“ದಯವೇ ಧರ್ಮದ ಮೂಲವಯ್ಯ” ಗೋ ರಕ್ಷಕರಿಂದ ನರ ಹತ್ಯೆ

ನವೆಂಬರ್ 1 ರಂದು ನೆಲಮಂಗಲದ ಬಳಿ ಜಾನುವಾರು ಸಾಗಿಸುತ್ತಿದ್ದ ಕ್ಯಾಂಟರ್ ವಾಹನ ಚಾಲಕ ಕೃಷ್ಣಪ್ಪನವರ ಕಗ್ಗೊಲೆ ಖಂಡನೀಯ. ಪ್ರಾಣಿ ದಯಾ ಸಂಘಕ್ಕೆ ಸೇರಿದ ಕಾರ್ಯಕರ್ತರು ಕೃಷ್ಣಪ್ಪರವರ ಮೇಲೆ ಹಲ್ಲೆ ನಡೆಸಿ ಫ್ಲೆ ಓವರ್ ನಿಂದ ಕೆಳಕ್ಕೆ ತಳ್ಳಿ ಭೀಕರವಾಗಿ ಹತ್ಯೆ ಮಾಡಿರುವುದಲ್ಲದೇ ಕ್ಲೀನರ್ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕನಿಗೂ ಎಗ್ಗಮಗ್ಗ ಹೊಡೆದಿರುವುದು ಘೋರ ಅಪರಾಧ.

ಇದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾನುವಾರು ಸಾಗಾಣಿಕೆ ವಿಷಯಗಳಲ್ಲಿ ಹಿಂದೂ ಸಂಸ್ಕೃತಿಯ ಸ್ವಯಂ ಘೋಷಿತ ಗುತ್ತಿಗೆದಾರರು ರಾಜಾರೋಷವಾಗಿ ಹಲ್ಲೆ-ಹತ್ಯೆ ಮಾಡಿದ ಮೊದಲ ಪ್ರಕರಣವೇನಲ್ಲ. ಜಾನುವಾರಗಳನ್ನು ಕಸಾಯಿಖಾನೆಗಳಿಗೆ ಸಾಗಿಸುತ್ತಿದ್ದಾರೆಂದು ವಾಹನಗಳನ್ನು ಹಿಂಬಾಲಿಸಿ, ಅಡ್ಡಗಟ್ಟಿ ವಾಹನ ಚಾಲಕರ, ಕ್ಲೀನರ್ಗಳ ಮೇಲೆ ಹಲ್ಲೆ ಮಾಡಿ ಅವರಗಳ ಬಳಿ ಇದ್ದ ಹಣ ಒಡವೆಗಳನ್ನು ದೋಚುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದರೂ ಸಂಬಂಧ ಪಟ್ಟ ಪೊಲೀಸ್ ಇಲಾಖೆಯವರು ಯಾವುದೇ ರೀತಿಯ ಕಾನೂನಿನ ಕ್ರಮವನ್ನು ಕೈಗೊಳ್ಳದೆ ಪರೋಕ್ಷವಾಗಿ ಹಿಂದೂ ಮತಾಂಧರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ.

ಅಲ್ಪಸಂಖ್ಯಾತರ ಮೇಲಿನ ಧಾಳಿಗಳು, ದಲಿತರ ಕಗ್ಗೊಲೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರಾಜ್ಯದಲ್ಲಿ ಆತಂಕದ ವಾತಾವರಣ ಉಂಟಾಗುತ್ತಿದೆ. ಕರಾವಳಿ ಮತ್ತು ಹಲವು ಕಡೆಗಳಲ್ಲಿ ಅನೇಕ ಬಾರಿ ಜಾನುವಾರು ಸಾಗಾಟ ಮತ್ತು ವ್ಯಾಪಾರದ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಯವರೆ ತಟಸ್ಥರಾಗಿದ್ದು ಹಲ್ಲೆಗೀಡಾದವರ ಮೇಲೆಯೇ ಕೇಸು ದಾಖಲಿಸಿ, ಆರೋಪಿಗಳಿಗೆ ರಕ್ಷಣೆ ಮಾಡುತ್ತಿರುವ ನಿದರ್ಶನಗಳಿವೆ.

‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಮಸೂದೆ-2010’ ರಾಜ್ಯದಲ್ಲಿ ಜಾರಿಗೆ ತರಲು ಕೋಮುವಾದಿ ಪಕ್ಷ ಟೊಂಕ ಕಟ್ಟಿ ನಿಂತಿದೆ. ಉಭಯ ಸದನಗಳಲ್ಲಿ ಯಾವುದೇ ಚರ್ಚೆಗಳಿಗೆ ಅವಕಾಶ ನೀಡದೇ ಬಿಜೆಪಿ ಒಪ್ಪಿಗೆ ನೀಡಿದೆ. ಆದರೆ ರೈತರ, ಅಲ್ಪಸಂಖ್ಯಾತರ ಮತ್ತು ದಲಿತರ ವಿರೋಧಿಯಾದ ಈ ಕಾಯ್ದೆ ಅನುಷ್ಠಾನಕ್ಕಾಗಿ ರಾಷ್ಟ್ರಪತಿಯವರ ಸಮ್ಮುಖದಲ್ಲಿದೆ.

ಒಂದು ವೇಳೆ ರಾಷ್ಟ್ರಪತಿಯವರು ಈ ಮಸೂದೆಗೆ ಅಂಕಿತ ನೀಡಿದರೆ ಆ ದಿನ ಕರ್ನಾಟಕ ರಾಜ್ಯಕ್ಕೆ ಕರಾಳ ದಿನವಾಗಲಿದೆ.

ಮಸೂದೆಗೆ ಇನ್ನೂ ಅನುಮತಿ ದೊರೆಯದೇ ಇರುವಾಗಲ್ಲೇ ಇಷ್ಟೆಲ್ಲಾ ಅನಾಹುತಗಳು ನಡೆಯುತ್ತಿದ್ದು, ಒಂದು ವೇಳೆ ಮಸೂದೆ ಅನುಷ್ಠಾನ ಗೊಂಡಲ್ಲಿ ರಾಜ್ಯದಲ್ಲಿ ಇನ್ನೆಷ್ಟು ದೌರ್ಜನ್ಯಗಳು ನಡೆಯಲಿವೆಯೋ ಎಂಬುದನ್ನು ಊಹಿಸಲಾಸಾಧ್ಯ. ಹಿಂದೂ ಸಂಸ್ಕೃತಿಯ ರಕ್ಷಣೆಯ ಹೆಸರಿನಲ್ಲಿ ಗೂಂಡಾಗಿರಿ ನಡೆಸುತ್ತಿರುವವರು ಇನ್ನೆಷ್ಟು ರಾದ್ಧಾಂತವನ್ನು ರಾಜ್ಯದಲ್ಲಿ ಸೃಷ್ಟಿಸುತ್ತಾರೋ?

* ನೆಲಮಂಗಲದಲ್ಲಿ ಕೊಲೆಗೀಡಾದ ಕೃಷ್ಣಪ್ಪನವರ ಕುಟುಂಬಕ್ಕೆ ಸರ್ಕಾರ ರೂ. 10 ಲಕ್ಷ ಪರಿಹಾರ ಒದಗಿಸಬೇಕು. ಮತ್ತು ಅವರ ಪತ್ನಿ, ಮಕ್ಕಳಿಗೆ ಸರ್ಕಾರ ಉದ್ಯೋಗ ನೀಡಬೇಕು.

* ಕೃಷ್ಣಪ್ಪನವರನ್ನು ಕಗ್ಗೊಲೆ ಮಾಡಿದ ಖೋಟಾ ಪ್ರಾಣಿದಯಾ ಸಂಘದವರಿಗೆ ಈ ಕೂಡಲೇ ಕಠಿಣ ಶಿಕ್ಷೆಯಾಗಲಿ.

* ಅಲ್ಪಸಂಖ್ಯಾತ ಹಾಗು ದಲಿತ ಜನಾಂಗಗಳ ಆಹಾರ ಸಂಸ್ಕೃತಿಯ ಮೇಲೆ ನಡೆಯುತ್ತಿರುವ ಧಾಳಿ ನಡೆಸುತ್ತಿರುವ ಕೋಮುವಾದಿಗಳಿಗೆ ಧಿಕ್ಕಾರ

– ದುಡಿಯೋರ ಹೋರಾಟದ ವರದಿ