It is 75 years since the assassination of Leon Trotsky, for many in India, that name may not ring any bell, but for those on the left, especially in the ranks of Communist Parties of all varieties, it is used as an acronym of abuse & derision, not ANY MORE!
The Revolutionary Legacy of Leon Trotsky is reverberating in all continents of the earth. The forces of Committee for a Workers’ International-CWI, which draws its ideological inspiration from the indomitable ideas of Marxism & Trotskyism has set foot and has grown deep roots among the Working People in at least 45 countries around the globe. The forces of CWI, through their relentless campaigns and struggles for the victory of Socialism over the present rapacious Capitalism, bring their tributes to this Great Revolutionary on the occasion of the 75th anniversary of the assassination.
Leon Trotsky, was next to Lenin, the main leader of the Russian Revolution of 1917 and one of the greatest theoreticians of the workers’ movement. His theory of the permanent revolution brilliantly anticipated the class forces involved in the outcome of the Russian revolution, and still conserves its clear validity for the struggle against capitalism and landlordism in the neo-colonial world today. After the bureaucratic degeneration of the Russian Revolution following the isolation of the 1917 revolution, Trotsky became the leading figure of the international Left opposition, which organised the political struggle against Stalinism, and upheld the methods of Marxism and Internationalism. He was assassinated by an agent of Stalin in 1940, just two years after having completed his famous work, “Transitional Programme”, which served as the central document for the founding conference of the 4th International, and from which crucial lessons must be drawn for today’s worldwide struggle of the working class against the capitalist crisis.
Though there are innumerable writings on Trotsky in English and other Europian languages, very few writings are available in the Indian vernacular, we here by attempt one write-up on Trotsky and his ideas in the Language of Kannada. For more English articles on Trotsky’s life & work, please visit socialistworld.net
ಲಿಯಾನ್ ಟ್ರಾಟ್ಸ್ಕಿ
ನಿರಂತರ ಸಮಾಜವಾದಿ ಕ್ರಾಂತಿಯ ಪರಂಪರೆ
1940ರ ಆಗಸ್ಟ್ 20ರಂದು, ಎಪ್ಪತ್ತೈದು ವರುಷಗಳ ಹಿಂದೆ, ಸೋವಿಯತ್ ಒಕ್ಕೂಟದ ಸ್ಟಾಲಿನ್ ನ ಗುಪ್ತಚರದಳ; ಜಿ.ಪಿ.ಯು.ವಿನ ಕೊಲೆಪಾತಕಿ ರೆಮಾಂಡ್ ಮರ್ಕೆಡಾರ್ , 1917ರ ಕ್ರಾಂತಿಯ ಮೇಧಾವಿ ಕ್ರಾಂತಿಕಾರಿಗಳಲ್ಲಿ ಒಬ್ಬರಾದ ಲಿಯಾನ್ ಟ್ರಾಟ್ಸ್ಕಿ ಯವರ ತಲೆಗೆ ಮಂಜುಗಡ್ಡೆ ಕೆದಕುವ ಕೈಗುದ್ದಲಿಯ ಪ್ರಹಾರ, ಅಂದಿನ ಅಧಿಕಾರಶಾಹಿ ಸ್ಟಾಲಿನ್ ವಾದದ ಅತ್ಯಂತ ತೀಕ್ಷ್ಣ ಟೀಕಾಕಾರ, ವಿಮರ್ಶಕ ಮತ್ತು ಪ್ರಧಾನ ಮಾರ್ಕ್ಸ್ ವಾದಿ ಚಿಂತಕ, ಮಹಾನ್ ಕ್ರಾಂತಿಕಾರಿ ಲಿಯಾನ್ ಟ್ರಾಟ್ಸ್ಕಿ, ಮರುದಿನ ಆಗಸ್ಟ್ 21ರಂದು ಕೊನೆಯುಸಿರೆಳೆಯ ಬೇಕಾಯಿತು.
ಟ್ರಾಟ್ಸ್ಕಿಯ ಹೆಸರು ಭಾರತದ ಮಟ್ಟಿಗೆ ಬಹುಜನರಿಗೆ ಅಪರಿಚಿತ. ಕಮ್ಯೂನಿಸ್ಟ್ ಪಕ್ಷಗಳ ಕಾರ್ಯಕರ್ತರಿಗೆ ಹಾಗು ಎಡ ವಿಚಾರಧಾರೆಯತ್ತ ಒಲವಿರುವ ಬುದ್ಧಿಜೀವಿಗಳಿಗೆ, ಟ್ರಾಟ್ಸ್ಕಿಯ ಹೆಸರು ಅಕ್ಟೋಬರ್ ಕ್ರಾಂತಿಯ ಸಮಯದ ಖಳನಾಯಕನಾಗಿಯೋ, ಬೊಲ್ಷೆವಿಕ್ ನಾಯಕ ಲೆನಿನ್ನರ ವೈರಿಯೆಂದೋ ಮತ್ತು ಸಮಾಜವಾದದ ಶತ್ರುವೆಂದೋ ಪರಿಚಯಿಸಲಾಗಿದೆ. ಸ್ಟಾಲಿನ್ ಹಾಗು ಅವನ ಅನುಯಾಯಿಗಳು, ಚರಿತ್ರೆ ಹಾಗು ಸತ್ಯತೆಗಳನ್ನು ತಿರುಚುವ ವಿಷಯದಲ್ಲಿ ಅಪ್ರತಿಮ ನೈಪುಣ್ಯತೆಯನ್ನು ಸಾಧಿಸಿದ್ದಾರೆ. ಲೆನಿನ್ನರ ಬರಹ ಸಂಗ್ರಹದಲ್ಲಿ, ವ್ಯಕ್ತಿ ವಿಚಾರ ಪರಿಚಯ ವಿಭಾಗದಲ್ಲಿ ಟ್ರಾಟ್ಸ್ಕಿಯನ್ನು ಒಬ್ಬ ಪ್ರತಿಕ್ರಾಂತಿಕಾರಿಯೆಂದೇ ಬಿಂಬಿಸಿದ್ದಾರೆ. ಸ್ಟಾಲಿನ್ರ ಕಾಲದಲ್ಲೂ, ಟ್ರಾಟ್ಸ್ಕಿಯನ್ನು ಲೆನಿನ್ನರ ಪರಮ ವೈರಿಯೆಂದು, ಜನದ್ರೋಹಿಯೆಂಬ ಪಟ್ಟಕಟ್ಟಿ ಗಡಿಪಾರು ಮಾಡಲಾಯಿತು. ಅವರ ವಿಚಾರಗಳತ್ತ ಜನ ಎಲ್ಲಿ ಇಣುಕಿ ನೋಡುತ್ತಾರೋ ಎಂಬ ಭಯದಿಂದ ಅವರ ಬರವಣಿಗೆ ಹಾಗೂ ಪುಸ್ತಕಗಳನ್ನೆಲ್ಲವನ್ನು ಕಾನೂನು ಬಾಹಿರವೆಂದುಘೋಷಿಸಲಾಯಿತು. ಟ್ರಾಟ್ಸ್ಕಿಯವರ ಹಿತೈಷಿಗಳ ಹಾಗೂ ಅವರ ಪರವಾದ ಧೋರಣೆ ಹೊಂದಿದ್ದ ಸಹಸ್ರಾರು ಜನರನ್ನು ಜೈಲಿಗೆ ತಳ್ಳಿ ಕೊಲ್ಲಿಸಲಾಯಿತು. ಪುರಾತನ ಪತ್ರದಾಖಲೆ ಸಂಗ್ರಹಾಲಯಗಳಲ್ಲಿ ಟ್ರಾಟ್ಸ್ಕಿ ಲೆನಿನ್ನರ ಜೊತೆಗಿದ್ದ ಎಲ್ಲ ಚಿತ್ರಗಳನ್ನೂ ತಿದ್ದುಪಡಿ ಮಾಡಲಾಯಿತು. ಟ್ರಾಟ್ಸ್ಕಿ ಮತ್ತು ಲೆನಿನ್ನರ ನಡುವೆ ನಡೆದ ಅಸಂಖ್ಯಾತ ಪತ್ರ ವ್ಯವಹಾರ, ವಿಷಯ ಭಿನ್ನಾಭಿಪ್ರಾಯಗಳನ್ನು ಅಸಾಂದರ್ಭಿಕವಾಗಿ ಬಳಸಿ, ಭವಿಷ್ಯದ ಸಮಾಜವಾದಿಗಳಿಗೆ, ಯುವಕರಿಗೆ, ಟ್ರಾಟ್ಸ್ಕಿ ಎಂಬ ಹೆಸರು ಒಬ್ಬ ಪಾತಕಿಯದೇನೋ ಎಂಬಂತೆ ವಿಧಿವತ್ತಾಗಿ ಚಿತ್ರಿಸಲಾಗಿದೆ.
ಕರ್ನಾಟಕ ಹಾಗು ಭಾರತದ ಸಮಾಜವಾದಿ ಹುರಿಯಾಳುಗಳಿಗೆ, ಸ್ಟಾಲಿನ್ವಾದಿ, ಮಾವೋವಾದಿ ಕಮ್ಯುನಿಸ್ಟ್ ಪಕ್ಷಗಳಾದ ಸಿ.ಪಿ.ಐ, ಸಿ.ಪಿ.ಐ(ಎಂ) ಮತ್ತು ಸಿ.ಪಿ.ಐ(ಎಂ.ಎಲ್)ಗಳಲ್ಲಿ ಪೂರ್ವಾಗ್ರಹಗಳಿಗೆ ಗುರಿಯಾಗಿರುವ ನೈಜ ಕಾರ್ಯಕರ್ತರುಗಳಿಗೆ, ಹೋರಾಟಗಾರರಿಗೆ, ಕ್ರಾಂತಿಕಾರಿ ಲಿಯಾನ್ ಟ್ರಾಟ್ಸ್ಕಿಯ ಸತ್ಯ-ವಾಸ್ತವ ಚಿತ್ರಣವನ್ನು ಮಾಡಿಸುವುದೇ ಅವರ 75ನೇಯ ವಾರ್ಷಿಕ ಸ್ಮಾರಕೋತ್ಸವದ ಆಚರಣೆ ಎಂಬುದು ಟ್ರಾಟ್ಸ್ಕಿವಾದದ ಅನುಯಾಯಿ ಸಂಘಟನೆಯಾದ ‘ನ್ಯೂ ಸೋಶಿಯಲಿಸ್ಟ್ ಆಲ್ಟರ್ನೇಟಿವ್’(ನವ ಸಮಾಜವಾದಿ ಪರ್ಯಾಯ)ದ ಹಾಗು ‘ದುಡಿಯೋರ ಹೋರಾಟ’ ಪತ್ರಿಕೆಯ ನಿಲುವು. ಟ್ರಾಟ್ಸ್ಕಿಯ 75ನೇ ಸ್ಮಾರಕೋತ್ಸವದ ಈ ಸಂದರ್ಭದಲ್ಲಿ ಅವರ ವಿಚಾರಗಳ ಮತ್ತು ಜೀವನದ ಕೆಲವು ಪ್ರಮುಖ ಸಾಧನೆಗಳನ್ನು ಮೆಲುಕು ಹಾಕಿ ಸಮಕಾಲೀನ ಸಮಾಜವಾದಿ ಹೋರಾಟದ ದಾರಿಗಳನ್ನು ಹುಡುಕುವುದೇ, ಇಂದಿನ ಕ್ರಾಂತಿಕಾರಿ ಸಮಾಜವಾದಿಗಳು ಅವರಿಗೆ ಅರ್ಪಿಸುವ ಶ್ರದ್ಧಾಂಜಲಿ.
1940ರ ಆಗಸ್ಟ್ 21ರ ಟ್ರಾಟ್ಸ್ಕಿಯ ಮರಣಕ್ಕೆ ಕಾರಣನಾದ ಸ್ಟಾಲಿನ್ನರ ಬಾಡಿಗೆ ಗೂಂಡಾ ರೆಮಾಂಡ್ ಮರ್ಕೆಡಾರ್ನ ಕೈಗುದ್ದಲಿ ಕೇವಲ ಸಾಧಾರಣ ಮೆದುಳೊಂದನ್ನು ಸಿಗಿದಿರಲಿಲ್ಲ. ಬದಲಾಗಿ, ಅಂದಿನ ಸಂದರ್ಭದಲ್ಲಿ ಅಂತರರಾಷ್ಟ್ರೀಯವಾಗಿ ಇಡೀ ಕಾರ್ಮಿಕ ವರ್ಗ ಎದುರಿಸುತ್ತಿದ್ದ ಸಮಸ್ಯೆಗಳನ್ನು ಸಮರ್ಪಕವಾಗಿ ವಿಮರ್ಶಿಸಿ, ಭವಿಷ್ಯಕ್ಕೆ ದಾರಿ ತೋರುತ್ತಿದ್ದ ಜ್ಞಾನಕೇಂದ್ರವನ್ನೇ ನಿರ್ನಾಮ ಮಾಡಿತ್ತು.
ಸ್ಟಾಲಿನ್ ವಾದಿ ‘ಅಪಪ್ರಚಾರಗಳು ಕೆಲವು ಕಾಲ ಕೆಲವರನ್ನು ದಾರಿ ತಪ್ಪಿಸಬಹುದು.
ಆದರೆ ಸದಾಕಾಲ ಸರ್ವರನ್ನು ದಾರಿ ತಪ್ಪಿಸಲಾಗದು’.
“1917ರ ಕ್ರಾಂತಿಯ ಸಂದರ್ಭದಲ್ಲಿ ರಷ್ಯಾದ ಜನರಿಗೆ ಲೆನಿನ್ ಯಾರು? ಟ್ರಾಟ್ಸ್ಕಿ ಯಾರು? ಎಂಬ ವ್ಯತ್ಯಾಸವೇ ತಿಳಿದಿರಲಿಲ್ಲ, ಜಾ಼ರ್ ದೊರೆಯ ಪೊಲೀಸ್ ರಿಂದ ತಪ್ಪಿಸಿಕೊಳ್ಳಲು ಒಬ್ಬನೇ ವ್ಯಕ್ತಿ ಎರಡು ಹೆಸರನ್ನಿಟ್ಟು ಕೊಂಡಿದ್ದಾನೆ ಎಂಬ ಪ್ರತೀತಿ ಜನರಲ್ಲಿತ್ತು. ಏಕೆಂದರೆ ಟ್ರಾಟ್ಸ್ಕಿ ಮತ್ತು ಲೆನಿನ್ನರ ವಿಚಾರ ಹಾಗೂ ಕಾರ್ಯತಂತ್ರಗಳಲ್ಲಿ ಆ ರೀತಿಯ ಏಕರೂಪತೆ ಇತ್ತು”. ಸೋವಿಯತ್ ಕ್ರಾಂತಿಯಿಂದ ಪ್ರಭಾವಿತನಾದ ಜಾನ್ರೀಡ್ ಎಂಬ ಅಮೇರಿಕನ್ ಪತ್ರಕರ್ತ-ಲೇಖಕ ಈ ರೀತಿಯಾಗಿ ತನ್ನ ಪ್ರಖ್ಯಾತ ಪುಸ್ತಕ “ಟೆನ್ ಡೇಸ್ ದಟ್ ಶುಕ್ ದಿ ವರ್ಲ್ಡ್”ನಲ್ಲಿ ಉಲ್ಲೇಖಿಸಿದ್ದಾನೆ.
1917ರ ಅಕ್ಟೋಬರ್ ಕ್ರಾಂತಿಯ ಪೂರ್ವದಲ್ಲಿ ಹಾಗು ಕ್ರಾಂತಿಯ ನಂತರ ಟ್ರಾಟ್ಸ್ಕಿ ವಹಿಸಿದ ಪಾತ್ರ ಹಾಗು ಅವರಿಗೆ ಲೆನಿನ್ ವಹಿಸಿದ ಜವಾಬ್ದಾರಿಗಳನ್ನು ಪಟ್ಟಿ ಮಾಡಿದಲ್ಲಿ ಸ್ಟಾಲಿನ್ವಾದಿಗಳ ಹಸಿಸುಳ್ಳುಗಳು ಎಂಥಹ ಹೇಯವಾದದ್ದು ಎಂಬುದನ್ನು ಸಾಬೀತು ಪಡಿಸಬಹುದು.
- 1905-1906ರ ಮೊದಲನೆಯ ರಷ್ಯನ್ ಕ್ರಾಂತಿಯ ಸಂದರ್ಭದಲ್ಲಿ ಪ್ರಪ್ರಥಮ ಸೋವಿಯತ್ ನ (ಕಾರ್ಮಿಕವರ್ಗದ ಪ್ರತಿನಿಧಿಗಳ ಸಮಿತಿ) ಸಭಾಧ್ಯಕ್ಷ ಟ್ರಾಟ್ಸ್ಕಿ.
- 1917ರಲ್ಲಿ ಮಾನವ ಚರಿತ್ರೆಯಲ್ಲೇ ಮೊದಲನೇ ಬಾರಿ ನಡೆದ ಏಕೈಕ ಮಹಾನ್ ಘಟನೆ ರಷ್ಯನ್ ಕ್ರಾಂತಿಯ ಪ್ರಮುಖ ಸಂಘಟನಾಕಾರರಲೊಬ್ಬ ಟ್ರಾಟ್ಸ್ಕಿ.
- ತದನಂತರ ರಷ್ಯನ್ ಕ್ರಾಂತಿಯನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕೆಂಬ ಹುನ್ನಾರ ಮಾಡಿ ದಂಡೆದ್ದು ಬಂದಿದ್ದ 21 ಸಾಮ್ರಾಜ್ಯಶಾಹಿ ದೇಶಗಳ ಪ್ರತಿಕ್ರಾಂತಿಕಾರಿ ಸೇನೆಗಳನ್ನು ಸೋಲಿಸಿದ ಕೆಂಪು ಸೇನೆಯನ್ನು ಕಟ್ಟಿ ಅದರ ನೇತೃತ್ವ ವಹಿಸಿದ ಕ್ರಾಂತಿಕಾರಿ ಟ್ರಾಟ್ಸ್ಕಿ.
ಇದೆಲ್ಲಕ್ಕಿಂತ ಮಿಗಿಲಾಗಿ, ಲಿಯಾನ್ ಟ್ರಾಟ್ಸ್ಕಿ ಕಾರ್ಮಿಕ ಚಳವಳಿಯ ಮಹಾನ್ ಸಿದ್ಧಾಂತಿ. ಕಾರ್ಲ್ಮಾರ್ಕ್ಸ್ರವರನ್ನು ಕಳೆದ ಸಹಸ್ರಮಾನದ ವ್ಯಕ್ತಿ ಎಂದು ಕರೆಯಲಾಗಿದೆ. ಏಂಗೆಲ್ಸ್, ಲೆನಿನ್ ಮತ್ತು ರೋಸಾ ಲುಕ್ಸುಂಬರ್ಗ್ ಸೇರಿದಂತೆ ಲಿಯಾನ್ಟ್ರಾಟ್ಸ್ಕಿಯೂ ಕೂಡಾ ಕಳೆದ ಶತಮಾನ ಕಂಡ ದುಡಿಯುವ ವರ್ಗದ ಶ್ರೇಷ್ಠರೇ.
ಇಂದು, ಟ್ರಾಟ್ಸ್ಕಿವಾದದ ವಿರೋಧಿಗಳು, ಟ್ರಾಟ್ಸ್ಕಿಯ ವಿಚಾರ ಹಾಗು ಅವರ ಕಾರ್ಯವಿಧಾನಗಳನ್ನು ಕಾರ್ಯ ಸಾಧ್ಯವಲ್ಲವೆಂದೋ ಅಥವಾ ಸಮಕಾಲೀನ ಪರಿಸ್ಥಿತಿಗೆ ಸರಿ ಹೊಂದಲಾರದ್ದೆಂದೋ ಮೂದಲಿಸುತ್ತಾರೆ. ಆದರೆ ಟ್ರಾಟ್ಸ್ಕಿಯ ವಿಚಾರ ಭಂಡಾರದಲ್ಲಡಗಿರುವ ಮಾರ್ಕ್ಸ್ ವಾದಿ ವಿಮರ್ಶೆ, 21ನೇ ಶತಮಾನದ ಸಮಾಜವಾದಿ ಕ್ರಾಂತಿಕಾರಿಗಳಿಗೆ, ಇಂದಿನ ಸಂಕೀರ್ಣ ಪರಿಸ್ಥಿತಿಗಳನ್ನು ಅರ್ಥೈಸಲು ಬೇಕಾದ ಸಾಧನ ಸಾಮಗ್ರಿಯನ್ನು ಒದಗಿಸುತ್ತದೆ.
ಟ್ರಾಟ್ಸ್ಕಿಯವರ ವಿಚಾರಗಳು, ಅವರ ದ್ವಂದ್ವಮಾನ ವಿಮರ್ಶನ ರೀತಿ ಮತ್ತು ತೀರ್ಮಾನಗಳು ಅವರ ಜೀವನ ಕಾಲದಲ್ಲಿ ಎಷ್ಟು ಪ್ರಸ್ತುತವಾಗಿದ್ದವೋ ಅಷ್ಟೇ ಇಂದಿಗೂ ಕೂಡ ಸಮಯೋಚಿತ. ಟ್ರಾಟ್ಸ್ಕಿಯ ಅತ್ಯಂತ ರೋಮಾಂಚನಕಾರಿ ಬರಹವಾದ “ಹಿಸ್ಟರಿ ಆಫ್ ದಿ ರಷ್ಯನ್ ರೆವಲ್ಯೂಶನ್” ಮಾರ್ಕ್ಸ್ ವಾದಿ ತತ್ವ ಮತ್ತು ಸಿದ್ಧಾಂತಗಳನ್ನು ಕಾರ್ಯರೂಪಕ್ಕೆ ತರುವ ಸಂಕೀರ್ಣತೆಯನ್ನು ಸವಿಸ್ತಾರವಾಗಿ ದಾಖಲಿಸಿರುವ ಮೇರುಕೃತಿ. ಟ್ರಾಟ್ಸ್ಕಿಯ ಈ ಪುಸ್ತಕದ ಶೈಲಿ, ಓದುಗರೇ ಈ ಜಯಶಾಲಿ ಸಮಸಮಾಜ ಕ್ರಾಂತಿಯಲ್ಲಿ ಭಾಗವಹಿಸಿದ್ದರೇನೋ ಎಂಬಂತೆ ಭಾಸವಾಗಿಸುವಷ್ಟು ರೋಚಕವಾಗಿದೆ. ಅದಲ್ಲದೆ ಈ ಪುಸ್ತಕದುದ್ದಕ್ಕೂ ಕಂಡುಬರುವ ಇನ್ನೊಂದು ಬಹುಮುಖ್ಯ ಅಂಶವೆಂದರೆ, ಅಕ್ಟೋಬರ್ 1917ರ ಸಂದರ್ಭದಲ್ಲಿ ಕ್ರಾಂತಿಕಾರಿ ಪಕ್ಷದ ಪಾತ್ರ ಮತ್ತು ಆ ರೀತಿಯ ಪಕ್ಷ, ಕ್ರಾಂತಿಕಾರಿ ಸದಸ್ಯರನ್ನು ಸೈದ್ಧಾಂತಿಕವಾಗಿ ತಯಾರು ಮಾಡಲೇ ಬೇಕಾದ ಪ್ರಮುಖ ಅನಿವಾರ್ಯತೆ ಬಗ್ಗೆ ಟ್ರಾಟ್ಸ್ಕಿಯ ಉಲ್ಲೇಖ, ಇಂದಿನ ಕ್ರಾಂತಿಕಾರಿಗಳಿಗೆ ದಾರಿದೀವಿಗೆಯಾಗಿದೆ.
ಲೆನಿನ್ ಮತ್ತು ಟ್ರಾಟ್ಸ್ಕಿ ಯವರ ಕಾಲದ ಬೊಲ್ಷೇವಿಕ್ ಪಕ್ಷ ಮಾರ್ಕ್ಸ್ ವಾದದವನ್ನು ತನ್ನ ಸಿದ್ದಾಂತವನ್ನಾಗಿಸಿಕೊಂಡು, ಪ್ರಜಾತಾಂತ್ರಿಕ ಕೇಂದ್ರಿಯತೆಯನ್ನು (Democratic Centralism) ತನ್ನ ಸಂಘಟನಾತ್ಮಕ ವಿಧಾನವನ್ನಾಗಿಸಿಕೊಂಡ ಪಕ್ಷವಾಗಿತ್ತು. ಇದರಿಂದಾಗಿ ಆ ಪಕ್ಷದಲ್ಲಿ ಅತ್ಯಧಿಕ ಪ್ರಜಾತಾಂತ್ರಿಕ ಹಕ್ಕುಗಳು ಮತ್ತು ಕಾರ್ಯಾಚರಣೆಯಲ್ಲಿ ಶಿಸ್ತು ಮತ್ತು ಒಗ್ಗಟ್ಟಿನ ಶಕ್ತಿ ಮಿಳಿತವಾಗಿತ್ತು.
1989ರವರೆಗೆ ಸಮಾಜವಾದದ ಹೆಸರಿನಲ್ಲಿ ಅಧಿಕಾರದಲ್ಲಿದ್ದ ಸ್ಟಾಲಿನ್ ವಾದಿ ದೇಶಗಳ ಪತನ ಹಾಗು ಬಂಡವಾಳಶಾಹಿ ಆಕ್ರಮಣ ಇಂದು ಹಲವು ಕ್ರಾಂತಿಕಾರಿಗಳನ್ನು ನಿಷ್ಕ್ರಿಯರನ್ನಾಗಿಸಿದೆ ಹಾಗು ಎಡವಾದಿಗಳನ್ನು ಹತಾಶೆಯತ್ತ ದೂಡಿದೆ. ಇವರೆಲ್ಲರೂ ಇಂದು ಕ್ರಾಂತಿಕಾರಿ ಪಕ್ಷದ ಅವಶ್ಯಕತೆ ಹಾಗು ಔಚಿತ್ಯದ ಬಗ್ಗೆ ತರ್ಕ ಮಾಡುತ್ತಿದ್ದಾರೆ. ಅದರ ಬದಲಾಗಿ ಸಡಿಲವಾದ ಎಲ್ಲಾ ವರ್ಗಗಳನ್ನೂ ಒಳಗೊಂಡ ಸುಧಾರಣಾವಾದಿ(Liberal) ಪರ್ಯಾಯಗಳೇ ಇಂದಿನ ಆಧುನಿಕ ಯುಗದ ಅವಶ್ಯಕತೆ ಎಂಬುದು ಅವರ ವಾದ. ಈ ನಿಟ್ಟಿನ ಚರ್ಚೆಗೆ ಟ್ರಾಟ್ಸ್ಕಿಯ ವಿಚಾರ ಬಹಳ ಸಮಯೋಚಿತವಾದದ್ದು. ಕಾರ್ಮಿಕ ವರ್ಗದ ಹಿತಸಾಧನೆಗಾಗಿ ಹಾಗೂ ತಮ್ಮ ಮಾರ್ಕ್ಸ್ ವಾದಿ ಕಾರ್ಯಪ್ರಣಾಳಿಕೆಯ ಮೂಲಕ ಉತ್ತಮ ಹೋರಾಟಗಾರರನ್ನು ಕ್ರಾಂತಿಕಾರಿ ಪಕ್ಷದತ್ತ ಸೆಳೆಯಲು ಅಂದಿನಿಂದಲೂ ಮಾರ್ಕ್ಸ್ ವಾದಿಗಳು ದುಡಿಯುವ ವರ್ಗದ ವಿಶಾಲ ಜನಸಂಘಟನೆಗಳಲ್ಲಿ (ಉದಾ: ಟ್ರೇಡ್ ಯೂನಿಯನ್ಗಳು) ಪಾಲ್ಗೊಳ್ಳುತ್ತಲೇ ಇದ್ದಾರೆ. ಈ ನಿಟ್ಟಿನ ಕಾರ್ಯತಂತ್ರದಲ್ಲಿ, ಟ್ರಾಟ್ಸ್ಕಿಯ “ರಷ್ಯನ್ ಕ್ರಾಂತಿಯ ಚರಿತ್ರೆ” ಪುಸ್ತಕದಲ್ಲಿ ಪ್ರಜಾತಾಂತ್ರಿಕ ಕೇಂದ್ರೀಯತೆಯಲ್ಲಿ ನೆಲೆಗೊಂಡಂಥಹ ಕ್ರಾಂತಿಕಾರಿ ಪಕ್ಷವಿಲ್ಲದಿದ್ದಲ್ಲಿ, ರಷ್ಯನ್ ಕ್ರಾಂತಿಯು ಜಯ ಗಳಿಸಲು ಹೇಗೆ ಅಸಾಧ್ಯವಾಗುತ್ತಿತ್ತು ಎಂಬುದನ್ನು ವಿವರಿಸಿದ್ದಾರೆ.
ಇಂದು ವಿವಿಧ ದೇಶದ ಸಮಾಜವಾದಿಗಳು, 1917ರ ರಷ್ಯನ್ ಕ್ರಾಂತಿಗೆ ವಿಭಿನ್ನವಾದ ಸಂದರ್ಭಗಳಲ್ಲಿ ಮತ್ತು ಬೇರೆಯೇ ಪರಿಸ್ಥಿತಿಗಳಲ್ಲಿ ಹೋರಾಟಗಳನ್ನು ನಡೆಸುತ್ತಿದ್ದಾರೆ. ಆದರೂ ಇಂದಿಗೂ ಕ್ರಾಂತಿಕಾರಿ ಪಕ್ಷದ ಸ್ವತಂತ್ರ ಕಾರ್ಯಪ್ರಣಾಳಿಕೆ ಮತ್ತು ಸಂಘಟನಾ ವಿಧಾನಗಳು ಬಲಿಷ್ಠ ಬಂಡವಾಳಿ ವ್ಯವಸ್ಥೆಯ ನಿರ್ಮೂಲನಕ್ಕೆ ಮತ್ತು ಸಮರ್ಥವಾದ ಸಮಾಜವಾದಿ ಕ್ರಾಂತಿಯ ಸಾಕರಕ್ಕೆ ಅತ್ಯಾವಶ್ಯಕವಾಗಿ ಬೇಕಾದ ಸಾಧನಗಳು.
ಮಾರ್ಕ್ಸ್ ವಾದಿ ಸಿದ್ಧಾಂತವನ್ನು ಮತ್ತಷ್ಟು ಸಿರಿವಂತಗೊಳಿಸಿದ ಟ್ರಾಟ್ಸ್ಕಿಯ ಹಲವು ಬರಹಗಳಲ್ಲಿ ಬಹುಮುಖ್ಯವಾದದ್ದು ನಿರಂತರ ಕ್ರಾಂತಿಯ ಸಿದ್ಧಾಂತ ಹಾಗೂ ಸೋವಿಯತ್ ದೇಶಗಳಲ್ಲಿ ಅಧಿಕಾರಶಾಹಿ ಪಿಡುಗಿನ ವೃದ್ಧಿ ಮತ್ತು ಸ್ಟಾಲಿನ್ ವಾದಿ ಪ್ರತಿಕ್ರಾಂತಿಯನ್ನು ವಿವರಿಸುವ “ರೆವೆಲ್ಯೂಷನ್ ಬಿಟ್ರೇಡ್”.
ಇಂದು ಲ್ಯಾಟಿನ್ ಅಮೇರಿಕಾ, ಆಫ್ರಿಕಾ ಮತ್ತು ಏಷಿಯಾ ದೇಶಗಳಲ್ಲಿನ ಹಲವಾರು ಚಳವಳಿಗಳಿಗೆ, ಮೊದಲಿದ್ದ ಮಾಸ್ಕೊ ಹಾದಿ ಇಲ್ಲವಾಗಿದೆ. ಸ್ಟಾಲಿನ್ ವಾದದ ಪತನದ ನಂತರ, ವಿರೂಪಿ ಕಾರ್ಮಿಕ ರಾಜ್ಯಗಳ ಮಾದರಿ ಇಲ್ಲವಾಗಿದೆ. ಆದರೆ,ಕಾರ್ಮಿಕ ವರ್ಗ ಮತ್ತು ರೈತ ಸಮುದಾಯ ಮಾಸ್ಕೋ ಮಾದರಿ ಈಗ ಇಲ್ಲವೆಂಬ ಕಾರಣಕ್ಕಾಗಿ ತಾವು ಉಳಿವಿಗಾಗಿ ನಡೆಸುತ್ತಿರುವ ದೈನಂದಿನ ಹೋರಾಟಗಳನ್ನು ನಿಲ್ಲಿಸಲಾಗದು. ಈಗಾಗಲೇ ಸಾಬೀತಾಗಿರುವಂತೆ ಜಗತ್ತಿನಾದ್ಯಂತ ಅದರಲ್ಲೂ ನವ ವಸಾಹತು ದೇಶಗಳಲ್ಲಿ ಬೃಹತ್ ಚಳವಳಿಗಳು ಅನಿವಾರ್ಯ. ಈ ಚಳವಳಿಗಳ ಮುಂದಾಳತ್ವ ವಹಿಸುತ್ತಿರುವ ನೈಜ ಕ್ರಾಂತಿಕಾರಿಗಳಿಗೆ ಟ್ರಾಟ್ಸ್ಕಿಯ ನಿರಂತರ ಕ್ರಾಂತಿಯ ಸಿದ್ದಾಂತ ಅತಿ ಅವಶ್ಯಕ.
ನಿರಂತರ ಕ್ರಾಂತಿ ಸಿದ್ಧಾಂತ(ಥಿಯರಿ ಆಫ್ ಪರ್ಮನೆಂಟ್ ರೆವೆಲ್ಯೂಷನ್)
20ನೇಯ ಶತಮಾನದ ಆದಿಯಲ್ಲಿ, ರಷ್ಯಾದಲ್ಲಿ ಸಮಾಜವಾದಿ ಕ್ರಾಂತಿ ಸಾಧ್ಯತೆಗಳ ಬಗ್ಗೆ ಟ್ರಾಟ್ಸ್ಕಿ ಅಧ್ಯಯನ ನಡೆಸುತ್ತಿದ್ದಾಗ, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳಲ್ಲಿ ನಡೆದ ವಿದ್ಯಮಾನಗಳಂತೆಯೇ ಬಂಡವಾಳಶಾಹಿ ಕ್ರಾಂತಿ ನಡೆಯಲು ರಷ್ಯಾದ ಶೈಶವಾವಸ್ಥೆಯ ಬಂಡವಾಳಿ ವರ್ಗ ಅತ್ಯಂತ ಶಕ್ತಿಹೀನವೆಂಬುದನ್ನು ಟ್ರಾಟ್ಸ್ಕಿ ಮನಗಂಡ. ಇದರಿಂದಾಗಿ ರಷ್ಯದ ಬಂಡವಾಳಿ ವರ್ಗ ತನ್ನ ಬಂಡವಾಳಿ ಪ್ರಜಾತಂತ್ರ ಕ್ರಾಂತಿಯನ್ನು ತಾವೇ ಖುದ್ದಾಗಿ ನಡೆಸಲಾಗದು ಎಂಬ ಚಾರಿತ್ರಿಕ ಸತ್ಯವನ್ನು ಟ್ರಾಟ್ಸ್ಕಿ ಪ್ರತಿಪಾದಿಸಿದ.
ಅದಲ್ಲದೆ ಈ ದುರ್ಬಲ ರಷ್ಯನ್ ಬಂಡವಾಳಿ ವರ್ಗಕ್ಕೆ ಭೂ ಒಡೆತನದಲ್ಲಿ ತನ್ನದೇ ಆದ ಹಿತಾಸಕ್ತಿ ಇತ್ತು ಮತ್ತು ಜಮೀನ್ದಾರರು ಔದ್ಯೋಗಿಕರಂಗಗಳಲ್ಲೂ ಹಣ ತೊಡಗಿಸಿದ್ದರು. ಜಮೀನ್ದಾರರ ಅಧಿಕಾರಗಳಿಗೆ ಸವಾಲೆಸೆಯುವ ಯಾವುದೇ ನಿರ್ಣಾಯಕ ಭೂ ಸುಧಾರಣೆಗಳನ್ನು ಭೂ ಮಾಲೀಕರು ಮತ್ತು ಬಂಡವಾಳಶಾಹಿಗಳು ಹಾಗು ಅವರ ರಾಜಕೀಯ ಪ್ರತಿನಿಧಿಗಳು ವಿರೋಧಿಸುವ ಶತಃಸಿದ್ಧ ಪರಿಸ್ಥಿತಿ ಇತ್ತು.
ಈ ರೀತಿಯ ಕಾಲಘಟ್ಟದ ಒತ್ತಡದಲ್ಲಿ, ಒಟ್ಟಾರೆ ಜನಸಂಖ್ಯೆಯಲ್ಲಿ ಅಲ್ಪಸಂಖ್ಯೆಯಲ್ಲಿದ್ದ ಕಾರ್ಮಿಕವರ್ಗವೇ, ರೈತಾಪಿ ಸಮುದಾಯದ ನೆರೆವಿನೊಂದಿಗೆ ಬಂಡವಾಳಿ ಪ್ರಜಾತಾಂತ್ರಿಕ ಕ್ರಾಂತಿಯ ಕರ್ತವ್ಯಗಳನ್ನು ಮಾಡುತ್ತದೆ ಎಂದು ಪ್ರತಿಪಾದಿಸಿದ್ದವರು ಟ್ರಾಟ್ಸ್ಕಿ.
ಆದರೆ, ಕಾರ್ಮಿಕ ವರ್ಗ ಬಂಡವಾಳಿ ಪ್ರಜಾತಾಂತ್ರಿಕ ಕ್ರಾಂತಿಯ ನೇತೃತ್ವವನ್ನು ವಹಿಸಿದ ನಂತರ, ಅಧಿಕಾರವನ್ನು ಬಂಡವಾಳಶಾಹಿಗೆ ವಾಪಸ್ಸು ಕೊಡದು, ಬದಲಾಗಿ ಕ್ರಾಂತಿಕಾರಿ ಪಕ್ಷದ ನೇತೃತ್ವದಲ್ಲಿ ಸಮಾಜವಾದಿ ಕರ್ತವ್ಯಗಳನ್ನು ಕೈಗತ್ತಿಕೊಳ್ಳುವತ್ತ ನಿರಂತರವಾಗಿ ಮುನ್ನುಗುತ್ತಾರೆ. ಇದರಿಂದಾಗಿ ಅಂತರರಾಷ್ಟ್ರೀಯವಾಗಿಯೂ ಕ್ರಾಂತಿಕಾರಿ ಚಳವಳಿಗಳು ಭುಗಿಲೇಳುತ್ತವೆ ಎಂಬುದೇ ಲಿಯಾನ್ ಟ್ರಾಟ್ಸ್ಕಿಯ ನಿರಂತರ ಕ್ರಾಂತಿಯ ವಾದವಾಗಿತ್ತು. 1917ರ ರಷ್ಯನ್ ಕ್ರಾಂತಿ,ಟ್ರಾಟ್ಸ್ಕಿಯ ಈ ಸಿದ್ಧಾಂತವನ್ನು ಅಕ್ಷರಶಃ ಸಾಬೀತುಪಡಿಸಿದ ಘಟನೆ.
ಈ ರೀತಿಯ ಭವಿಷ್ಯ ನುಡಿಯ ಬಗ್ಗೆ ಲೆನಿನ್ ರಿಗೆ ತಮ್ಮದೇ ಅಭಿಪ್ರಾಯಗಳಿದ್ದರೂ(1917) ಕ್ರಾಂತಿಯ ಹೊತ್ತಿಗೆ ನಡೆದ ವಿದ್ಯಮಾನಗಳಿಂದ ಅವರು ಟ್ರಾಟ್ಸ್ಕಿಯ ಮಾತನ್ನು ಒಪ್ಪಿಕೊಂಡರು. ಮೊದಲಿಗೆ ಬೊಲ್ಷೆವಕ್ ಪಕ್ಷದ ದಿನನಿತ್ಯದ ರಣನೀತಿ ರೂಪಿಸುವಲ್ಲಿ ಟ್ರಾಟ್ಸ್ಕಿ ಪಾಲ್ಗೊಳ್ಳಲಾಗದ್ದು ಸರ್ವವಿದಿತ, ಆದರೆ ಕ್ರಾಂತಿ ಸಮೀಪಿಸುತ್ತಿದ್ದ ಕಾಲಘಟ್ಟದಲ್ಲಿ ಟ್ರಾಟ್ಸ್ಕಿ ಯನ್ನು, ಲೆನಿನ್ ಪಕ್ಷಕ್ಕೆ ಬರಮಾಡಿಕೊಂಡರು. “ಪಕ್ಷದಿಂದ ಹೊರಗುಳಿದಿದ್ದ ಅತ್ಯುತ್ತಮ ಬೊಲ್ಷೆವಿಕ್” ಎಂದು ಹೊಗಳಿದರು.
ಆದರೆ ಲೆನಿನ್ರ ಕಾಲನಂತರ ಅಧಿಕಾರದ ಗದ್ದುಗೆ ಏರಿದ ಸ್ಟಾಲಿನ್ ಮಿಲಿಟರಿ ಬಣ, ಟ್ರಾಟ್ಸ್ಕಿಯವರ ತೀಕ್ಷ್ಣ ವಿಮರ್ಶನಾ ದೃಷ್ಟಿಕೋನವನ್ನು ಸಹಿಸಲಿಲ್ಲ. ಇದಕ್ಕೆ ಮುಖ್ಯ ಕಾರಣ ಲೆನಿನ್ ಮತ್ತು ಟ್ರಾಟ್ಸ್ಕಿಗಳ ಬೊಲ್ಷೆವಿಕ್ ಪಕ್ಷವನ್ನು ಅದರ ಅತಂಸ್ಸತ್ವವಾದ ಅಂತರರಾಷ್ಟ್ರೀಯ ಕ್ರಾಂತಿಯಿಂದ ವಿಮುಖಗೊಳಿಸಬೇಕಾದ ಅನಿವಾರ್ಯತೆ ಸ್ಟಾಲಿನ ಅವರದ್ದಾಗಿತ್ತು. ಹೀಗಾಗಿ ‘ಒಂದು ದೇಶದಲ್ಲಿ ಸಮಾಜವಾದ’ ಮತ್ತು ಎರಡು ಹಂತಗಳ ಕ್ರಾಂತಿಯೆಂಬ ಹುಸಿ ಮತ್ತು ಅತ್ಯಂತ ಅಪಾಯಕಾರಿ ಸಿದ್ಧಾಂತಗಳನ್ನು ಸ್ಟಾಲಿನ್ ವಾದಿಗಳು ಪ್ರಪಂಚದಾದ್ಯಂತ ಪ್ರಚಾರ ಮಾಡತೊಡಗಿದರು.
ಅದುವರೆವಿಗೆ ವಿಶ್ವಕ್ರಾಂತಿಯ ವಾಹಕವಾಗಿದ್ದ ಮೂರನೇಯ ಅಂತರರಾಷ್ಟ್ರೀಯ ಸಂಘಟನೆಯನ್ನು ದುರುಪಯೋಗಪಡಿಸಿಕೊಂಡು ತಮ್ಮ ಖೋಟಾ ತತ್ವಗಳನ್ನು ಮುಂದಾಗಿಸಿದರು. ತಮ್ಮ ಈ ಚಿತಾವಣೆಗೆ ಲೆನಿನ್ನರ ಸಹಯೋಗಿ, ಅತ್ಯಂತ ಪ್ರತಿಭಾವಂತ ವಾಗ್ಮಿ ಹಾಗು ಬೊಲ್ಷೆವಿಕ್ ಪಕ್ಷದ ಕೆಂಪು ಸೇನೆಯನ್ನು ಸಂಘಟಿಸಿದ ಟ್ರಾಟ್ಸ್ಕಿ ತಡೆಯಾಗುತ್ತಾನೆಂಬ ಅರಿವು ಅವರಿಗಿತ್ತು. ಮೊದಲಿಗೆ ಟ್ರಾಟ್ಸ್ಕಿಯನ್ನು ಪಕ್ಷದಲ್ಲಿ ಮೂಲೆ ಗುಂಪಾಗಿಸಿ, ತದನಂತರ ಅವನಿಗೆ ಲೆನಿನ್ ವಿರೋಧಿಯೆಂಬ ಹಣೆಪಟ್ಟಿಯಿತ್ತು. 1929ರ ಸಮಯದಲ್ಲಿ ಗಡಿಪಾರು ಮಾಡಲಾಯಿತು. ಯಾವುದೇ ಯೂರೋಪಿನ ದೇಶಗಳು ಟ್ರಾಟ್ಸ್ಕಿಗೆ ತಮ್ಮ ದೇಶಗಳಲ್ಲಿ ನೆಲೆಯೂರಲು ಅವಕಾಶ ಕೊಡಲಿಲ್ಲ. ಕೊನೆಗೆ, ತಮ್ಮ ರಾಜಕೀಯ ಗೆಳೆಯರ ಸಹಾಯದಿಂದ ಟ್ರಾಟ್ಸ್ಕಿ,ಮೆಕ್ಸಿಕೋದ ಹೊರಗಡೆ ಒಂದು ರೀತಿಯ ಧಿಗ್ಬಂದನದಲ್ಲಿ ವಾಸಿಸಬೇಕಾಯಿತು.(ಆ ಹೊತ್ತಿಗಾಗಲೇ ಟ್ರಾಟ್ಸ್ಕಿ ಪರಿವಾರದ ಮೇಲೆ ಹಲವಾರು ಬಾರಿ ಅಪಾಯಕಾರಿ ಹಲ್ಲೆಗಳನ್ನು ಸ್ಟಾಲಿನ್ರ ಸಹಚರರು ನಡೆಸಿದ್ದರು.) ನೆಲೆಯೇ ಇಲ್ಲದ ಶರಣಾರ್ಥಿಯಾಗಿದ್ದರೂ ಟ್ರಾಟ್ಸ್ಕಿ ತನ್ನ ರಾಜಕೀಯ ವಿಮರ್ಶೆ ಮತ್ತು ಸ್ಟಾಲಿನ್ ವಾದದ ಟೀಕೆಯನ್ನು ಬಿಡಲಿಲ್ಲ. ಈ ಸಂದರ್ಭದಲ್ಲಿ ಅವರು 1936ರಲ್ಲಿ ಬರೆದ (ರೆವೆಲ್ಯೂಷನ್ ಬಿಟ್ರೇಡ್)‘ಕ್ರಾಂತಿಗಾದ ದ್ರೋಹ’ ಪುಸ್ತಕದಲ್ಲಿ, ಮಿಲಿಟರಿ ಅಧಿಕಾರಶಾಹಿಯ ಕ್ರಾಂತಿವಿರೋಧಿ ಸೆಲೆ ಇದ್ದಾಗ್ಯೂ ಕೂಡ, ಸೋವಿಯತ್ ಒಕ್ಕೂಟದಲ್ಲಿ ಬಂಡವಾಳಶಾಹಿ ನಿರ್ಮೂಲನದಿಂದಾಗಿ ಮತ್ತು ಕಾರ್ಮಿಕ ರಾಜ್ಯ ಸ್ಥಾಪನೆಯಿಂದಾಗಿ ನಡೆದ ಅಸಾಧಾರಣ ಅಭಿವೃದ್ಧಿಯನ್ನು ವಿವರಿಸಿದ್ದಾರೆ.
ಆದರೆ ಆ ಕಾರ್ಮಿಕ ರಾಜ್ಯ ಹೇಗೆ ಸ್ಟಾಲಿನ್ನರ ಕಾಲದಲ್ಲಿ ವಿಕೃತಗೊಂಡಿತು ಮತ್ತು ಎಲ್ಲ ಜನವಿರೋಧವನ್ನು ಸ್ಟಾಲಿನ್ ವಾದಿ ಯಂತ್ರ ಹೇಗೆ ಹೊಸಕಿತು ಎಂಬುದನ್ನೂ ವಿವರಿಸಿದ್ದಾರೆ. ಸ್ಟಾಲಿನ್, ಸೋವಿಯತ್ ಒಕ್ಕೂಟದಲ್ಲಿದ್ದ ಎಲ್ಲಾ ಪ್ರಜಾತಂತ್ರವನ್ನೂ ನಿರ್ನಾಮ ಮಾಡಿ, ತನ್ನ ಸುತ್ತ ಅಧಿಕಾರವನ್ನು ಕೇಂದ್ರೀಕರಿಸಿಕೊಂಡು, ಕಾರ್ಮಿಕವರ್ಗ ಹಾಗೂ ರೈತಾಪಿಗಳಿಗೆ, ಸಮಾಜವನ್ನು ಮುನ್ನಡೆಸುವಲ್ಲಿದ್ದ ಎಲ್ಲಾ ಕಾರ್ಮಿಕ-ಜನತಾಂತ್ರಿಕ ಹಕ್ಕುಗಳನ್ನು ಕಿತ್ತುಕೊಂಡ ಬಗೆಯನ್ನು ಟ್ರಾಟ್ಸ್ಕಿ ತಮ್ಮ ‘ಕ್ರಾಂತಿಗಾದ ದ್ರೋಹ’ ಬರಹದಲ್ಲಿ ವಿವರಿಸಿದ್ದಾರೆ.
ಸ್ಟಾಲಿನ್ರ ಆಡಳಿತದಲ್ಲಿ ಸೋವಿಯತ್ ಒಕ್ಕೂಟದಲ್ಲಿ ಬಂಡವಾಳಶಾಹಿ ವ್ಯವಸ್ಥೆಯನ್ನು ಬುಡಮೇಲು ಮಾಡಲಾಗಿತ್ತಾದರೂ, ಅದು ಒಂದು ಆರೋಗ್ಯಕರ, ಸಾಮರಸ್ಯ ಹೊಂದಿದ ಕಾರ್ಮಿಕ ರಾಜ್ಯವಾಗಿರಲಿಲ್ಲ.ಬದಲಾಗಿ ಒಂದು ವಿಕೃತ ಅಥವಾ ವಿರೂಪಗೊಂಡ ಕಾರ್ಮಿಕ ರಾಜ್ಯವಾಗಿತ್ತು ಎಂಬುದು ಲೆನಿನ್ರ ಸಹಯೋಗಿ ಟ್ರಾಟ್ಸ್ಕಿಯ ಅಭಿಪ್ರಾಯ. ಒಂದು ನೈಜ ಆರೋಗ್ಯವಂತ ಕಾರ್ಮಿಕ ರಾಜ್ಯದ ಸ್ಥಾಪನೆಗೆ ಕಾರ್ಮಿಕ ಪ್ರಜಾತಂತ್ರವಿಲ್ಲದೆ ಮತ್ತು ಸಮಾಜವನ್ನು ನಡೆಸುವಲ್ಲಿ ಕಾರ್ಮಿಕ ವರ್ಗಕ್ಕೆ ಎಲ್ಲಾ ಹಂತಗಳಲ್ಲೂ ಪಾಲಿಲ್ಲದೆ ಸಾಧ್ಯವೇ ಇಲ್ಲ ಎಂಬುದು ಟ್ರಾಟ್ಸ್ಕಿ ಮತ್ತು ಲೆನಿನ್ನರ ಖಚಿತ ಅಭಿಪ್ರಾಯವಾಗಿತ್ತು.
ಸೋವಿಯತ್ ಒಕ್ಕೂಟದಲ್ಲಿ ಒಂದು ನೂತನ ರಾಜಕೀಯ ಕ್ರಾಂತಿ ನಡೆಸಬೇಕೆಂಬ ಕರೆಯನ್ನಿತ್ತಿದ್ದ ಟ್ರಾಟ್ಸ್ಕಿಗೆ ಆ ಕ್ರಾಂತಿ ಅಲ್ಲಿದ್ದ ಅಧಿಕಾರಶಾಹಿಯನ್ನು ಒದ್ದೋಡಿಸಿ ನೈಜ ಕಾರ್ಮಿಕ ಹತೋಟಿ ಮತ್ತು ಕಾರ್ಮಿಕ ಪ್ರಜಾತಂತ್ರವನ್ನು ಸ್ಥಾಪಿಸುವ ರಾಜಕೀಯ ಕ್ರಾಂತಿಯಾಗಬೇಕೆಂಬ ಕನಸು ಅವರದ್ದಾಗಿತ್ತು. ಅವರ ಈ ವಿಮರ್ಶೆ, ತದನಂತರ ಸ್ಥಾಪನೆಯಾದ ಪೂರ್ವ ಯೂರೋಪ್, ಚೈನಾ ಮತ್ತು ಕ್ಯೂಬಾ ಆಡಳಿತಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ಭವಿಷ್ಯದಲ್ಲಿ ಮಾರ್ಕ್ಸ್ ವಾದಿಗಳಿಗೆ ಸಹಾಯ ಮಾಡಿತು. ಈ ದೇಶಗಳಲ್ಲೂ ಸಹ ಬಂಡವಾಳಶಾಹಿ ಆರ್ಥಿಕ ಸಂಬಂಧಗಳು ನಿರ್ಮೂಲನೆಗೊಂಡರೂ, ಅಲ್ಲಿ ಸ್ಥಾಪನೆಗೊಂಡದ್ದು, ವಿರೂಪ ಹೊಂದಿದ ಕಾರ್ಮಿಕ ರಾಜ್ಯಗಳೇ. ಈ ದೇಶಗಳಲ್ಲಿ ನಡೆದ ಕ್ರಾಂತಿಕಾರಿ ಬದಲಾವಣೆಗಳು ಬಂಡವಾಳಶಾಹಿ ಮತ್ತು ಜಮೀನ್ದಾರಿ ಪದ್ಧತಿಗಳನ್ನು ನಾಶಮಾಡಿದವು. ಆದರೆ ಒಂದು ಆರೋಗ್ಯಕರ ಕಾರ್ಮಿಕ ರಾಜ್ಯಕ್ಕೆ ಅವಶ್ಯಕವಾಗಿ ಬೇಕಾದ ಕಾರ್ಮಿಕ ಪ್ರಜಾತಂತ್ರದ “ಆಮ್ಲಜನಕ” ಈ ದೇಶಗಳಲ್ಲಿ ಇರಲಿಲ್ಲ ಎಂಬುದನ್ನು ನಾವು ಮನಗಾಣತ್ತೇವೆ.
ಕಳೆದ ಒಂದು ದಶಕದಲ್ಲೇ ಹಲವಾರು ಡೋಲಾಯಮಾನ ಸಂಘಟನೆಗಳು ವಿಶ್ವದ ರಾಜಕೀಯ ನಕ್ಷೆಯನ್ನೇ ಏರುಪೇರಾಗಿಸಿದೆ. ಮಾರ್ಕ್ಸ್ ವಾದದ ದಿಕ್ಸೂಚಿಯನ್ನು ಪಕ್ಕಕ್ಕಿಟ್ಟವರು, ದಾರಿ ತಪ್ಪುವುದು ಖಂಡಿತ.
‘ನ್ಯೂ ಸೋಶಿಯಲಿಸ್ಟ್ ಆಲ್ಟರ್ನೇಟಿವ್’ ಮತ್ತು ಕಮಿಟಿ ಫಾರ್ ಎ ವರ್ಕರ್ಸ್ ಇಂಟರ್ ನ್ಯಾಷನಲ್ (CWI) ಮಾರ್ಕ್ಸ್ ವಾದದ ಸಿದ್ಧಾಂತದಲ್ಲಿ ಅಚಲವಾದ ವಿಶ್ವಾಸ ಇರಿಸಿ ಟ್ರಾಟ್ಸ್ಕಿವಾದದ ವಿಮರ್ಶನ ರೀತಿಯನ್ನು ತನ್ನದಾಗಿಸಿಕೊಂಡಿರುವ ಸಂಘಟನೆಗಳು. CWIನ ಅಂತರರಾಷ್ಟ್ರೀಯದ ನೇತೃತ್ವದಲ್ಲಿ 45 ದೇಶಗಳಲ್ಲಿ, ಪ್ರಪಂಚದಾದ್ಯಂತ ಸಾವಿರಾರು ಕ್ರಾಂತಿಕಾರಿ ಚಿಂತನೆ ಮತ್ತು ಸಂಘಟನೆಗಳನ್ನು ಬೆಳೆಸಲು ನಡೆಸುತ್ತಿರುವ ಅವಿರತ ಹೋರಾಟ, ಶ್ರಮಗಳೇ ಟ್ರಾಟ್ಸ್ಕಿ ಮತ್ತು ಅವರ ವಿಚಾರಗಳಿಗೆ ಸಿಕ್ಕ ನಿಜವಾದ ಮುನ್ನಡೆಯಾಗಿದೆ.
ಮಾರ್ಕ್ಸ್ ವಾದಿಗಳು ವ್ಯಕ್ತಿಪೂಜೆಯನ್ನು ಮಾಡುವುದಿಲ್ಲವಾದರೂ, ಲಿಯಾನ್ ಟ್ರಾಟ್ಸ್ಕಿ ಒಬ್ಬ ಸಾಹಸಿ ಹಾಗೂ ಧೈರ್ಯಶಾಲಿ ಕ್ರಾಂತಿಕಾರಿ, ಒಬ್ಬ ಮಹಾನ್ ಕ್ರಾಂತಿಕಾರಿ ತತ್ವಜ್ಞ ಮತ್ತು ತನ್ನ ಕೊನೆಯುಸಿರಿನವರೆವಿಗೂ ಸಮಾಜವಾದಿ ಕ್ರಾಂತಿಯ ರಕ್ಷಣೆಗೆ ತನ್ನನ್ನು ತೊಡಗಿಸಿಕೊಂಡವನು ಎಂಬುದು ನಿಸ್ಸಂದೇಹ. ಈ ಕಾರಣಕ್ಕಾಗಿಯೇ ಇಂದು ನಾವು ಮತ್ತು ಮುಂದಿನ ಜನಾಂಗದ ಮಾರ್ಕ್ಸ್ ವಾದಿಗಳು ಲಿಯಾನ್ ಟ್ರಾಟ್ಸ್ಕಿಯನ್ನು ಒಬ್ಬ ಕಾರ್ಮಿಕ ವರ್ಗದ ಹೀರೋ ಎಂದು ತಿಳಿಯುತ್ತೇವೆ. ಅದಕ್ಕಾಗಿಯೇ ನಮ್ಮ ರಾಜಕೀಯ ಶತ್ರುಗಳು ನಮ್ಮನ್ನು ಟ್ರಾಟ್ಸ್ಕಿವಾದಿಗಳೆಂದು ಜರೆದಾಗ ನಮಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ.
ಟ್ರಾಟ್ಸ್ಕಿಯ ಕನಸಾದ ಅಂತರರಾಷ್ಟ್ರೀಯ ಸಮಾಜವಾದಿ ಕ್ರಾಂತಿಯನ್ನು ನನಸಾಗಿಸಿ, ಅವರ ವಾದ ವಿಚಾರಗಳು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುವ ಜವಾಬ್ದಾರಿ ನಮ್ಮದಾಗಿದೆ.
* ಜಗದೀಶ್ ಜಿ ಚಂದ್ರ