ರಥಯಾತ್ರೆಯೂ ತಿರುಕನ ಕನಸೂ…………….!

ಹೋಲಿಕೆಗಳು ರಾಜಕೀಯದಲ್ಲಿ ಸಾಮಾನ್ಯವಾದರೂ ಅಪೇಕ್ಷಿತವಲ್ಲ. ಆದರೆ ಇಂದಿನ ಎಡಬಿಡಂಗಿ ರಾಜಕಾರಣ, ಆರವತ್ತು -ಎಪ್ಪತ್ತರ ದಶಕಗಳ “ತರುಣರಿಗೆ”, ಶಾಲೆಗಳಲ್ಲಿ ಕಲಿತ ಪಾಠ-ಪದ್ಯಗಳನ್ನು ಬೇಡೆಂದರೂ ನೆನಪಿಸುತ್ತದೆ. ಆದ್ವಾನಿಯವರ ಇತ್ತೀಚಿನ ರಥಯಾತ್ರೆ “ತಿರುಕನೋರ್ವನೂರ ಮುಂದೆ ಮುರುಕು ಧರ್ಮ ಶಾಲೆಯಲ್ಲಿ………….. ಕನಸ ಕಂಡನೆಂತೆನೆ” ಪದ್ಯವನ್ನು ನೆನಪು ಮಾಡುತ್ತದೆ.

‘ತಿರುಕ’ ಪದದ ಉಲ್ಲೇಖ ಇಲ್ಲಿ ತಿರುಗಾಟದಲ್ಲಿ ತೊಡಗಿರುವವರು ಎಂಬ ಅರ್ಥವನ್ನೂ ಕೊಡುತ್ತದೆ. ಮೇಲಾಗಿ ನನ್ನನ್ನು ಪ್ರಧಾನಿಯಾಗಿಸಿಬಿಡಿ ಎಂದು ಅಂಗಲಾಚುತ್ತಿರುವ ಆದ್ವಾನಿಯವರ “ಬೇಡಿಕೆ”, ಪದ್ಯದ ತಿರುಕನ ದಯನೀಯ ಪರಿಸ್ಥಿತಿಗಿಂತ ಭಿನ್ನವೇನಲ್ಲ. ಬಿ.ಜೆ.ಪಿ. ಎಂಬ “ಮುರುಕು” ಧರ್ಮಶಾಲೆಯಲ್ಲಿ, ಆದ್ವಾನಿಯವರ ಪ್ರಧಾನಿಯಾಗುವ ಕನಸೂ ಕೂಡ ತಿರುಕನ ಕನಸಿನಂತೆಯೇ.

ಬಿ.ಜೆ.ಪಿ ಪಕ್ಷಕ್ಕೆ, ಆದ್ವಾನಿಯವರು ಎಂಬತ್ತು ದಾಟಿದ ವಯೋವೃದ್ಧರು ಎಂಬ ಗುಣಾತ್ಮಕ ಹೆಗ್ಗಳಿಕೆ ಇದ್ದರೂ ಎಲ್ಲಾ ಅರುಳು-ಮರುಳು ಮುದುಕರಿಗೂ ಇರುವ ಇರಿಸು-ಮುರಿಸು ತರುವ ತೆವಲು, ಹಲವಾರು “ದಂಡ” ಯಾತ್ರೆಗಳನ್ನು ಮಾಡಿ ಸಹಸ್ರಾರು ಜನರ ಪ್ರಾಣ ಹಾನಿಗೆ ಕಾರಣವಾಗಿರುವ ಈ ಮುಪ್ಪಡರಿದ ಮುಖ್ಯಸ್ಥನ ಮುಚ್ಚಟೆ ಆ ಪಕ್ಷದ ಎಲ್ಲಾ ಗುಂಪುಗಳಲ್ಲೂ ಒಂದು ರೀತಿಯ ಗೊಂದಲ ಭರಿತ ವಿದ್ಯುತ್ ಸಂಚಲನವನ್ನು ಮೂಡಿಸಿತು.

ಇನ್ನು ಕರ್ನಾಟಕದ ಮಟ್ಟಿಗೆ, ಆದ್ವಾನಿಯವರ ಭ್ರಷ್ಟಚಾರ ವಿರೋಧಿ ರಥಯಾತ್ರೆ ಇಲ್ಲಿನ ಪಕ್ಷದ ವರಿಷ್ಠರಿಗೆ, ಉಸಿರು ಸಿಕ್ಕಿಹಾಕಿಕೊಂಡವರಿಗೆ ಔಷಧಿಯೆಂದು ವಿಷ ಕುಡಿಸಿದಂತಿತ್ತು. ಇಂದು ಭ್ರಷ್ಟಚಾರದಲ್ಲಿ ಅನಭೀಷಿಕ್ತ ಸಾಮ್ರಾಟನಂತಿರುವ ಬಿಜೆಪಿ ಕರ್ನಾಟಕಕ್ಕೆ ಬರುವುದೋ ಬೇಡವೋ ಎಂಬ ಸಂದಿಗ್ಧದಲ್ಲಿದ್ದ ಆದ್ವಾನಿಯವರ ತಿರುಕ ರಥಯಾತ್ರೆಯನ್ನು ಇಲ್ಲಿಗೆ ಬರುವಂತೆ ಪ್ರೇರೇಪಿಸಿದ ‘ಅನಂತ’ ಬಣಕ್ಕೆ ಸಮಜಾಯಿಷಿ ದೊರಕಿದ್ದು ಪುರಾಣಗಳಲ್ಲಿರುವ ಕಲ್ಪನೆಯ ಕಥೆಗಳೇ.
ಹೇಳಿ-ಕೇಳಿ ತಿರುಕರಿಗೆ ಲೋಕದ ಪರಿವೆ ಇರದು, ಮಾನ-ಮರ್ಯಾದೆ ಮತ್ತು ಕಂಡವರು ಏನೆಂದು ಕೊಂಡಾರು ಎಂಬ ಸಾಮಾಜಿಕ ಭಯ ಕಿಂಚಿತ್ತು ಇರದು, ಆದ್ದರಿಂದ ಆದ್ವಾನಿಯವರು ಕರ್ನಾಟಕಕ್ಕೂ ಬರಬೇಕೆಂದು ದುಂಬಾಲು ಬಿದ್ದ ಬಿಜೆಪಿ ಗಣ್ಯರ ಯೋಚನಾ ಲಹರಿ ಇದು.

ದೇಶದ ಆಡಳಿತಾರೂಢ ಎಲ್ಲಾ ರಾಜಕೀಯ ಪಕ್ಷಗಳೂ ವಿವಿಧ ಲಂಚ, ಕಂಟ್ರಾಕ್ಟ್ ಮತ್ತು ಭೂ ಹಗರಣಗಳಲ್ಲಿ ಮೂಗಿನವರೆಗೂ ಮುಳುಗಿದ್ದಾರೆ. ಯಾವೊಂದು ಪಕ್ಷವನ್ನೂ ಪ್ರತ್ಯೇಕಿಸಿ ಪ್ರಾಮಾಣಿಕರಂತೆ ಪ್ರದರ್ಶನಕ್ಕಿಡಲಾಗದು. ಬಂಡವಾಳಶಾಹಿ ವ್ಯವಸ್ಥೆಯ ರಾಜಕಾರಣದ ಅಂತರ್ರಚನೆಯಲ್ಲೇ ಭ್ರಷ್ಟಚಾರ ಹುದುಗಿದೆ. ಈ ವ್ಯವಸ್ಥೆಯನ್ನು ಅವಲಂಬಿಸಿದ ಯಾವೊಂದು ಪಕ್ಷವೂ ಭ್ರಷ್ಟತೆಯಿಂದ ದೂರ ಉಳಿಯಲಾಗದು. ಕೇವಲ ಜನಾಧಾರಿತ ಬುಡಮಟ್ಟದ ಪ್ರಜಾತಂತ್ರವನ್ನು ಆಳವಡಿಸಿಕೊಂಡಿರುವ, ದುಡಿಯುವ ವರ್ಗಗಳ ಪ್ರಜಾತಾಂತ್ರಿಕ ಸಮಾಜವಾದಿ ವ್ಯವಸ್ಥೆಯ ಮಾತ್ರ ಈ ಭ್ರಷ್ಟ ಬಂಡವಾಳಿ ಅವ್ಯವಸ್ಥೆಗೆ ಉತ್ತರವಾಗಬಲ್ಲದು.

ಈ ರೀತಿಯ ಪ್ರಜಾತಾಂತ್ರಿಕ ಸಮಾಜವಾದಿ ವ್ಯವಸ್ಥೆಯನ್ನು ಸಾಕಾರಗೊಳಿಸುವ ದುಡಿಯುವ ವರ್ಗದ ಬೃಹತ್ ರಾಜಕೀಯ ಪರ್ಯಾಯವೊಂದರ ನಿರ್ಮಾಣ ಇಂದಿನ ಜರೂರಿ ಕರ್ತವ್ಯ.

-ಜಗದೀಶ್. ಜಿ.ಸಿ