ಮರಣ ದಂಡನೆ ನಿಲ್ಲಲಿ

Murugan Santhan and Perarivalan

ಮರಣ ದಂಡನೆಯ ವಿರುದ್ಧ ನಡೆಯುತ್ತಿರುವ ಈ ಹೋರಾಟ ನಾನು ಗಳಿಸುವ ಗೆಲುವು ಸೋಲುಗಳಿಂದ ಮಾತ್ನಿರ್ಧಾರವಾಗದು. ಜಗತ್ತಿನಾದ್ಯಾಂತ ಜೈಲುಗಳಲ್ಲಿ ಕೊಳೆಯುತ್ತಿರುವ ಪ್ರತಿ ನಿರ್ಧೋಶಿಷಿ ಅಮಾಯಕ ಮನುಜನೂ ನಮ್ಮ ಒಟ್ಟಾರೆ ಪ್ರಯತ್ನದಿಂದ ರಕ್ಷಿತನಾಗಬೇಕು. ಈ ನ್ಯಾಯ ಸಮ್ಮತವಲ್ಲದ ವ್ಯವಸ್ಥೆಯನ್ನು ಪ್ರತಿ ನಗರದಿಂದ, ಪ್ರತಿ ರಾಜ್ಯಗಳಿಂದ ಮತ್ತು ಪ್ರತಿ ದೇಶಗಳಿಂದ ತೆಗೆದು ಹಾಕುವುದು ಒಂದು ಜರೂರಿ ಅನಿರ್ವಯ. (ಟ್ರಾಯ್ ಡೇವಿಸ್, ಸೆಪ್ಟೆಂಬರ್ 21, 2011ರಂದು ಅಮೇರಿಕಾದಲ್ಲಿ ಗಲ್ಲಿಗೇರಿಸಲಾಯಿತು)

ಮರಣ ದಂಡನೆಯ ವಿಚಾರ ವಿಶ್ವದಾದ್ಯಂತ ತೀವ್ರ ಗೊಂದಲವನ್ನುಂಟುಮಾಡುವ ಬಹುಚರ್ಚಿತ ವಿಷಯ. ಈ ವಿವಾದಿತ ಸಮಸ್ಯೆಯ ಬಗ್ಗೆ ಪರ ಅಥವಾ ವಿರೋಧ ಅಷ್ಟು ಸುಲಭವಲ್ಲ. ಸಮಾಜದಲ್ಲಿ ಬೇರೂರಿರುವ ನೀತಿ ನಿಯಮಗಳು, ಅಪರಾಧ-ಶಿಕ್ಷೆಗಳ ಮೌಲ್ಯಗಳು ಮತ್ತು ಮಾಧ್ಯಮದ ಅಬ್ಬರ ಪ್ರಚಾರಗಳಿಂದ ಪ್ರೇರೇಪಿತವಾದ ನ್ಯಾಯ ವಿನಿಯೋಗ, ಮಾನವ ಹಕ್ಕುಗಳ ಬಗ್ಗೆ ಅತ್ಯಂತ ತೀವ್ರ ಕಾಳಜಿ ಹೊಂದಿರುವವರನ್ನೂ ಮತ್ತು ಅದರ ಪ್ರತಿಪಾದನೆಗೆ ಎಲ್ಲ ರೀತಿಯ ರಾಷ್ಟ್ರ, ವರ್ಣ, ಧರ್ಮ, ಭಾಷೆ ಮತ್ತು ಲಿಂಗತ್ವದ ಗಡಿ ಮಿತಿಗಳನ್ನು ಮೀರಲ್ಛಿಸುವವರ ಯುಕ್ತಾಯುಕ್ತ ಪರಿಜ್ಞಾನವನ್ನು ವಿಚಲಗೊಳಿಸುತ್ತದೆ.

ಆದರೆ ಚರಿತ್ರೆಯಲ್ಲಿ, ಮಾನವೀಯ ಮತ್ತು ನ್ಯಾಯಯುತ ಸಮಾಜದ ನಿಮರ್ಾಣಕ್ಕಾಗಿ ನಡೆದ ನಿರಂತರ ಕಡು ಹೋರಾಟವೇ ಇಂದು ಜಗತ್ತನ್ನು ಗತಕಾಲದ ಬರ್ಬರತೆಯಿಂದ ಆಧುನಿಕ ಮತ್ತು ಪ್ರಗತಿಶೀಲ ಸಾಮಾಜಿಕ ಮೌಲ್ಯಗಳನ್ನು ತನ್ನದಾಗಿಸಿಕೊಳ್ಳುವಂತೆ ಮಾಡಿದೆ. ಪ್ರಪಂಚದಾದ್ಯಂತ ರಾಜ್ಯ ವ್ಯವಸ್ಥೆ ಮತ್ತು ಆಳುವ ವರ್ಗಗಳು, ತಮ್ಮ ಅನ್ಯಾಯದ ಆಳ್ವಿಕೆಯನ್ನು ನಿರಂತರವಾಗಿಸಲು ಸಮಾಜದ ಮೂಲಭೂತ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದಮನವನ್ನು ಮಾಡುತ್ತಲೇ ಬಂದಿರುವುದು ಸರ್ವವಿಧಿತ. ಅದರಲ್ಲೂ ತಮ್ಮ”ರಾಷ್ಟ್ರ ವ್ಯವಸ್ಥೆ” ಕಲ್ಪನೆಗೆ ಧಕ್ಕೆ ತರುವ, ಸವಾಲೆಸೆಯುವ ಬಂಡಾಯವಾದಿ ಘಟನೆಗಳನ್ನು ಹತ್ತಿಕ್ಕಲು ನ್ಯಾಯ ವಿನಿಯೋಗದ ನೆಪದಲ್ಲಿ ಭೀಕರ “ಉದಾಹರಣೆಗಳನ್ನು” ನಿರ್ಮಿಸಿದ್ದಾರೆ.

ಆದರೆ ಪ್ರಶ್ನೆ, ಮರಣ ದಂಡನೆಯ ಶಿಕ್ಷೆ ಸಮಾಜದಲ್ಲಿ ಬೇರೂರಿರುವ ಅಪರಾಧ ಮತ್ತು ಹಿಂಸೆಯ ಚಕ್ರವ್ಯೂಹಕ್ಕೆ ಮದ್ದೇ? ಬಹಳಷ್ಟು ಬಾರಿ ಹಿಂಸೆಯ ಘಟನೆಗಳು ಅದರಲ್ಲೂ ದಮನಕಾರಿ ರಾಜ್ಯ ವ್ಯವಸ್ಥೆಯ ವಿರುದ್ಧ ಭುಗಿಲೇಳುವ ಬಂಡಾಯಗಳು ಹತಾಶೆ ಮತ್ತು ಅಸಹಾಯಕ ಪರಿಸ್ಥಿತಿಗಳಿಂದಲೇ ಉಗಮವಾದುದ್ದಲ್ಲವೇ?.
ಇತ್ತೀಚೆಗೆ ಭಾರತದಲ್ಲಿ ತಮಿಳು ಭಾಷಿಕರಾದ ಪೇರರಿವಾಳನ್, ಮುರುಗನ್, ಮತ್ತು ಶಾಂತನ್ರವರು ಎದುರಿಸುತ್ತಿರುವ ಮರಣದಂಡನೆಯ ಶಿಕ್ಷೆ ಚರ್ಚೆಯಲ್ಲಿದೆ. ಈ ಮೂವರು ರಾಜೀವ್ ಗಾಂಧಿಯವರ ಬರ್ಬರ ಕಗ್ಗೊಲೆಯ ಪ್ರಕರಣದಲ್ಲಿ ಅಪಾದಿತರಾಗಿದ್ದು, ಅಪರಾಧಿಗಳೆಂದು ನಿರ್ಣಯಕ್ಕೆ ಬರಲಾಗಿದೆ. ಇವರೆಲ್ಲರೂ ಕಳೆದ 19 ವರ್ಷಗಳ ಕಾಲ ಬಂಧೀಖಾನೆಯಲ್ಲಿ ಜೀವ ಸವೆಸಿದ್ದಾರೆ, ಆ ಮೊತ್ತದ ಶಿಕ್ಷೆಯ 12 ವರುಷಗಳಂತೂ ಮರಣ ದಂಡನೆಯ ಜಾರಿಯನ್ನು ಕಾದು ಪ್ರತಿನಿತ್ಯ ಮತ್ತು ಪ್ರತಿ ಕ್ಷಣಗಳಲ್ಲೂ ಮತ್ತೆ ಮತ್ತೆ ಸಾವನ್ನಪ್ಪಿದ್ದಾರೆ.

ಈ ದೇಶದ ನ್ಯಾಯಾಲಯ ಮತ್ತು ವ್ಯವಸ್ಥೆ ತಮ್ಮ ನಿರ್ಣಯಗಳನ್ನು ಪ್ರತಿಪಾದಿಸಿದ್ದರೂ ಈ ಮೂವರಿಗೂ ಸರಿಯಾದ ನ್ಯಾಯ ದಕ್ಕಿದೆಯೇ ಎಂಬುದು ಇನ್ನೂ ವಿವಾದವಾಗಿಯೇ ಉಳಿದಿದೆ. ಉದಾಹರಣೆಗೆ ಪೇರರಿವಾಳನನ್ನು ಕೊಲೆಯ ಸಂಚಿನಲ್ಲಿ ಪಾಲ್ಗೊಂಡನೆಂಬ ಅಪರಾಧಕ್ಕೆ ಶಿಕ್ಷೆ ವಿಧಿಸಿದ್ದರೂ ಫಿರ್ಯಾದುದಾರರು ಒದಗಿಸಿರುವ ಸಾಕ್ಷಿಗಳು ಅತ್ಯಂತ ಅನುಮಾನಾಸ್ಪದ. ಆತ ಎಲೆಕ್ಟ್ರಾನಿಕ್ಸ್ ತಾಂತ್ರಿಕತೆಯ ಪದವೀಧರ, ಮತ್ತು 9 ವೋಲ್ಟಿನ ಬ್ಯಾಟರಿ ಸೆಲ್ ಒಂದನ್ನು ಕೊಲೆಗಾರರಿಗೆ ‘ಕೊಟ್ಟಿದ್ದ’ ಎಂಬುದನ್ನೇ ಪೇರರಿವಾಳನ ವಿರುದ್ಧ ಸಿಕ್ಕಿರುವ ಪ್ರಚಂಡ ಸಾಕ್ಷಿ ಎಂದು ಅವನನ್ನು ಅಪರಾಧಿಯಾಗಿಸಿರುವುದು ನ್ಯಾಯ ಎಂಬ ಕಲ್ಪನೆಗೆ ಎಸಗಿರುವ ದ್ರೋಹ.

ಭಾರತದ ನಾಗರೀಕ ಸಮಾಜ ಮಾನವ ಹಕ್ಕುಗಳನ್ನು ಕಾಪಾಡುವ ಆದ್ಯತೆಯನ್ನು ಗುರುತಿಸಿ, ಪ್ರಜಾತಾಂತ್ರಿಕ ಸಮಾಜದ ಆಗುಹೋಗುಗಳ ಮೇಲೆ ಕಳಂಕಪ್ರಾಯವಾಗಿರುವ ಮರಣ ದಂಡನೆಯ ಬರ್ಬರ ರಿವಾಜನ್ನು ಕೊನೆಗೊಳಿಸಲು ಕಾರ್ಯೋನ್ಮುಖವಾಗಬೇಕಿದೆ. ಮರಣ ದಂಡನೆ ಯಾವುದೇ ತೀವ್ರ ಅಪರಾಧಗಳನ್ನೂ ತಡೆಯುವಲ್ಲಿ ವಿಫಲವಾಗಿದೆ. ಬದಲಾಗಿ ಎಲ್ಲಾ ಅಪರಾಧಗಳ ತಡೆಗೆ ಒಂದು ಮಾನವೀಯ, ಪ್ರಜಾತಾಂತ್ರಿಕ ನ್ಯಾಯ ವ್ಯವಸ್ಥೆ ಜರೂರಿಯಿದೆ. ಮೂಲಭೂತವಾಗಿ ನಮ್ಮ ಮುಂದಿರುವ ಸವಾಲೆಂದರೆ ಸಮಾಜದ ಅಂತರ್ರಚನೆಯ ಹಂದರಗಳಲ್ಲೇ ಹುದುಗಿರುವ ರಾಜ್ಯ ವ್ಯವಸ್ಥೆಯ ಮತ್ತು ಅದರಿಂದಾಚೆಯ ಹಿಂಸೆಗಳನ್ನು ಕೊನೆಗಾಣಿಸುವ ನೈಜ ಪ್ರಜಾತಾಂತ್ರಿಕ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡುವುದೇ ಆಗಿದೆ.

ಜಗದೀಶ್ ಜಿ ಚಂದ್ರ

ನವ ಸಮಾಜವಾದಿ ಪರ್ಯಾಯ, ಬೆಂಗಳೂರು