ಬಡವರ, ಹಿಂದುಳಿದವರ ಆಶಾಕಿರಣ – ಸರ್ಕಾರಿ ಕನ್ನಡ ಮಾದರಿ ಶಾಲೆಗಳು

ಕನ್ನಡ ಕಲಿಕೆ ಕಾಣೆಯಾದೀತು ಜೋಕೆ!

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ 3,174 ಶಾಲೆಗಳನ್ನು ಮುಚ್ಚಲು ಹೊರಟಿರುವ ಬಿಜೆಪಿ ಸರ್ಕಾರದ ಕ್ರಮ ಖಂಡನೀಯ. ಇದುವರೆಗೆ ರಾಜ್ಯದಲ್ಲಿ ಹತ್ತು ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಿದ್ದು ಪ್ರಸಕ್ತ ಶೈಕ್ಷಣಿಕ ವರ್ಷತ್ಯಕ್ಕೆ ಮತ್ತಷ್ಟು ಶಾಲೆಗಳು ಬಾಗಿಲು ಮುಚ್ಚಲಿವೆ.

ಸರ್ಕಾರಿ ಶಾಲೆಗಳಿಗೆ ವಿಧ್ಯಾರ್ಥಿಗಳು ಬರುತ್ತಿಲ್ಲ ಎಂಬ ನೆಪವೊಡ್ಡಿ, ಹಾಗಾಗಿ ಶಾಲೆಗಳನ್ನು ಮುಚ್ಚ ಬೇಕಾಗಿದೆ ಎಂಬ ಶಿಕ್ಷಣ ಸಚಿವರ ಹೇಳಿಕೆ ವಿವೇಚನೆಯಿಲ್ಲದ್ದು.

ವಿಧಾನ ಸಭೆ ಮತ್ತು ವಿಧಾನ ಪರಿಷತ್ತುಗಳಲ್ಲಿ ಯಾವುದೇ ಚರ್ಚೆ ನಡೆಸದೇ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿರುವುದು ಪ್ರಜಾತಂತ್ರ ವಿರೋಧಿ ಮಾತ್ರವಲ್ಲದೇ ಬಿಜೆಪಿಯ ಸರ್ವಾಧಿಕಾರತ್ವದ ಧೋರಣೆಯನ್ನು ಹೊರಹಾಕಿದೆ.

ಕಳೆದ ಎರಡು ದಶಕಗಳಿಂದಲೂ ಅಧಿಕಾರದ ಚುಕ್ಕಾಣಿ ನಡೆಸಿದ ಕಾಂಗ್ರೇಸ್, ಜನತಾದಳ, ಬಿಜೆಪಿ, ಸರ್ಕಾರಗಳ ಆಡಳಿತ ನೀತಿಗಳು ಒಂದೇ ಆಗಿವೆ.

ಸರ್ಕಾರಿ ಶಾಲೆಗಳಲ್ಲಿ 4-5 ಮಕ್ಕಳಿದ್ದರೂ ಶಾಲೆಗಳನ್ನು ಮುಚ್ಚಬಾರದೆಂಬ 1994-95ರ ಆದೇಶವನ್ನು ಈ ಎಲ್ಲಾ ಪಕ್ಷಗಳು ಸ್ವಹಿತಾಸಕ್ತಿಗಾಗಿ ಉಲ್ಲಂಘಿಸಿವೆ. ಮಾತ್ರವಲ್ಲದೇ ಆ ಸುತ್ತೋಲೆಯನ್ನು ಮೂಲೆಗುಂಪಾಗಿಸಿವೆ.

1994ರಿಂದ ಯಾವುದೇ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡಬಾರದೆಂಬ ಆದೇಶವಿದ್ದರೂ ಬೀದಿ ಬೀದಿಗಳಲ್ಲಿ ಮಾತೃಭಾಷಾ ಶಿಕ್ಷಣದ ಹೆಸರಿನಲ್ಲಿ ಆಂಗ್ಲ ಮಾಧ್ಯಮದ ಶಾಲೆಗಳನ್ನು ಆರಂಭಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಉದಾರವಾಗಿ ಅನುಮತಿ ನೀಡುತ್ತಿರುವುದರ ಹಿಂದೆ ಶಿಕ್ಷಣ ಖಾಸಗೀಕರಣದ ವ್ಯವಸ್ತಿತ ಸಂಚು ಮುಂದುವರೆದಿದೆ.

ನಗರ ಮತ್ತು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಕಡು ಬಡವರಾಗಿರುವುದಲ್ಲದೇ, ಬಹುಪಾಲು ಮಕ್ಕಳು ತಳ ಸಮುದಾಯದವರೇ. ಬಡ ಮಕ್ಕಳು ಮತ್ತು ದೂರದ ಶಾಲೆಗಳಿಗೆ ಹೋಗಲಾರದ ಹೆಣ್ಣು ಮಕ್ಕಳು ಸರ್ಕಾರದ ಈ ಜನ ವಿರೋಧಿ ನಿರ್ಧಾರದಿಂದ ಅನ್ಯಾಯಕ್ಕೆ ತುತ್ತಾಗಿ, ಶಿಕ್ಷಣದಿಂದ ವಂಚಿತರಾಗಲಿದ್ದಾರೆ.

ಸಸರ್ಕಾರಗಳ ಜನಪ್ರತಿನಿಧಿಗಳು ಬಾಯಲ್ಲಿ ಹೇಳುವ ಮಾತು ಒಂದು. ಆದರೆ ಅವರ ಕಾರ್ಯವೈಖರಿ ಮತ್ತೊಂದು. ಯಾವಾಗಲೂ ಒಂದಕ್ಕೊಂದು ವ್ಯತಿರಿಕ್ತವೇ.

ಒಂದು ಕಡೆ ಅಮೇರಿಕಾದ ಲಿಬೇರ್ತಿ ಸ್ಟ್ಯಾಚ್ಯು (ಸ್ವತಂತ್ರ ದೇವತೆ) ಪ್ರತಿಮೆಯ ಮಾದರಿಯಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ಬಜೆಟ್ನಲ್ಲಿ ರೂ.25 ಕೋಟಿ ಸರ್ಕಾರದ ಅನುದಾನ, ಮಗದೊಂದು ಕಡೆ ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಎಂದು ಸರ್ಕಾರಿ ಶಾಲೆಗಳಿಗೆ ಬೀಗ ಜಡೆಯುವ ತೀರ್ಮಾನ.

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ- ಮಾನದ ಸಂಭ್ರಮಾಚರಣೆಯ ಸಂದರ್ಭದಲ್ಲೇ, ಶಾಸ್ತ್ರೀಯವಾಗಿ ಭಾಷೆ ಕಲಿಯಲು ನೆಲೆಯಾಗಿರುವ ಸರ್ಕಾರಿ ಕನ್ನಡ ಶಾಲೆಗಳನ್ನೇ ಮುಚ್ಚಿದರೆ ಆ ಭಾಷೆಯ ಶಾಸ್ತ್ರೀಯ ಸ್ಥಾನ ಮಾನಕ್ಕೆ ಬೆಲೆ ಉಂಟೇ? ಭಾಷೆ ಉಳಿಯುವುದಾದರೂ, ಬೆಳೆಯುವುದಾದರೂ ಹೇಗೆ ?

ಮುಚ್ಚಲು ಹೊರಟಿರುವ ಸರ್ಕಾರಿ ಶಾಲೆಗಳು ಕನ್ನಡ ಕಲಿಸುತ್ತಿರುವ ಶಾಲೆಗಳು ಮಾತ್ರವಲ್ಲ. ಮೇಲಾಗಿ ಬಡವರ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ಶಾಲೆಗಳು. ಇವುಗಳನ್ನೂ ಮುಚ್ಚುವುದೆಂದರೆ ಕನ್ನಡಕ್ಕೂ, ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೂ ಮಂಗಳ ಹಾಡಿದಂತೆ.

ಕನ್ನಡ ರಾಜ್ಯೋತ್ಸವಗಳನ್ನು, ಪ್ರಶಸ್ತಿ ಪ್ರಧಾನ ಸಮಾರಂಭಗಳನ್ನು, ಸಾಹಿತ್ಯ ಸಮ್ಮೇಳನಗಳನ್ನು ಆದ್ದೂರಿಯಾಗಿ ಆಚರಿಸುವುದಕ್ಕೆ ಸರ್ಕಾರ ತೋರುವ ಪ್ರೀತಿ, ಸರ್ಕಾರಿ ಶಾಲೆಗಳಿಗೆ ಮಕ್ಕಳು ಏಕೆ ಬರುತ್ತಿಲ್ಲ ಎಂಬುದನ್ನು ಪತ್ತೆ ಹಚ್ಚಿ ಸರಿ ಪಡಿಸುವುದಕ್ಕೆ ಏಕೆ ಆಸಕ್ತಿ ಇಲ್ಲ ? ಜನಪ್ರತಿನಿಧಿಗಳಿಗೆ ಪುರುಸೋತ್ತಿಲ್ಲಮೋ, ಅಥವಾ ಸರ್ಕಾರಿ ಕನ್ನಡ ಶಾಲೆಗಳನ್ನು ನಡೆಸುವುದರಿಂದ ಲಾಭವಿಲ್ಲವೋ?

ಎಲ್ಲಾ ರಾಜಕೀಯ ಪಕ್ಷಗಳ ಪ್ರತಿಷ್ಠಿತ ಸದಸ್ಯರು ಖಾಸಗಿ ಶಿಕ್ಷಣ ಸಂಸ್ಥೆಯ ಒಡೆಯರಾಗಿದ್ದು, ಅವರಿಗೆ ಕನ್ನಡ ಸರ್ಕಾರಿ ಶಾಲೆಗಳಿಗಿಂತ ಆಂಗ್ಲ ಮಾಧ್ಯಮದ ಶಾಲೆಗಳು ಗಳಿಸುವ ಲಾಭ ಮುಖ್ಯವಾಗಿದೆ.

ಕೇಂದ್ರ ಸರ್ಕಾರದ ಕಡ್ಡಾಯ ಮತ್ತು ಉಚಿತ ಶಿಕ್ಷಣ ಹಕ್ಕು ಕಾಯಿದೆ-2009, ಜಾರಿಯಾದ ಮೇಲೆ ಖಾಸಗಿ ಒಡೆತನದ ಶಿಕ್ಷಣ ಸಂಸ್ಥೆಗಳಿಗೆ ಶುಕ್ರದೆಸೆ. ಇದು ಖಾಸಗಿ ಮಾಲಿಕರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವ ಪೂರ್ವನಿಯೋಜಿತ ಕಾಯಿದೆಯೇ ಎಂಬ ಅನುಮಾನ ಕಾಡುತ್ತದೆ.

ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುತ್ತೇವೆಂದು ಘೋಷಣೆ ಕೂಗುವ ಸರ್ಕಾರಗಳೇ, ಕುಂಟು ನೆಪಗಳನ್ನೊಡ್ಡಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಮುಖಾಂತರ ತಾವು ಹೊರಬೇಕಾದ ಸಾಮಾಜಿಕ ಜವಾಬ್ದಾರಿಗಳಿಂದ ತಪ್ಪಿಸಿ ಕೊಳ್ಳುವ ಕುತಂತ್ರವೇ ಇದಾಗಿದೆ.

* ಸರ್ಕಾರಿ ಶಾಲೆಗಳನ್ನು ಮುಚ್ಚುವ ಜನವಿರೋಧಿ ನಿರ್ಧಾರಕ್ಕೇ ಧಿಕ್ಕಾರವಿರಲಿ.
* ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವ ನಿರ್ಧಾರ ಈ ಕೂಡಲೇ ವಾಪಸ್ಸಾಗಲಿ.
* ಬಡಜನ ಹಾಗೂ ಗಾಮವಾಸಿ ಮಕ್ಕಳಿಗೆ ಮಾತೃಭಾಷೆ ಕನ್ನಡವನ್ನು ಕಲಿಸುವ ಸರ್ಕಾರಿ ಶಾಲೆಗಳು ಉಳಿಯಲಿ.
* ಸ್ಥಳೀಯ, ಮಾತೃಭಾಷೆಗಳಲ್ಲಿ ಶಿಕ್ಷಣ ನೀಡುತ್ತೇವೆಂದು ಪರವಾನಗಿ ಪಡೆದು, ಅವೈಜ್ಞಾನಿಕವಾದ, ಎಡಬಿಡಂಗಿ ಆಂಗ್ಲ
ಮಾಧ್ಯಮ ಶಾಲೆಗಳನ್ನು ತೆರೆದು ಶಿಕ್ಷಣದ ದಂಧೆ ನಡೆಸುತ್ತಿರುವ ಲಾಭಕೋರರ ವಿರುದ್ಧ ಕಾನೂನು ಕ್ರಮ ಜಾರಿ, ಹಾಗೂ ತಪ್ಪಿತಸ್ಥರಿಗೆ ಆಸ್ತಿ ಜಪ್ತಿ ಮತ್ತು ಜೈಲುವಾಸದ ಶಿಕ್ಷೆಯಾಗಲಿ.

ವಿಶ್ವ.

ನವ ಸಮಾಜವಾದಿ ಪರ್ಯಾಯ, ಬೆಂಗಳೂರು.