ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಎಲ್ಲಾ ಮೇಧಾವಿಗಳಿಗೂ ಒಂದು ಮುಕ್ತ ಅರಿಕೆ…….

ಮಾನ್ಯ,
ಡಾ. ಮನಮೋಹನ್  ಸಿಂಗ್, ಮಾಂಟೆಕ್ ಸಿಂಗ್, ಪ್ರಣಬ್ ಮುಖರ್ಜಿ, ಪ.ಚಿದಬಂರಮ್ ಮತ್ತು ಭಾರತದ ಆರ್ಥಿಕತೆಯ ಚುಕ್ಕಾಣಿ ಹಿಡಿದಿರುವ ಸಮಸ್ತ ಆಳುವ ವರ್ಗದ ಪ್ರತಿಷ್ಠಿತರೇ,

ನಿಮ್ಮಲ್ಲೇ ಒಬ್ಬರಾದ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾರವರು ಮಂಡಿಸಿದ, ಪ್ರತಿ ನಗರವಾಸಿ ಪ್ರಜೆ, 32 ರೂಪಾಯಿಗಳನ್ನು ಗಳಿಸಿದಲ್ಲಿ ಅವನು/ಅವಳು ಬಡತನ ರೇಖೆಗಿಂತ ಮೇಲಿರುವವರು ಎಂಬ ಮಾನದಂಡ ಈ ದೇಶದ ಶೇ.90 ಕ್ಕಿಂತ ಹೆಚ್ಚಿರುವ ನನ್ನಂತಹ ಸಾಧಾರಣ ದುಡಿಯುವ ವರ್ಗದ ಜನರಿಗೆ ಅತೀವ ಸೋಜಿಗದ ಸಂಗತಿಯಾಗಿದೆ.

ಹೇಳಿ ಕೇಳಿ ನಾವುಗಳು (ನಮ್ಮ ಪೂರ್ವಜರೂ ಸೇರಿದಂತೆ) ನಿಮ್ಮಂತೆ ಕೇಂಬ್ರಿಡ್ಜ್, ಆಕ್ಸ್ ಫರ್ಡ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯಗಳಲ್ಲೋ ಅಥವಾ ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯ ಮತ್ತು ಪ್ರತಿಷ್ಟಿತ ಐ.ಐ.ಟಿ.ಗಳಲ್ಲೋ ಓದಿ ತರಬೇತಿ ಪಡೆದಿರುವ ಭಾಗ್ಯವಂತ ಪ್ರಜೆಗಳಲ್ಲ.

ಹಾಗಾಗಿ, ಆರ್ಥಿಕ ಸುಧಾರಣೆ, ಹಣಕಾಸು ವ್ಯವಸ್ಥೆ ಮತ್ತು ಹಣದುಬ್ಬರಗಳ ಏರಿಳಿತ, ಮಾರುಕಟ್ಟೆ ಮತ್ತು ಬೆಲೆಗಳ ಸಂಬಂಧ, ಕಚ್ಚಾ ಪದಾರ್ಥ ಮತ್ತು ತಯಾರಿಸಿದ ಸರಕುಗಳ ವಹಿವಾಟು, ಬ್ಯಾಂಕಿಂಗ್ ವ್ಯವಸ್ಥೆ ಮತ್ತು ವಿದೇಶಿ ವಿನಿಮಯದ ಆಗುಹೋಗುಗಳು ಇದಾವುದರ ಆಳವಾದ ಜ್ಞಾನವಿಲ್ಲದೆ ಕೇವಲ ದುಡಿಮೆಯನ್ನೇ ನಂಬಿ, ಗಳಿಸುವ ನೂರು ಅಥವಾ ಸಾವಿರ ರೂಪಾಯಿಗಳ ಕೂಲಿ-ಸಂಬಳಗಳನ್ನು ದಿನನಿತ್ಯದ ಖರ್ಚು ತೂಗಿಸುವಲ್ಲಿ ದೊಂಬರಾಟ ನಡೆಸುವ ದಲಿತ- ಆರ್ಥಿಕವಾಗಿ ಹಿಂದುಳಿದ ದುಡಿಯುವ ಬಹುಜನರು ನಾವು.

ನಾವು ಉಪಯೋಗಿಸಲೇ ಬೇಕಾದ ಅಗತ್ಯ ವಸ್ತು ಆಹಾರ ಪದಾರ್ಥಗಳೆಲ್ಲದರ ಬೆಲೆ ನೀವು ನಿಗದಿಪಡಿಸಿರುವ ಮಾನದಂಡದ, ಗ್ರಾಮೀಣ ಜನರಿಗೆ ರೂ.26, ನಗರವಾಸಿಗಳಿಗೆ 32 ರೂ.ಗಳ ಆದಾಯ ಪ್ರಮಾಣಕ್ಕಿಂತ ಬಹಳಷ್ಟು ಮೇಲೆ ಹೋಗಿ ಸ್ಥಿರವಾಗಿ ನಿಂತಿದೆ. ಹೀಗಿರುವಾಗ ನಮ್ಮನ್ನು ಕಾಡುವ ಯಕ್ಷ ಪ್ರಶ್ನೆಯೆಂದರೆ ಪ್ರಧಾನಿ ಮನಮೋಹನ್, ಮಾಂಟೆಕ್, ಚಿದಂಬರಮ್ ಮತ್ತು  ಪ್ರಣಬ್ ರಂತಹ ಮೇಧಾವಿ ಆರ್ಥಿಕ ತಜ್ಞರು ಕೇವಲ 26/32 ರೂ.ಗಳಲ್ಲಿ ದಿನನಿತ್ಯದ ಖರ್ಚನು ಹೇಗೆ ತೂಗಿಸಿಯಾರು ಎಂಬುದು?

ನಗರವಾಸಿ ಪ್ರದೇಶಗಳಲ್ಲಿ ಅತಿ ಸಾಮಾನ್ಯ ಮಟ್ಟದ ಜೀವನವನ್ನು ಸಾಗಿಸಿದರೂ 5 ಜನರ ಕುಟುಂಬವೊಂದಕ್ಕೆ ಮಾಂಟೆಕ್ ಸಿಂಗ ರು ಹೇಳುವ, 4,824 ರೂ.ಗಳ ಮಾಸಿಕ ವೆಚ್ಚದ ಮಿತಿ ನಿಜಕ್ಕೂ ಆಶ್ಚರ್ಯ ತರುವ ವಿಷಯವೇ! ಇತ್ತೀಚಿನ 24 ತಿಂಗಳುಗಳಲ್ಲಿ ಆಹಾರದ ಹಣದುಬ್ಬರ ಎರಡಂಕಿಯ ಪ್ರಮಾಣದಿಂದ ಕೆಳಗಿಳಿದದ್ದು ವಿರಳ. ನಮ್ಮ ಮಕ್ಕಳಿಗೆ ಪೌಷ್ಠಿಕಾಂಶ ಮತ್ತು ಅವಶ್ಯಕ ಖನಿಜಾಂಶಗಳನ್ನು ದೊರಕಿಸುತ್ತಿದ್ದ ಜನಸಾಮಾನ್ಯರ ಅನಿವಾರ್ಯ ಪದಾರ್ಥವಾದ ಹಾಲು ಕೂಡ ಇಂದು ಕೊಳ್ಳುವುದು ಅಸಾಧ್ಯವಾಗಿದೆ, ಲೀಟರ್ ಅಳತೆಯ ಜಾಗದಲ್ಲಿ 200-500ಗ್ರಾಂ ಅಳತೆಯ ಹಾಲಿನ ಪ್ಯಾಕೆಟ್ಟಿಗೆ  ನಮ್ಮ ವರ್ಗದ ಬಹುಜನ ಮೊರೆಹೋಗಿ ಬಹಳ ತಿಂಗಳುಗಳೇ ಆಗಿವೆ. ಸಾಧಾರಣ ತರಕಾರಿಗಳೆಲ್ಲವೂ ಕಿಲೋವೊಂದಕ್ಕೆ ರೂ.25ರಿಂದ 50ರವರೆಗೆ, ತಿಂಗಳಿಗೊಮ್ಮೆ ಕುಟುಂಬದ ಎಲ್ಲಾ ಸದಸ್ಯರು ಮಾಂಸದ ಅಡುಗೆ ಉಣ್ಣಬೇಕಾದಲ್ಲಿ ಕನಿಷ್ಟ ರೂ.500ರಿಂದ-1000 ರೂ.ಗಳವರೆಗೂ ಖರ್ಚಿದೆ. ನಗರ ಪ್ರದೇಶಗಳಲ್ಲಿ ಒಂದು ಕೋಣೆಯ ಮನೆಯೂ ಕನಿಷ್ಟ ರೂ.5000 ಕ್ಕಿಂತ ಕಡಿಮೆ ಬಾಡಿಗೆಗೆ ದೊರಕದು(ನಮ್ಮ ವರ್ಗದ ಬಹುಜನರು ಸ್ವಂತ ವಸತಿಯ ಕನಸನ್ನು ಕಾಣುವುದು ಬಿಟ್ಟು ಬಹಳ ವರುಷಗಳೇ ಆಗಿವೆ) ಇನ್ನೂ ಶಾಲೆ-ಕಾಲೇಜಿಗೆ ಹೋಗುವ ಮಕ್ಕಳಿದ್ದರಂತೂ ಕನಿಷ್ಟ ಮಗುವೊಂದಕ್ಕೆ ಅನಿವಾರ್ಯವಾಗಿ ರೂ.2000ಕ್ಕೂ ಹೆಚ್ಚು ಖರ್ಚಿದೆ.

ಹೀಗಾಗಿ ನಾವು ದುಡಿಯುವ ವರ್ಗ ನಿಮ್ಮಂತಹ ಮೇಧಾವಿ ವಿತ್ತ ಪಂಡಿತರ, ಲೆಕ್ಕಾಚಾರಸ್ಥರ ಮತ್ತು ಅರ್ಥಶಾಸ್ತ್ರಜ್ಞರಲ್ಲಿ ಮಂಡಿಸುವ ಅರಿಕೆಯೆನೆಂದರೆ ಈ ಕೆಳಕಂಡ ಚೆಕ್ಕಿನ ಮೊತ್ತ ರೂ.32ನ್ನು ಸಂದಾಯ ಮಾಡಿಕೊಂಡು ದಿನವೊಂದರಲ್ಲಿ, ನಗರವಾಸಿಗಳಾದ ನಿಮ್ಮ ಕುಟುಂಬದ ಖರ್ಚನ್ನು ತೂಗಿಸಿ ನಮಗೆ ಮಾರ್ಗದರ್ಶಕರಾಗ ಬೇಕೆಂದು ಕಳಕಳಿಯಿಂದ ವಿನಂತಿಸುತ್ತೇವೆ………..