ನು ಮೊಟಕು ಗೊಳಿಸಿ ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗಿಯವರಿಗೆ ಪರಭಾರೆ ಮಾಡಿದ ಮೇಲೆ ಇನ್ನೆಲ್ಲಿ ಸಾರ್ವಜನಿಕ ಕ್ಷೇತ್ರಗಳ ಉದ್ಯೋಗ, ನೇಮಕಾತಿ ಹಾಗೂ ತಳಸಮುದಾಯದವರಿಗೆ ಮೀಸಲಾತಿ ?

ಎರಡು ದಶಕಗಳಿಂದ ಕಾಂಗ್ರೇಸ್, ಬಿಜೆಪಿ, ತೃತೀಯ ರಂಗ ಸರ್ಕಾರಗಳು ಅನುಸರಿಸಿಕೊಂಡು ಬಂದ ಮುಕ್ತ ಆರ್ಥಿಕ ನೀತಿಗಳೇ ದಲಿತ ಹಾಗು ಹಿಂದುಳಿದ ಜನಾಂಗಗಳ ಇಂದಿನ ಶೋಚನೀಯ ಪರಿಸ್ಥಿತಿಗೆ ಕಾರಣವಾಗಿವೆ,

ಭಾರತದ ‘ಆರ್ಥಿಕ ಉನ್ನತಿ’ ಉಳ್ಳವರಿಗೆ ಸೀಮಿತವಾಗಿದೆ. ದೊಡ್ಡ-ದೊಡ್ಡ ಜಮೀನ್ದಾರಿ, ಬಂಡವಾಳಶಾಹಿಗಳ ಆಸ್ತಿ ಸಂಪನ್ಮೂಲಗಳು ಹೆಚ್ಚಾಗಿದ್ದು, ಅವರ ಆದಾಯ ವರಮಾನಗಳಲ್ಲಿ ಅಪರಿಮಿತ ಹೆಚ್ಚಳವಾಗಿದೆ.

ಈ ‘ಆರ್ಥಿಕ ಅಭಿವೃದ್ಧಿ’ ಬಡ ಜನರಿಗೆ ಅದರಲ್ಲೂ ಶೋಷಿತ ವರ್ಗಗಳಿಗೆ ಉದ್ಯೋಗ ಕಲ್ಪಿಸಿ, ಅವರ ಜೀವನ ಮಟ್ಟವನ್ನು ಹೆಚ್ಚಿಸುವ ಬದಲಾಗಿ ಮತ್ತಷ್ಟು ಇಳಿಮುಖವಾಗುವಂತೆ ಮಾಡಿದೆ.

ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, ವರದಿಯ ಬಗೆಗೆ ಜಾಣತನದ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಈ ರೀತಿಯ ಪರಿಸ್ಥಿತಿ ಆಕಸ್ಮಿಕವೆಂಬಂತೆ, ತಮ್ಮ ಸಹೊದ್ಯೋಗಿ ಹಾಗೂ ಯೋಜನಾ ಆಯೋಗದ ಅಧ್ಯಕ್ಷ ಪ್ರಧಾನಿ ಮನಮನಮೋಹನ ಸಿಂಗ್ ರ ಮುಕ್ತ ಆರ್ಥಿಕ ನೀತಿಗಳಿಗೂ ನಿರುದ್ಯೋಗ ಹೆಚ್ಚಳ ಮತ್ತು ಅಸಮಾನತೆಗೆ ಸಂಬಂಧವಿಲ್ಲದೆಂಬಂತೆ ಸಮಜಾಯಿಷಿಯ ಮಾತುಗಳನ್ನಾಡಿದ್ದಾರೆ.

IMF, WTO, World Bank ಆಧಾರಿತ ಅರ್ಥವ್ಯವಸ್ಥೆಯನ್ನು ತಮ್ಮದಾಗಿಸಿಕೊಂಡು ಆಡಳಿತ ನಡೆಸಿದರ ಪರಿಣಾಮವಿದು ಎಂಬುದನ್ನು ಮರೆಮಾಚಿ ಮೊಸಳೆ ಕಣ್ಣಿರು ಸುರಿಸಿರುವುದು ಹಾಸ್ಯಾಸ್ಪದ.

ವಿಶ್ವ

ನವ ಸಮಾಜವಾದಿ ಪರ್ಯಾಯ, ಬೆಂಗಳೂರು