ಸಂಸತ್ತಿನ ಕಳೆದ ಮುಂಗಾರು ಅಧಿವೇಶನದಲ್ಲಿ ಮಂಡನೆಯಾದ ಆಹಾರ ಭದ್ರತಾ ಕರಡು ಮಸೂದೆಯನ್ನು ವಿರೋಧಿಸಿ ರಾಜ್ಯ ಆಹಾರ ಹಕ್ಕುಗಳ ಆಂದೋಲನ ಹಾಗೂ ಇನ್ನಿತರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು.
ಆಹಾರ ಭದ್ರತಾ ಮಸೂದೆ-2011 ಬಡಜನರ ವಿರೋಧಿ ಕಾಯಿದೆಯಾಗಿದೆಯೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಕಾಯಿದೆಯನ್ನು ವಿರೋಧಿಸಿ ಕೂಗುತ್ತಿದ್ದ ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು. ರಾಜ್ಯದ ನಾನಾ ಜಿಲ್ಲೆಗಳಿಂದ 300 ಮಂದಿ ಆಗಮಿಸಿದ್ದರು. ಕಾಯಿದೆಯು ಯಾವುದೇ ಕಾರಣಕ್ಕೂ ಲೋಕಸಭೆಯಲ್ಲಿ ಒಪ್ಪಿಗೆ ಪಡೆಯಲು ಬಿಡಬಾರದೆಂಬ ಉದ್ದೇಶದಿಂದ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರ್ಥಿಕ ನೀತಿಗಳ ವಿರುದ್ಧ ಈ ಪ್ರತಿಭಟನೆಯನ್ನು ಹಮ್ಮಿ ಕೊಂಡಿರುವುದಾಗಿ ಪ್ರತಿಭಟನಾಕಾರರು ತಿಳಿಸಿದರು.
ಪೂರ್ವ ನಿಗದಿತ ಯೋಜನೆಯನ್ನು ಸಿದ್ದಪಡಿಸಿಕೊಂಡೆ ದೇಶದ ಬಹು ಜನರ ಗಮನವನ್ನು ಬೇರೆಡೆ ಸೆಳೆಯಬೇಕೆಂಬ ಉದ್ದೇಶದಿಂದ ಜನಲೋಕಪಾಲ ಮಸೂದೆ ಮಂಡನೆಯ ಜಂಜಾಟದ ಜೊತೆಜೊತೆಯಲ್ಲೇ ಈ ಕರಡನ್ನು ಮಂಡಿಸಲಾಗಿದೆ. ಇದು ಜನರ ಕಣ್ಣಿಗೆ ಮಣ್ಣು ಎರೆಚುವ ಕುತಂತ್ರವಾಗಿತ್ತು ಎಂದು ಟೀಕಿಸಲಾಯಿತು.
ಕಾಯಿದೆಯ ಪ್ರಕಾರ ಇನ್ನು ಮುಂದೆ ಪಡಿತರದ ಬದಲು ಹಣ ನೀಡುವ ಪ್ರಸ್ತಾಪವಿದ್ದು ಪಡಿತರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ಹುನ್ನಾರ ಈ ಕಾಯಿದೆಯಲ್ಲಿ ಅಡಗಿದೆಯೆಂದು ಖಂಡಿಸಲಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಚಾಳಿಯನ್ನು ಮುಂದುವರಿಸಿವೆ ಎಂದು ರಾಜ್ಯ ಆಹಾರ ಹಕ್ಕುಗಳ ಆಂದೋಲನದ ಸಂಚಾಲಕರಾದ ಕೆ.ಸುಧಾ ತಿಳಿಸಿದರು.
ಬೇಡಿಕೆಗಳ ಮನವಿ ಪತ್ರವನ್ನು ರಾಜ್ಯದ ಮುಖ್ಯಮಂತ್ರಿ, ಸಂಬಂಧ ಪಟ್ಟ ಸಚಿವರಿಗೆ ಸಲ್ಲಿಸಲು ಹೊರಟ ಪ್ರತಿಭಟನಾ ಜಾಥಾವನ್ನು ಪೊಲೀಸರು ಕುಂಟು ನೆಪ ಹೇಳಿ ಅರ್ಧದಲ್ಲೇ ತಡೆಹಿಡಿದರು.
ಪೋಲಿಸರ ಸರ್ಪಗಾವಲು ಪ್ರತಿಭಟನಾಕಾರರನ್ನು ಸುತ್ತುವರೆದು,ಸಾಕಷ್ಟು ಸಮಯದ ನಂತರ ಮೀನಾಮೇಷ ಎಣಿಸಿಕೊಂಡೆ ಸ್ಥಳಕ್ಕೆ ಬಂದ ಸಂಬಂಧ ಪಟ್ಟ ಅಧಿಕಾರಿ ಎಂದಿನಂತೆ ಭರವಸೆಗಳ ಸುರಿಮಳೆಗೈದು ಹೊರನಡೆದರು.
ಭರವಸೆಗಳಿಂದ ಈಗಾಗಲೇ ರೋಸಿ ಹೋಗಿರುವ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಡ ಜನರ ವಿರೋಧಿ ನೀತಿಗಳ ವಿರುದ್ಧ ಮುಂಬರುವ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ತಿಳಿಸಿದರು.
ವಿಶ್ವನಾಥ್
ನವ ಸಮಾಜವಾದಿ ಪರ್ಯಾಯ, ಬೆಂಗಳೂರು