ದೇಶವೆಂದರೆ ನಿರ್ಜೀವ ಗಡಿರೇಖೆಗಳಲ್ಲ ! ದೇಶವೆಂದರೆ ಆರೋಗ್ಯವಂತ ಪ್ರಜೆಗಳು !!

ಎರಡು ದಶಕಗಳ ನವ ಉದಾರೀಕರಣ ಭಾರತದ ಬಹು ಜನರನ್ನು ಅನಾರೋಗ್ಯದ ಅಧೋಗತಿಗೆ ತಳ್ಳಿದೆ

“ಅಪೌಷ್ಟಿಕತೆ ರಾಷ್ಟ್ರ್ರೀಯ ಅವಮಾನ” ಎಂದಿರುವ ಪ್ರಧಾನಿ ಮನಮೋಹನ್ ಸಿಂಗ್ ರು ಉದ್ಗಾರ, ಧೀರ್ಘ ಪ್ರಜ್ಞಾಹೀನ ಸ್ಥಿತಿಯಲ್ಲಿದ ರೋಗಿಯೊಬ್ಬ ಧಿಡೀರನೆ ಎಚ್ಚರಗೊಂಡು ತನ್ನ ನಿಶ್ಯಕ್ತತೆಯ ಬಗ್ಗೆ ಅಚ್ಚರಿಯಿಂದ ಹಲುಬಿದಂತಿದೆ.

ಇದೀಗ ಕಳೆದ ಡಿಸೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ಮೇಧಾವಿಗಳಾದ ಮನಮೋಹನ್-ಮಾಂಟೆಕ್-ಮುಖರ್ಜಿ ಹಾಗೂ ಪ.ಚಿದಂಬರಮ್ ಎಂಬ ಚತುಷ್ಪಾದ ಜೀವಿಗಳ, ದಿನವೊಂದಕ್ಕೆ ನಗರಗಳಲ್ಲಿ 32 ರೂಪಾಯಿ ಹಾಗೂ ಹಳ್ಳಿಗಳಲ್ಲಿ 27 ರೂಪಾಯಿಗಳ ಆದಾಯವಿದ್ದಲ್ಲಿ ಅದು ಸುಖ-ಸಮೃದ್ಧಿಯ ಪ್ರತೀಕ ಹಾಗೂ ಈ ರೀತಿಯ ಆದಾಯ ಗಳಿಸುವ ಪ್ರಜೆಗಳು ಬಡತನದ ರೇಖೆಯನ್ನು ದಾಟಿರುವ ಅದೃಷ್ಟಶಾಲಿಗಳು ಎಂಬ ಪರಿಗಣನೆ ಈ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಈ ರಾಜಕೀಯ ನಾಯಕರುಗಳ ಎಡಬಿಡಂಗಿತನವನ್ನು ಹಾಗೂ ಆಳುವ ಪಕ್ಷಗಳ ನಿಷ್ಠೆ ಯಾವ ವರ್ಗಕ್ಕೆ ಮೀಸಲಾಗಿದೆ ಎಂಬುದನ್ನು ಜಾಹೀರುಗೊಳಿಸುತ್ತದೆ.

‘ಅಪೌಷ್ಟಿಕತೆ ವಿರುದ್ಧ ನಾಗರಿಕರ ಒಕ್ಕೂಟ’ ಹೊರ ತಂದಿರುವ ‘ಹಸಿವು ಮತ್ತು ಅಪೌಷ್ಟಿಕತೆ’ ಸಮೀಕ್ಷಾ ವರದಿ ದೇಶಾದ್ಯಂತ ತಾಂಡವವಾಡುತ್ತಿರುವ ಅಪೌಷ್ಟಿಕತೆಯ ಸಾವುಗಳು ಅದರಲ್ಲೂ ಎಳೆಯ ಕಂದಮ್ಮಗಳ ಅಕಾಲಿಕ ಮರಣ, ಭಾರತವನ್ನು ಜಗತ್ತಿನ ಮೇಲ್ ಪಂಕ್ತಿಯ ರಾಷ್ಟ್ರ್ರವನ್ನಾಗಿ ಮಾಡುತ್ತೇವೆಂಬುವರ ಭರವಸೆಗಳ ಪೊಳ್ಳುತನಕ್ಕೆ ಕನ್ನಡಿ ಹಿಡಿದಂತಿದೆ.

ಮೇಲೆ ಹೇಳಿದ ‘ಹಸಿವು ಮತ್ತು ಅಪೌಷ್ಟಿಕತೆ’ ವರದಿಯ ಪ್ರಕಾರ ದೇಶದ 6 ದೊಡ್ಡ ರಾಜ್ಯಗಳಲ್ಲಿ 5 ವರ್ಷದೊಳಗಿನ ಮಕ್ಕಳಲ್ಲಿ ಅರ್ಧದಷ್ಟು ಮಕ್ಕಳು ಅಪೌಷ್ಟಿಕತೆ ಅಥವಾ ಅಪಕ್ವ ಬೆಳವಣಿಗೆಯಿಂದ ಬಳಲುತ್ತಿದ್ದಾರೆ.

ಸಮೀಕ್ಷೆಯಲ್ಲಿ 74,020 ತಾಯಂದಿರು, 1,09,093 ಮಕ್ಕಳು ಮತ್ತು ನೂರಾರು ಅಂಗನವಾಡಿ ಕಾರ್ಯಕರ್ತರನ್ನು ಸಂದರ್ಶಿಸಲಾಗಿದೆ.
ಮಕ್ಕಳಲ್ಲಿ ಪೋಷಕಾಂಶದ ಕೊರತೆಯು ಬಡ ಕುಟುಂಬಗಳೇ ಹೆಚ್ಚು. ಮುಸ್ಲಿಮರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಟುಂಬದ ಮಕ್ಕಳ ಆರೋಗ್ಯ ಸ್ಥಿತಿ ಕೂಡ ಶೋಚನೀಯ. ವಿಶ್ವದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಪ್ರತಿ ಮೂರನೇ ಮಗು ಭಾರತೀಯ.

ದೇಶದಲ್ಲಿ ‘ಅಪೌಷ್ಟಿಕತೆ ಹೋಗಲಾಡಿಸಲು ಸಮಗ್ರ ಶಿಶು ಅಭಿವೃದ್ಧಿ ಯೋಜನೆ (Integrated Child Development Scheme-ಐಸಿಡಿಎಸ್)ಯಂತಹ ಬಿಳಿಯಾನೆ ಯೋಜನೆ ಜಾರಿಯಲ್ಲಿದ್ದರೂ ಕೊರತೆ ಪ್ರಮಾಣವನ್ನು ಶೀಘ್ರ ತಗ್ಗಿಸುವ ನಿಟ್ಟಿನಲ್ಲಿ ಯಶಸ್ಸು ಸಾಧಿಸಿಲ್ಲ.

‘ನೀತಿ ನಿರೂಪಕರು ಮತ್ತು ಕಾರ್ಯಕ್ರಮ ಅನುಷ್ಠಾನ ಮಾಡುವವರು ಆರೋಗ್ಯ, ನೈರ್ಮಲ್ಯ, ಕುಡಿಯುವ ನೀರು ಮತ್ತು ಪೌಷ್ಟಿಕತೆ ಒಂದಕ್ಕೊಂದು ಪೂರಕವಾದ ವಲಯಗಳು ಎಂಬುದನ್ನು ಮನಗಾಣಬೇಕು. ಈ ವಲಯಗಳ ಅಗತ್ಯ ಮತ್ತು ಅಪೇಕ್ಷತೆಗೆ ತಕ್ಕ ಯೋಜನೆ ರೂಪುಗೊಳ್ಳಬೇಕು ಹಾಗೂ ಅನುಷ್ಠಾನವಾಗಬೇಕು’ ಎಂಬ ಪ್ರಧಾನಿಗಳ ಪ್ರಲಾಪ “ನನ್ನ ಚಣ್ಣದಲ್ಲಿ ಹೇತವರಾರು?” ಎಂದು ಕೇಳುವ ಬುದ್ಧಿಮಾಂದ್ಯರ ಪ್ರಶ್ನೆಯಂತಿದೆ.

‘ದೇಶದಲ್ಲಿ ಅಪೌಷ್ಟಿಕತೆ ತೀವ್ರವಾಗಿ ಇದೆ ಎನ್ನುವುದನ್ನು ಸಮೀಕ್ಷಾ ವರದಿ ಶ್ರುತಪಡಿಸಿದೆ. ಆದರೆ, ಪ್ರತಿ ಐದು ಮಕ್ಕಳಲ್ಲಿ ಒಂದು ಮಗು ಮಾತ್ರ ಆರೋಗ್ಯಪೂರ್ಣ ಬದುಕಿಗೆ ಅವಶ್ಯವಾದಷ್ಟು ತೂಕವನ್ನು ಹೊಂದಿದೆ ಎಂದು 100 ಜಿಲ್ಲೆಗಳಲ್ಲಿ, 7 ವರ್ಷಗಳ ಅವಧಿಯಲ್ಲಿ ನಡೆಸಿದ ಅಧ್ಯಯನವು ತಿಳಿಸಿದೆ. ಈ ಜಿಲ್ಲೆಗಳಲ್ಲಿ ಮಕ್ಕಳ ಅಭಿವೃದ್ಧಿ ಸ್ಥಿತಿಗತಿ ಶೋಚನೀಯವಾಗಿದೆ. ಶೇ.40ರಷ್ಟು ಮಕ್ಕಳು ನಿಗದಿಗಿಂತ ಕಡಿಮೆ ತೂಕ ಹೊಂದಿದ್ದರೆ, ಶೇ.60ರಷ್ಟು ಮಕ್ಕಳ ಬೆಳವಣಿಗೆ ತೀರಾ ಕುಂಠಿತವಾಗಿದೆ’ ಎಂಬುದನ್ನು ಸಮೀಕ್ಷೆ ಬಯಲಾಗಿಸಿದೆ.

ಕರ್ನಾಟಕದ ಬಾಗಲಕೋಟೆ, ರಾಯಚೂರು, ವಿಜಾಪುರ, ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವ ಮಕ್ಕಳ ಶೇಕಡಾವಾರು ಪ್ರಮಾಣ ಅಧಿಕವಾಗಿದೆ.

ಹೆಣ್ಣುಮಕ್ಕಳೇ ಅಧಿಕ : ಅಪೌಷ್ಟಿಕತೆಗೆ ಒಳಗಾದವರಲ್ಲಿ ಹೆಣ್ಣುಮಕ್ಕಳ ಸಂಖ್ಯೆಯೇ ಅಧಿಕ. ಅಂಗನವಾಡಿ ಕೇಂದ್ರಗಳಲ್ಲಿ 2011ರ ನವೆಂಬರ್ನಲ್ಲಿ ತೂಕ ಪರಿಶೀಲನೆಗೆ ಒಳಗಾದ ಆರು ವರ್ಷದೊಳಗಿನ 33,54,141 ಮಕ್ಕಳಲ್ಲಿ 61,142 ಮಕ್ಕಳ ತೂಕ ತೀವ್ರ ಕಡಿಮೆ ಎಂದು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿ-ಅಂಶಗಳೇ ಹೇಳುತ್ತವೆ. ಪೌಷ್ಟಿಕಾಂಶದ ತೀವ್ರ ಕೊರತೆಯಿಂದ ಬಳಲುತ್ತಿರುವ ಈ ಮಕ್ಕಳಲ್ಲಿ 27,782 ಗಂಡು, 33,360 ಹೆಣ್ಣು.

ಕರ್ನಾಟಕ ರಾಜ್ಯದ ಶೇ.70ರಷ್ಟು ಮಕ್ಕಳಲ್ಲಿ ರಕ್ತಹೀನತೆ ಇದೆ. ಶೇ.50ರಷ್ಟು ಮಕ್ಕಳು ವಯಸ್ಸಿಗೆ ತಕ್ಕ ತೂಕ ಹೊಂದಿಲ್ಲ ಎಂದು ‘ರಾಷ್ಟ್ರ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-3’ (National Family Health Survey ಎನ್ಎಫ್ಎಚ್ಎಸ್-3) ತಿಳಿಸಿದೆ. ಈ ನ್ಯೂನತೆಯು ರೋಗನಿರೋಧಕ ಶಕ್ತಿಗೆ ಸವಾಲಾಗಿದ್ದು, ಮಕ್ಕಳನ್ನು ರೋಗರುಜಿನಗಳಿಗೆ ತುತ್ತಾಗುವಂತೆ ಮಾಡುತ್ತದೆ. ರಕ್ತಹೀನತೆ : ಕರ್ನಾಟಕ ರಾಜ್ಯವೊಂದರಲ್ಲೇ 15ರಿಂದ 45 ವರ್ಷದೊಳಗಿನ ಶೇ.50ರಷ್ಟು ಮಹಿಳೆಯರಲ್ಲಿ ರಕ್ತಹೀನತೆ ಇದೆ ಎಂದು ಎನ್ಎಫ್ಎಚ್ಎಸ್ (2005-06) ವರದಿ ಹೇಳಿದೆ. ಮಕ್ಕಳ ತೂಕ ಕಡಿಮೆಗೆ ಈ ನ್ಯೂನತೆಯೂ ಒಂದು ಕಾರಣ ಎಂದು ಗುರುತಿಸಲಾಗಿದೆ.

ಅಪೌಷ್ಟಿಕತೆಗೆ ಒಳಗಾದವರಲ್ಲಿ ಪರಿಶಿಷ್ಟ ಸಮುದಾಯದ ಮಕ್ಕಳ ಸಂಖ್ಯೆ ಅಧಿಕ ಎಂದು ಎನ್ಎಫ್ಎಚ್ಎಸ್ ವರದಿಯಲ್ಲಿ ಉಲ್ಲೇಖಿಸಿದೆ. ಈ ನ್ಯೂನತೆಗೆ ಒಳಗಾದ ಮಕ್ಕಳು ಹೆಚ್ಚಾಗಿರುವ ಕರ್ನಾಟಕ ರಾಜ್ಯದ ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಜನರು ರಾಜ್ಯದ ಸರಾಸರಿಗಿಂತ ಅಧಿಕ ಸಂಖ್ಯೆಯಲ್ಲಿ ಇದ್ದಾರೆ ಎಂಬುದು ಮತ್ತೊಂದು ವಿಪರ್ಯಾಸ.

‘ಅಪೌಷ್ಟಿಕತೆ ಬರಿ ವೈದ್ಯಕೀಯ ಸಮಸ್ಯೆ ಅಲ್ಲ. ಆರ್ಥಿಕ, ಶೈಕ್ಷಣಿಕ ಅಂಶಗಳ ಜತೆ ಅನೇಕ ಸಾಮಾಜಿಕ ಕಾರಣಗಳೂ ಸೇರಿಕೊಂಡಿವೆ. ಜೀವನಶೈಲಿ, ಆಹಾರ ಪದ್ಧತಿ, ಮನೋಭಾವ, ನಂಬಿಕೆ, ಆಚರಣೆಗಳು, ಕೂಲಿ ಅರಸಿ ವಲಸೆ ಹೋಗುವ ಪ್ರವೃತ್ತಿ ಸೇರಿದಂತೆ ಇನ್ನೂ ಹಲವಾರು ಅಂಶಗಳು ಇದಕ್ಕೆ ಕಾರಣಗಳು.

ಕೇವಲ ಮೇಲ್ ವರ್ಗ ಮತ್ತು ಮೇಲ್ ಜಾತಿಗಳ ಉದ್ಧಾರ ಮತ್ತು ಉನ್ನತಿಗಳನ್ನೇ ಜಪಿಸಿ ನೀತಿ ನಿಯಮಗಳನ್ನು ಜಾರಿಗೆ ತರುತ್ತಿರುವ ನವ ಉದಾರೀಕರಣದ ಸರದಾರರಾದ ಕಾಂಗ್ರೇಸ್, ಬಿಜೆಪಿ, ಮತ್ತಿತರ ಬಂಡವಾಳಶಾಹಿ ಅನುಯಾಯಿಗಳಿಂದ ಈ ರೀತಿಯ ಹುದುಗಿರುವ ಅಂತರ್ರಚನೆಯ ಸಮಸ್ಯೆ-ಸವಾಲುಗಳಿಗೆ ಉತ್ತರ ಹುಡುಕಲಾಗದು. ಆಂಧ್ರದ 20ನೇಯ ಶತಮಾನದ ಪ್ರಗತಿಶೀಲ ಕವಿ ಗುರುಜಾಡ ಅಪ್ಪರಾವು ಬರೆದಂತೆ “ದೇಶಮಂಟೆ ಮಟ್ಟಿ ಕಾದೋಯ್-ದೇಶಮಂಟೆ ಮನುಜುಲು” ಎಂಬ ಸರ್ವತೋಮುಖ ಅಭಿವೃದ್ಧಿ ಕೇವಲ ವಿಶಾಲ ಜನಾಧಾರಿತ ಪ್ರಜಾತಾಂತ್ರಿಕ ಸಮಾಜವಾದಿ ವ್ಯವಸ್ಥೆಯಿಂದ ಮಾತ್ರ ಸಾಧ್ಯ..

ಜಗದೀಶ್  ಜಿ  ಚಂದ್ರ