ಬಂಡವಾಳಿಗಳ ಥಳುಕು ಜನತಂತ್ರ

demoಇದು ಸರಾಸರಿ ಅನ್ಯಾಯ. ಈ ದೇಶದ ಆಳುವ ವರ್ಗಕ್ಕೆ ಚರಿತ್ರೆಯ ಮತ್ತು ಭವಿಷ್ಯದ ಅರಿವು ಮತ್ತು ಕಾಳಜಿಗಳಿಲ್ಲ. ಜಗತ್ತಿನ ಅತಿ ದೊಡ್ಡ ಪ್ರಜಾಸತ್ತೆ ಎಂದು ಬೀಗಿ ಬೊಬ್ಬೆಇಡುವ ಇವರಿಗೆ ಕನಿಷ್ಠ ಜನತಾಂತ್ರಿಕ ರೀತಿರಿವಾಜುಗಳ ಪರಿಚಯವಿಲ್ಲ. ಅಫ್ಜಲ್ ಗುರು ಮೊಕದ್ದಮೆಯನ್ನು ನ್ಯಾಯಾಲಯಗಳಲ್ಲಿ ನಡೆಸಿದ ರೀತಿ, ಅವರಿಗೆ ಸಿಕ್ಕ ನ್ಯಾಯದ ಅವಕಾಶಗಳು , ಮತ್ತು ಮೊಕದ್ದಮೆಗೆ ಮುಂಚೆಯೇ ಹೇಗೆ ಅವರಿಗೆ ಮಾಧ್ಯಮಗಳಿಂದ ಪ್ರೇರೇಪಿತ ತೀರ್ಪು ನೀಡಲಾಗಿತ್ತು ಎಂಬುದು ಈಗ ಸರ್ವವಿದಿತ. ಅವರ ಕುಟುಂಬ ಹಾಗು ಆಪ್ತರಿಗೆ ಶವಸಂಸ್ಕಾರದ ಅವಕಾಶವನ್ನೂ ನಿರಾಕರಿಸಿರುವುದು, ಈ ದೇಶದ ಆಳುವವರ್ಗಗಳಿಗೆ ಜನತಂತ್ರದ ಬಗ್ಗೆ ಇರುವ ಬದ್ಧತೆಯನ್ನು ಪ್ರಶ್ನಿಸುತ್ತದೆ.

ಭಾರತದ ನೆರೆಯ ದೇಶದ ಶ್ರೀಲಂಕಾದಲ್ಲೂ ಇದೇ ರೀತಿಯ ವಿದ್ಯಮಾನಗಳು ರಾರಾಜಿಸುತ್ತಿವೆ. ಇತ್ತೀಚೆಗೆ ತಮಿಳು ಉಗ್ರರೆಂಬ ಹಣೆಪಟ್ಟಿ ಹಚ್ಚಿ ಸೆರೆವಾಸದಲ್ಲಿಟ್ಟಿದ್ದ ಇಬ್ಬರು ಬಂಧಿಗಳು;ನಿಮಲ ರೂಪನ್ ಮತ್ತು ದಿಲ್ ರುಕ್ಶಾನ್ ಸೆರೆವಾಸದಲ್ಲಿದ್ದಾಗ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದಾಗ ಅವರ ಶವಗಳನ್ನು ಬಂಧು-ಮಿತ್ರರಿಗೆ ಕೊಡಲ್ಪಡಲಿಲ್ಲ. ನಿಮಲ ರೂಪನ್ ರವರ ಶವವನ್ನು ಅವರ ಬಂಧುಗಳಿಗೆ ನೀಡಬೇಕೆಂಬ ನಿಲುವು ತಾಳಿದ ಅಲ್ಲಿನ ಸರ್ವೋಚ್ಛ ನ್ಯಾಯಲಯದ ಪೀಠಾದಿಪತಿ ಶಿರಾನಿ ಬಂಡಾರನಯಿಕೆರವರನ್ನೆ ಕೆಳಗಿಳಿಸಿದ “ಕೀರ್ತಿ” ಅಲ್ಲಿನ ಚುನಾಯಿತ ರಾಜಪಕ್ಸೆ ಸರ್ಕಾರಕ್ಕೆ ಸಲ್ಲುತ್ತದೆ.

ಕೇವಲ ತೋರಿಕೆಗೆ ಮಾತ್ರ ಪ್ರಜಾತಂತ್ರದ ದಿನಚರಿಯನ್ನು ಪಠಿಸುವ, ಯಾಂತ್ರಿಕವಾಗಿ ಚುನಾವಣೆಗಳ ನಡೆಸಿ ತಮ್ಮ ಅತ್ಯಂತ ಕೆಳಮಟ್ಟದ ರಾಜಕಾರಣಕ್ಕೆ ಜನತಾಂತ್ರಿಕ ಥಳಕು ಹಾಕಿರುವ ಈ ಪ್ರದೆಶದ ಆಳುವ ವರ್ಗಗಳು ಮೂಲಭೂತವಾಗಿ ಸಾಮಂತಶಾಹಿ ಮತ್ತು ಯಜಮಾನಿಕೆ ಪಧ್ಧತಿಯ ಗುಲಾಮರು. ಇವರ ರಾಷ್ತ್ರೀಯವಾದ, ದೇಶಭಕ್ತಿ ಮತ್ತು ಸಾರ್ವಭೌಮತ್ವವಾದಗಳು ವಿವಿಧ ದೇಶೀಯತೆಗಳನ್ನು ತುಳಿಯುವ ಸಂಚಲ್ಲದೆ ಬೇರೆನೂ ಅಲ್ಲ. ಇಲ್ಲಿರುವ ಯಾವುದೆ ಬಂಡವಾಳೀ ಪಕ್ಷ ಹಾಗು ಗುಂಪಿನವರೂ ಈ ಪ್ರದೇಶದ ವಿವಿದ ದೇಶೀಯತೆಗಳ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಕ್ಷಮತೆ ಹೊಂದಿಲ್ಲ. ಭಾರತದ ಕಾಂಗ್ರೆಸ್ಸ್, ಬಿಜೆಪಿ ಹಾಗೂ ಇನಿತರ ಚಿಲ್ಲರೇ ಬಂಡವಾಳೀ ಪಕ್ಷಗಳಲ್ಲಿ ಪ್ರಗತಿ ಪರ ಧೋರಣೆಯನ್ನು ಅರಸವುದು ಮರಳುಗಾಡಿನಲ್ಲಿ ಮರೀಚಿಕೆಯನ್ನು ಅರಸಿದಂತೆ.

ದುಡಿಯುವ ವರ್ಗದ ಪ್ರಗತಿಗೆ ಜನತಾಂತ್ರಿಕ ರಾಜಕೀಯ ಅತ್ಯಂತ ಅಗತ್ಯ. ಆದರೆ ಅದು ಮೂಲಭೂತವಾಗಿ ವಿಭಿನ್ನವಾದ ಬೇರೊಂದು ಸೈಧ್ಧಾಂತಿಕ ನೆಲೆಗಟ್ಟಿನ ಮೇಲೆ ನಿಂತು ರೂಪುಗೊಂಡ ಸಮಾಜವಾದಿ ಜನತಾಂತ್ರಿಕತೆ ಯಾಗಿರಬೇಕು. ಯಾವುದೆ ದೇಶೀಯತೆ, ಸ್ಥಳೀಯ, ಭಾಷಿಕರ, ಪಂಗಡಗಳ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಆಶೋತ್ತರಗಳನ್ನು ದಮನ ಮಾಡದೆ ಎಲ್ಲಾ ವಿವಿಧತೆಯನ್ನು ಒಳಗೊಂಡು, ಸಮಾಜದ ಏಳಿಗೆಯನ್ನು ದುಡಿಯುವ ವರ್ಗ ಮಾತ್ತ್ರ ಸಾಧಿಸಬಹುದು. ಈ ನಿಟ್ಟಿನತ್ತ ಸಮಾಜವಾದಿ ರಾಜಕೀಯ ಪರ್ಯಾಯದ ನಿರ್ಮಾಣದತ್ತ ನಮ್ಮ ವರ್ಗ ಹೆಜ್ಜೆ ಹಾಕಬೇಕಿದೆ.