ಲಿಯಾನ್ ಟ್ರಾಟ್‍ಸ್ಕಿ

ಲಿಯಾನ್ ಟ್ರಾಟ್ಸ್ಕಿ
ನಿರಂತರ ಸಮಾಜವಾದಿ ಕ್ರಾಂತಿಯ
ಪ್ರತಿಪಾದಕ




1940 ಆಗಸ್ಟ್ 20ರಂದು, ಎಂಬತ್ತು ವರುಷಗಳ ಹಿಂದೆ ಜೋಸೆಫ್‌ ಸ್ಟಾಲಿನ್ʼ ಗುಪ್ತಚರದಳ; ಜೆ.ಪಿ.ಯು ಕೊಲೆಗಾರ ʼರೇಮಾಂಡ್ ಮರ್ಕೆಡಾರ್ʼ ಲಿಯಾನ್ ಟ್ರಾಟ್ಸ್ಕಿಯವರ ತಲೆಗೆ ಮಂಜುಗಡ್ಡೆ ಮೀಟುವ ಕೈಗುದ್ದಲಿಯಿಂದ ಮರಾಣಾಂತಿಕವಾಗಿ ಹೊಡೆದದ್ದರಿಂದ, ಸ್ಟಾಲಿನ್ʼ ಮತ್ತು ಸ್ಟಾಲಿನ್ವಾದದ ಅತ್ಯಂತ ತೀಕ್ಷ್ಣ ಟೀಕಾಕಾರ ಹಾಗು ಪ್ರಖರ ರಾಜಕೀಯ ವಿಮರ್ಶಕ, ಅಂದಿನ ಕಾಲದ ಪ್ರಧಾನ ಮಾರ್ಕ್ಸ್ವಾದಿ ಚಿಂತಕ ಮತ್ತು ಮಹಾನ್ ಕ್ರಾಂತಿಕಾರಿ ಲಿಯಾನ್ ಟ್ರಾಟ್ಸ್ಕಿ ಮರುದಿನ ಆಗಸ್ಟ್ 21 ರಂದು ಕೊನೆಯುಸಿರುಳೆದರು.

ಟ್ರಾಟ್‍ಸ್ಕಿಯ ಹೆಸರು ಭಾರತದ ಮಟ್ಟಿಗೆ ಬಹುಮಂದಿಗೆ ಅಪರಿಚಿತ. ಕಮ್ಯೂನಿಸ್ಟ್ ಪಕ್ಷಗಳ ಕಾರ್ಯಕರ್ತರಿಗೆ ಹಾಗು ಎಡ ವಿಚಾರಧಾರೆಯತ್ತ ಒಲವಿರುವ ಬುದ್ಧಿಜೀವಿಗಳಿಗೆ, ಟ್ರಾಟ್ಸ್ಕಿಯ ಹೆಸರು ಅಕ್ಟೋಬರ್ ಕ್ರಾಂತಿಯ ಸಮಯದ ಖಳನಾಯಕನಂತೆ, ಬೊಲ್ಷೆವಿಕ್ ನಾಯಕ ಲೆನಿನ್ರ ವೈರಿಯೆಂದು ಮತ್ತು ಸಮಾಜವಾದದ ಶತ್ರುವೆಂದು ಪರಿಚಯಿಸಲಾಗಿದೆ. ಸ್ಟಾಲಿನ್ ಹಾಗು ಅವರ ಅನುಯಾಯಿಗಳು, ಚರಿತ್ರೆ ಹಾಗು ಸತ್ಯತೆಗಳನ್ನು ತಿರುಚುವ ವಿಷಯದಲ್ಲಿ ಅಪ್ರತಿಮ ನೈಪುಣ್ಯತೆಯನ್ನು ಸಾಧಿಸಿದ್ದಾರೆ. ಲೆನಿನ್ರ ಬರಹ ಸಂಗ್ರಹದಲ್ಲಿ, ವ್ಯಕ್ತಿ ವಿಚಾರ ಪರಿಚಯ ವಿಭಾಗದಲ್ಲಿ ಟ್ರಾಟ್ಸ್ಕಿಯನ್ನು ಒಬ್ಬ ಪ್ರತಿಕ್ರಾಂತಿಕಾರಿಯೆಂದೇ ಪರಿಚಯಿಸಲಾಗಿದೆ. ಸ್ಟಾಲಿನ್ರ ಕಾಲದಲ್ಲೂ, ಟ್ರಾಟ್ಸ್ಕಿಯನ್ನು ಲೆನಿನ್ರ ಪರಮ ವೈರಿ ಮತ್ತು ಜನದ್ರೋಹಿಯೆಂಬ ಹಣೆಪಟ್ಟಿ ಹಚ್ಚಿ 1929ರಲ್ಲಿ ಹಚ್ಚಿ ಸೋವಿಯತ್ ಒಕ್ಕೂಟದಿಂದ ಗಡಿಪಾರು ಮಾಡಲಾಯಿತು. ಅವರ ವಿಚಾರಗಳತ್ತ ಜನ ಎಲ್ಲಿ ಇಣುಕಿ ನೋಡಿ ಅಭ್ಯಾಸ ಮಾಡುತ್ತಾರೋ ಎಂಬ ಭಯದಿಂದ ಅವರ ಬರವಣಿಗೆ ಹಾಗೂ ಪುಸ್ತಕಗಳನ್ನೆಲ್ಲವನ್ನು ಕಾನೂನು ಬಾಹಿರವೆಂದು ಘೋಷಿಸಲಾಯಿತು.

 


ಟ್ರಾಟ್ಸ್ಕಿಯವರ ಹಿತೈಷಿಗಳ, ಬೆಂಬಲಿಗರ ಮತ್ತು ಅವರ ಪರವಾದ ರಾಜಕೀಯ ಧೋರಣೆ ಹೊಂದಿದ್ದ ಸಹಸ್ರಾರು ಜನರನ್ನು ಜೈಲಿಗೆ ತಳ್ಳಿ ಕೊಲ್ಲಿಸಲಾಯಿತು. ಪುರಾತನ ಪತ್ರ ದಾಖಲೆ ಸಂಗ್ರಹಾಲಯಗಳಲ್ಲಿ ಟ್ರಾಟ್ಸ್ಕಿ ಮತ್ತು ಲೆನಿನ್ ಜೊತೆಗಿದ್ದ ಎಲ್ಲ ಛಾಯಾಯಾಚಿತ್ರಗಳನ್ನು ತಿದ್ದುಪಡಿ ಮಾಡಲಾಯಿತು. ಟ್ರಾಟ್ಸ್ಕಿ ಮತ್ತು ಲೆನಿನ್ ನಡುವೆ ನಡೆದ ಅಸಂಖ್ಯಾತ ಪತ್ರವ್ಯವಹಾರ, ವಿಷಯಭಿನ್ನಾಭಿಪ್ರಾಯಗಳನ್ನು ಅಸಾಂದರ್ಭಿಕವಾಗಿ ಬಳಸಿ, ಭವಿಷ್ಯದ ಹೋರಾಟಗಾರರಿಗೆ, ಸಮಾಜವಾದಿಗಳಿಗೆ ಮತ್ತು ಯುವಕರಿಗೆ ಟ್ರಾಟ್ಸ್ಕಿ ಎಂಬ ಹೆಸರು ಒಬ್ಬ ಪಾತಕಿಯದ್ದೇನೋ ಎಂಬಂತೆ ಸುಳ್ಳನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಚಿತ್ರಿಸಲಾಯಿತು.

ಕರ್ನಾಟಕ ಹಾಗು ಭಾರತದ ಸಮಾಜವಾದಿ ಹುರಿಯಾಳುಗಳಿಗೆ ಸ್ಟಾಲಿನ್ವಾದಿ ಕಮ್ಯುನಿಸ್ಟ್ ಪಕ್ಷಗಳಾದ ಸಿ.ಪಿ.., ಸಿ.ಪಿ.(ಎಂ), ಸಿ.ಪಿ.(ಎಂ.ಎಲ್) ಮತ್ತು ಹಲವು–ಹತ್ತಾರು ಮಾವೋವಾದಿ ಗುಂಪುಗಳಲ್ಲಿ ಪೂರ್ವಾಗ್ರಹಗಳಿಗೆ ಗುರಿಯಾಗಿರುವ ನೈಜ ಕಾರ್ಯಕರ್ತರುಗಳಿಗೆ, ಹೋರಾಟಗಾರರಿಗೆ, ಕ್ರಾಂತಿಕಾರಿ ಲಿಯಾನ್ ಟ್ರಾಟ್ಸ್ಕಿಯ ಸತ್ಯ ಮತ್ತು ವಾಸ್ತವ ಚಿತ್ರಣವನ್ನು ಮಾಡಿಸುವುದೇ ಅವರ 80ನೇಯ ವಾರ್ಷಿಕ ಸ್ಮಾರಕೋತ್ಸವದ ಆಚರಣೆ ಎಂಬುದು ಟ್ರಾಟ್ಸ್ಕಿವಾದದ ಅನುಯಾಯಿ ಸಂಘಟನೆಯಾದ New Socialist Alternative (ನವ ಸಮಾಜವಾದಿ ಪರ್ಯಾಯ) ಹಾಗುದುಡಿಯೋರ ಹೋರಾಟಪತ್ರಿಕೆಯ ನಿಲುವು.

ಸ್ಟಾಲಿನ್ವಾದಿ ಅಪಪ್ರಚಾರಗಳು ಕೆಲವು ಕಾಲ ಕೆಲವರನ್ನು ದಾರಿ ತಪ್ಪಿಸಬಹುದು. ಆದರೆ ಸದಾಕಾಲ ಸರ್ವರನ್ನು ದಾರಿ ತಪ್ಪಿಸಲಾಗದು.

ಟ್ರಾಟ್ಸ್ಕಿಯ 80ನೇ ಸ್ಮಾರಕೋತ್ಸವದ ಈ ಸಂದರ್ಭದಲ್ಲಿ ಅವರ ವಿಚಾರಗಳ ಮತ್ತು ಜೀವನದ ಕೆಲವು ಪ್ರಮುಖ ಸಾಧನೆಗಳನ್ನು ನೆನಪು ಮಾಡಿಕೊಳ್ಳುವುದೇ ಇಂದಿನ ಕ್ರಾಂತಿಕಾರಿ ಸಮಾಜವಾದಿಗಳು ಮತ್ತು ಟ್ರಾಟ್ಸ್ಕಿವಾದಿಗಳು ಅವರಿಗೆ ಅರ್ಪಿಸುವ ಶ್ರದ್ಧಾಂಜಲಿ.

1940ರ ಆಗಸ್ಟ್ 21ರ ಟ್ರಾಟ್ಸ್ಕಿಯ ಮರಣಕ್ಕೆ ಕಾರಣನಾದ ಸ್ಟಾಲಿನ್ನರ ಬಾಡಿಗೆ ಹಂತಕ ರೇಮಾಂಡ್ ಮರ್ಕೆಡಾರ್ನ ಮಂಜುಗಡ್ಡೆ ಮೀಟುವ ಕೈಗುದ್ದಲಿ ಕೇವಲ ಸಾಧಾರಣ ಮೆದುಳೊಂದನ್ನು ಸಿಗಿದಿರಲಿಲ್ಲ. ಬದಲಾಗಿ, ಅಂದಿನ ಸಂದರ್ಭದಲ್ಲಿ ಅಂತರ್ರಾಷ್ಟ್ರೀಯವಾಗಿ ಇಡೀ ಕಾರ್ಮಿಕ ವರ್ಗ ಎದುರಿಸುತ್ತಿದ್ದ ಸಮಸ್ಯೆಗಳನ್ನು ಸಮರ್ಪಕವಾಗಿ ವಿಮರ್ಶಿಸಿ, ಭವಿಷ್ಯಕ್ಕೆ ದಾರಿ ತೋರುತ್ತಿದ್ದ ಜ್ಞಾನಕೇಂದ್ರವನ್ನೇ ನಿರ್ನಾಮ ಮಾಡಿತ್ತು.

1917 ಕ್ರಾಂತಿಯ ಸಂದರ್ಭದಲ್ಲಿ ರಷ್ಯಾದ ಜನರಿಗೆ ಲೆನಿನ್ ಯಾರುಟ್ರಾಟ್ಸ್ಕಿ ಯಾರು ಎಂಬ ವ್ಯತ್ಯಾಸವೇ ತಿಳಿದಿರಲಿಲ್ಲ, ಜಾರ್ ದೊರೆಯ ಪೋಲಿಸರಿಂದ ತಪ್ಪಿಸಿಕೊಳ್ಳಲು ಒಬ್ಬನೇ ವ್ಯಕ್ತಿ ಎರಡು ಹೆಸರನ್ನಿಟ್ಟು ಕೊಂಡಿದ್ದಾನೆ ಎಂಬ ಪ್ರತೀತಿ ಅಲ್ಲಿನ ಜನರಲ್ಲಿತ್ತು. ಏಕೆಂದರೆ ಟ್ರಾಟ್ಸ್ಕಿ ಮತ್ತು ಲೆನಿನ್ ವಿಚಾರ ಹಾಗೂ ಕಾರ್ಯತಂತ್ರಗಳಲ್ಲಿ ರೀತಿಯ ಸಾಮ್ಯತೆ ಇತ್ತು.” ಸೋವಿಯತ್ ಕ್ರಾಂತಿಯಿಂದ ಪ್ರಭಾವಿತನಾದ ಜಾನ್ರೀಡ್ ಎಂಬ ಅಮೇರಿಕನ್ ಪತ್ರಕರ್ತಲೇಖಕ ರೀತಿಯಾಗಿ ತನ್ನ ಪ್ರಖ್ಯಾತ ಪುಸ್ತಕಟೆನ್ ಡೇಸ್ ದಟ್ ಶುಕ್ ದಿ ವರ್ಲ್ಡ್ನಲ್ಲಿ ಉಲ್ಲೇಖಿಸಿದ್ದಾನೆ.

1917ರ ಅಕ್ಟೋಬರ್ ಕ್ರಾಂತಿಯ ಪೂರ್ವದಲ್ಲಿ ಹಾಗು ಕ್ರಾಂತಿಯ ನಂತರ ಟ್ರಾಟ್ಸ್ಕಿ ವಹಿಸಿದ ಪಾತ್ರ ಮತ್ತು ಅವರಿಗೆ ಲೆನಿನ್ ವಹಿಸಿದ್ದ ಜವಾಬ್ದಾರಿಗಳನ್ನು ಪಟ್ಟಿ ಮಾಡಿದಲ್ಲಿ ಸ್ಟಾಲಿನ್ವಾದಿಗಳ ಹಸಿಸುಳ್ಳುಗಳು ಎಂತಹ ಹೇಯವಾದದ್ದು ಎಂಬುದು ಸಾಬೀತಾಗುತ್ತದೆ.


1905-1906ರ ಮೊದಲನೆಯ ರಷ್ಯನ್ ಕ್ರಾಂತಿಯ ಸಂದರ್ಭದಲ್ಲಿ ಪ್ರಪ್ರಥಮ ಸೋವಿಯತ್’ನ (ಕಾರ್ಮಿಕ ವರ್ಗದ ಪ್ರತಿನಿಧಿಗಳ ಸಮಿತಿ) ಸಭಾಧ್ಯಕ್ಷ ಟ್ರಾಟ್ಸ್ಕಿ . 1917ರಲ್ಲಿ, ಮಾನವ ಚರಿತ್ರೆಯಲ್ಲೇ ಮೊದಲನೇ ಬಾರಿ ನಡೆದ ಏಕೈಕ ಮಹಾನ್ ಘಟನೆ ರಷ್ಯನ್ ಕ್ರಾಂತಿಯ ಪ್ರಮುಖ ಸಂಘಟನಕಾರರಲ್ಲೊಬ್ಬ ಟ್ರಾಟ್ಸ್ಕಿ . ತದನಂತರ ರಷ್ಯನ್ ಕ್ರಾಂತಿಯನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕೆಂಬ ಹುನ್ನಾರ ಮಾಡಿ ದಂಡೆದ್ದು ಬಂದಿದ್ದ 21 ದೇಶಗಳ ಸಾಮ್ರಾಜ್ಯಶಾಹಿ ಪ್ರತಿಕ್ರಾಂತಿಯ ಸೇನೆಗಳನ್ನು ಸೋಲಿಸಿದ ಕೆಂಪು ಸೇನೆಯನ್ನು ಕಟ್ಟಿ ಅದರ ನೇತೃತ್ವ ವಹಿಸಿದವರು ಕ್ರಾಂತಿಕಾರಿ ಟ್ರಾಟ್ಸ್ಕಿ .

ಇದೆಲ್ಲಕ್ಕಿಂತ ಮಿಗಿಲಾಗಿ, ಲಿಯಾನ್ ಟ್ರಾಟ್ಸ್ಕಿ ಕಾರ್ಮಿಕ ಚಳವಳಿಯ ಮಹಾನ್ ಸಿದ್ಧಾಂತಿ, ಕಾರ್ಲ್ಮಾರ್ಕ್ಸ್ರವರನ್ನು ಕಳೆದ ಶತಮಾನದ ಶ್ರೇಷ್ಠ ವ್ಯಕ್ತಿ ಎಂದು ಹೆಸರಿಸಲಾಗಿದೆ. ಏಂಗಲ್ಸ್, ಲೆನಿನ್ ಮತ್ತು ರೋಸಾ ಲುಕ್ಸುಂಬರ್ಗ್ ಅವರೊಂದಿಗೆ ಟ್ರಾಟ್ಸ್ಕಿಯೂ ಕೂಡಾ ಕಳೆದ ಶತಮಾನದ ದುಡಿಯುವ ವರ್ಗದ ಶ್ರೇಷ್ಠ ವ್ಯಕ್ತಿಗಳ ಸಾಲಿಗೆ ಸೇರುವ ದಿಟ್ಟ ಕ್ರಾಂತಿಕಾರಿ ಹೋರಾಟಗಾರ.

ಇಂದು, ಟ್ರಾಟ್ಸ್ಕಿವಾದದ ವಿರೋಧಿಗಳು, ಟ್ರಾಟ್ಸ್ಕಿಯ ವಿಚಾರ ಹಾಗು ಅವರ ಕಾರ್ಯವಿಧಾನಗಳನ್ನು ಕಾರ್ಯಸಾಧ್ಯವಲ್ಲವೆಂದೋ ಅಥವಾ ಸಮಕಾಲೀನ ಪರಿಸ್ಥಿತಿಗೆ ಸರಿ ಹೊಂದಲಾರದ್ದೆಂದೋ ಮೂದಲಿಸುತ್ತಾರೆ. ಆದರೆ ಟ್ರಾಟ್ಸ್ಕಿಯ ವಿಚಾರ ಭಂಡಾರದಲ್ಲಡಗಿರುವ ಮಾಕ್ಸ್ವಾದಿ ವಿಮರ್ಶೆ, 21ನೇ ಶತಮಾನದ ಸಮಾಜವಾದಿ ಕ್ರಾಂತಿಕಾರಿಗಳಿಗೆ, ಇಂದಿನ ಸಂಕೀರ್ಣ ಪರಿಸ್ಥಿತಿಗಳನ್ನು ಅರ್ಥೈಸಲು ಬೇಕಾದ ಸಾಧನ ಸಾಮಗ್ರಿಯನ್ನು ವಿಫುಲವಾಗಿ ಒದಗಿಸುತ್ತದೆ.

ಟ್ರಾಟ್ಸ್ಕಿಯವರ ವಿಚಾರಗಳು, ಅವರ ವಿಮರ್ಶನ ರೀತಿ ಮತ್ತು ತೀಮಾನಗಳು ಅವರ ಜೀವಿತ ಕಾಲದಲ್ಲಿ ಎಷ್ಟು ಪ್ರಸ್ತುತವಾಗಿದ್ದವೋ ಅಷ್ಟೇ ಇಂದಿಗೂ ಕೂಡ ಸಮಯೋಚಿತ, ಟ್ರಾಟ್ಸ್ಕಿಯ ಅತ್ಯಂತ ರೋಮಾಂಚನಕಾರಿ ಬರಹವಾದಹಿಸ್ಟರಿ ಆಫ್ ದಿ ರಷ್ಯನ್ ರೆವಲ್ಯೂಶನ್ಮಾರ್ಕ್ಸ್ವಾದಿ ತತ್ವ ಮತ್ತು ಸಿದ್ಧಾಂತಗಳನ್ನು ಕಾರ್ಯರೂಪಕ್ಕೆ ತರುವ ಸಂಕೀರ್ಣತೆಯನ್ನು ಸವಿಸ್ತಾರವಾಗಿ ದಾಖಲಿಸಿರುವ ಮೇರುಕೃತಿ, ಟ್ರಾಟ್ಸ್ಕಿಯ ಈ ಪುಸ್ತಕದ ಶೈಲಿ, ಓದುಗರೇ ಈ ಜಯಶಾಲಿ ಸಮಸಮಾಜ ಕ್ರಾಂತಿಯಲ್ಲಿ ಭಾಗವಹಿಸಿದ್ದರೇನೋ ಎಂಬಂತೆ ಭಾಸವಾಗಿಸುವಷ್ಟು ರೋಚಕವಾಗಿದೆ. ಅದಲ್ಲದೆ ಈ ಪುಸ್ತಕದುದ್ದಕ್ಕೂ ಕಂಡುಬರುವ ಇನ್ನೊಂದು ಬಹು ಮುಖ್ಯ ಅಂಶವೆಂದರೆ, ಅಕ್ಟೋಬರ್ 1917ರ ಸಂದರ್ಭದಲ್ಲಿ ಕ್ರಾಂತಿಕಾರಿ ಪಕ್ಷದ ಪಾತ್ರ ಮತ್ತು ಆ ರೀತಿಯ ಪಕ್ಷವನ್ನು, ಕ್ರಾಂತಿಕಾರಿ ಸದಸ್ಯರನ್ನು ಸೈದ್ಧಾಂತಿಕವಾಗಿ ತಯಾರು ಮಾಡಲೇ ಬೇಕಾದ ಪ್ರಮುಖ ಅನಿವಾರ್ಯತೆ ಬಗ್ಗೆ ಟ್ರಾಟ್ಸ್ಕಿಯ ಉಲ್ಲೇಖ, ಇಂದಿನ ಕ್ರಾಂತಿಕಾರಿಗಳಿಗೆ ದಾರಿದೀವಿಗೆಯಾಗಿದೆ.

ಲೆನಿನ್ ಮತ್ತು ಟ್ರಾಟ್ಸ್ಕಿಯವರ ಕಾಲದ ಬೊಲ್ಷೇವಿಕ್ ಪಕ್ಷ ಮಾರ್ಕ್ವಾದವನ್ನು ತನ್ನ ಸಿದ್ಧಾಂತವನ್ನಾಗಿಸಿಕೊಂಡು, ಪ್ರಜಾತಾಂತ್ರಿಕ ಕೇಂದ್ರಿಯತೆಯನ್ನು (Democratic Centralism) ತನ್ನ ಸಂಘಟನಾತ್ಮಕ ವಿಧಾನವನ್ನಾಗಿಸಿಕೊಂಡ ಪಕ್ಷವಾಗಿತ್ತು, ಇದರಿಂದಾಗಿ ಆ ಪಕ್ಷದಲ್ಲಿ ಅತ್ಯಧಿಕ ಪ್ರಜಾತಾಂತ್ರಿಕ ಹಕ್ಕುಗಳು ಮತ್ತು ಕಾರ್ಯಾಚರಣೆಯಲ್ಲಿ ಶಿಸ್ತು ಮತ್ತು ಒಗ್ಗಟ್ಟಿನ ಶಕ್ತಿ ಮಿಳಿತವಾಗಿತ್ತು.

1989ರವರೆಗೆ ಸಮಾಜವಾದದ ಹೆಸರಿನಲ್ಲಿ ಅಧಿಕಾರದಲ್ಲಿದ್ದ ಸ್ಟಾಲಿನ್ವಾದಿ ದೇಶಗಳ ಪತನ ಹಾಗು ಬಂಡವಾಳಶಾಹಿ ಆಕ್ರಮಣ ಇಂದು ಹಲವು ಕ್ರಾಂತಿಕಾರಿಗಳನ್ನು ನಿಷ್ಕ್ರಿಯರನ್ನಾಗಿಸಿದೆ ಹಾಗು ಎಡವಾದಿಗಳನ್ನು ಹತಾಶೆಯತ್ತ ದೂಡಿದೆ. ಇವರೆಲ್ಲರೂ ಇಂದು ಕ್ರಾಂತಿಕಾರಿ ಪಕ್ಷದ ಅವಶ್ಯಕತೆ, ಉಪಯುಕ್ತತೆ ಹಾಗು ಔಚಿತ್ಯದ ಬಗ್ಗೆ ವಾದವಿವಾದಗಳಲ್ಲಿ ತೊಡಗಿದ್ದಾರೆ. ಆ ರೀತಿಯ ಪಕ್ಷ–ಸಿದ್ಧಾಂತಗಳಿಗೆ ಬದಲಾಗಿ ಸಡಿಲವಾದ ಲಾಭಕೋರ ವರ್ಗಗಳನ್ನೂ ಒಳಗೊಂಡ ಸುಧಾರಣಾವಾದಿ (Liberal) ಪರ್ಯಾಯಗಳೇ ಇಂದಿನ ಆಧುನಿಕ ಯುಗದ ಅವಶ್ಯಕತೆ ಎಂಬ ಹುಂಬತನಕ್ಕೆ ತಲುಪಿದ್ದಾರೆ.

ಈ ನಿಟ್ಟಿನಲ್ಲಿ ಯಾವುದೇ ಪೂರ್ವಾಗ್ರಹಗಳಿಲ್ಲದೆ ವರ್ಗಹೋರಾಟ ಕಟ್ಟುವ ಮತ್ತು ಗಟ್ಟಿಗೊಳಿಸುವ ಚರ್ಚೆಗೆ ಟ್ರಾಟ್ಸ್ಕಿಯ ವಿಚಾರಗಳು ಬಹಳ ಸಮಯೋಚಿತವಾದದ್ದು. ಕಾರ್ಮಿಕ ವರ್ಗದ ಹಿತಸಾಧನೆ ಮತ್ತು ಬಂಡವಾಳಶಾಹಿ ವ್ಯವಸ್ಥೆಯಿಂದ ವಿಮೋಚನೆ ಕೇವಲ ಮಾಕ್ಸ್ವಾದಿ ಕಾರ್ಯಪ್ರಣಾಳಿಕೆಯ ಮೂಲಕ ಮಾತ್ರ ಸಾಧ್ಯ. ಹೋರಾಟಗಾರರನ್ನು ಕ್ರಾಂತಿಕಾರಿ ವಿಚಾರಗಳತ್ತ ಮತ್ತು ಕಾರ್ಮಿಕವರ್ಗದ ಪಕ್ಷದತ್ತ ಸೆಳೆಯಲು ಅಂದಿನಿಂದಲೂ ಮಾಕ್ಸ್ವಾದಿಗಳು ದುಡಿಯುವ ವರ್ಗದ ವಿಶಾಲ ಜನಸಂಘಟನೆಗಳಲ್ಲಿ (ಉದಾ : ಟ್ರೇಡ್ ಯೂನಿಯನ್ಗಳು) ಪಾಲ್ಕೊಳ್ಳುತ್ತಲೇ ಇದ್ದಾರೆ. ಈ ನಿಟ್ಟಿನ ಕಾರ್ಯತಂತ್ರದಲ್ಲಿ, ಟ್ರಾಟ್ಸ್ಕಿಯರಷ್ಯನ್ ಕ್ರಾಂತಿಯ ಚರಿತ್ರೆಪುಸ್ತಕದಲ್ಲಿ ಪ್ರಜಾತಾಂತ್ರಿಕ ಕೇಂದ್ರಿಯತೆಯಲ್ಲಿ ನೆಲೆಗೊಂಡಂತಹ ಕ್ರಾಂತಿಕಾರಿ ಪಕ್ಷವಿಲ್ಲದಿದ್ದಲ್ಲಿ, ರಷ್ಯನ್ ಕ್ರಾಂತಿಯ ಜಯ ಗಳಿಸಲು ಹೇಗೆ ಅಸಾಧ್ಯವಾಗುತ್ತಿತ್ತು ಎಂಬುದನ್ನು ವಿವರಿಸಿದ್ದಾರೆ.

ಇಂದು ವಿವಿಧ ದೇಶದ ಸಮಾಜವಾದಿಗಳು, 1917ರ ರಷ್ಯನ್ ಕ್ರಾಂತಿಗೆ ವಿಭಿನ್ನವಾದ ಸಂದರ್ಭಗಳಲ್ಲಿ ಮತ್ತು ಬೇರೆಯೇ ಪರಿಸ್ಥಿತಿಗಳಲ್ಲಿ ಹೋರಾಟಗಳನ್ನು ನಡೆಸುತ್ತಿದ್ದಾರೆ. ಆದರೂ ಇಂದಿಗೂ ಕ್ರಾಂತಿಕಾರಿ ಪಕ್ಷದ ಸ್ವತಂತ್ರ (ಬಂಡವಾಳಶಾಹಿ ವಿಚಾರ ಮತ್ತು ಆಕರ್ಷಣೆಗಳಿಂದ ಮುಕ್ತವಾದ) ಕಾರ್ಯಪ್ರಣಾಳಿಕೆ ಮತ್ತು ಸಂಘಟನಾ ವಿಧಾನಗಳು ಬಲಿಷ್ಠ ಬಂಡವಾಳಿ ವ್ಯವಸ್ಥೆಯ ನಿರ್ಮೂಲನಕ್ಕೆ ಮತ್ತು ಸಮರ್ಥವಾದ ಸಮಾಜವಾದಿ ಕ್ರಾಂತಿಯನ್ನು ನಡೆಸಬೇಕಾದಲ್ಲಿ ಅತ್ಯಾವಶ್ಯಕವಾಗಿ ಬೇಕಾದ ಸಾಧನಗಳು.

ಮಾರ್ಕ್ಸ್ವಾದಿ ಸಿದ್ಧಾಂತವನ್ನು ಮತ್ತಷ್ಟು ತೀಕ್ಷ್ಣಗೊಳಿಸಿ ಸಿರಿವಂತಗೊಳಿಸಿದ ಟ್ರಾಟ್ಸ್ಕಿಯ ಹಲವು ಬರಹಗಳಲ್ಲಿ ಬಹುಮುಖ್ಯವಾದದ್ದು ನಿರಂತರ ಕ್ರಾಂತಿಯ ಸಿದ್ಧಾಂತ (Theory of Permanent Revolution) ಹಾಗೂ ಸೋವಿಯತ್ ದೇಶಗಳಲ್ಲಿ ಅಧಿಕಾರಶಾಹಿ ಪಿಡುಗಿನ ವೃದ್ಧಿ ಮತ್ತು ಸ್ಟಾಲಿನ್‌ವಾದಿ ಪ್ರತಿಕ್ರಾಂತಿಯ ಸಂಚನ್ನು ವಿವರಿಸುವ ಹೊತ್ತಿಗೆ; “ರೆವಲ್ಯೂಷನ್ ಬಿಟ್ರೇಡ್(Revolution Betrayed).
ಇಂದು ಲ್ಯಾಟಿನ್ ಅಮೇರಿಕಾ, ಆಫ್ರಿಕಾ ಮತ್ತು ಏಷಿಯಾ ದೇಶಗಳಲ್ಲಿನ ಹಲವಾರು ಚಳುವಳಿಗಳಿಗೆ, ಮೊದಲಿದ್ದ ಮಾಸ್ಕೋ ಹಾದಿ ಇಲ್ಲವಾಗಿದೆ. 1989-90ರ ಸ್ಟಾಲಿನ್ ವಾದದ ಪತನದ ನಂತರ, ಅದುವರೆವಿಗೂ ಇದ್ದ ವಿರೂಪಿ ಕಾರ್ಮಿಕ ರಾಜ್ಯ ವ್ಯವಸ್ಥೆಗಳ ಮಾದರಿ ಇಲ್ಲವಾಗಿದೆ. ಆದರೆ, ಕಾಮಿಕ ವರ್ಗ ಮತ್ತು ರೈತ ಸಮುದಾಯ, ಸೋವಿಯತ್ ಒಕ್ಕೂಟ ಇಲ್ಲವೆಂಬ ಕಾರಣಕ್ಕಾಗಿ ತಮ್ಮ ಜೀವನೋಪಾಯಗಳಿಗಾಗಿ ಮತ್ತು ಉಳಿವಿಗಾಗಿ ನಡೆಸುತ್ತಿರುವ ದೈನಂದಿನ ಹೋರಾಟಗಳನ್ನು ನಿಲ್ಲಿಸಿಲ್ಲ. ಈಗಾಗಲೇ ಸಾಬೀತಾಗಿರುವಂತೆ ಜಗತ್ತಿನಾದ್ಯಂತ ಅದರಲ್ಲೂ ನವ–ವಸಾಹತುಶಾಹಿ ದೇಶಗಳಲ್ಲಿ ಬಂಡವಾಳಶಾಹಿಯ ವಿರುದ್ಧ ಬೃಹತ್ ಚಳುವಳಿಗಳು ಅನಿವಾರ್ಯ. ಈ ಚಳುವಳಿಗಳ ಮುಂದಾಳತ್ವ ವಹಿಸುತ್ತಿರುವ ಹೋರಾಟಗಾರರಿಗೆ– ಕ್ರಾಂತಿಕಾರಿಗಳಿಗೆ ಟ್ರಾಟ್ಸ್ಕಿಯವರ ವಿಚಾರಧಾರೆ ಮುಖ್ಯವಾಗಿ ನಿರಂತರ ಕ್ರಾಂತಿಯ ಸಿದ್ಧಾಂತ ಅತಿ ಅವಶ್ಯಕ.

20ನೇಯ ಶತಮಾನದ ಆದಿಯಲ್ಲಿ, ರಷ್ಯಾದಲ್ಲಿ ಸಮಾಜವಾದಿ ಕ್ರಾಂತಿ ಸಾಧ್ಯತೆಗಳ ಬಗ್ಗೆ ಟ್ರಾಟ್ಸ್ಕಿ ಅಧ್ಯಯನ ನಡೆಸುತ್ತಿದ್ದಾಗ, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳಲ್ಲಿ ನಡೆದ ವಿದ್ಯಮಾನಗಳಂತೆಯೇ ಬಂಡವಾಳಶಾಹಿ ಕ್ರಾಂತಿ ನಡೆಯಲು ರಷ್ಯಾದ ಶೈಶವಾವಸ್ಥೆಯ ಬಂಡವಾಳಿವರ್ಗ ಅತ್ಯಂತ ಶಕ್ತಿಹೀನವೆಂಬುದನ್ನು ಟ್ರಾಟ್ಸ್ಕಿ ಮನಗಂಡರು. ಇದರಿಂದಾಗಿ ರಷ್ಯದ ಬಂಡವಾಳಿ ವರ್ಗ ತನ್ನ ಬಂಡವಾಳಿ ಪ್ರಜಾತಾಂತ್ರಿಕ ಕ್ರಾಂತಿಯನ್ನು ತಾವೇ ಖುದ್ಧಾಗಿ ನಡೆಸಲಾಗದು ಎಂಬ ಚಾರಿತ್ರಿಕ ಸತ್ಯವನ್ನು ಟ್ರಾಟ್ಸ್ಕಿ ಪ್ರತಿಪಾದಿಸಿದರು.

ಅದಲ್ಲದೆ ದುರ್ಬಲ ರಷ್ಯನ್ ಬಂಡವಾಳಿ ವರ್ಗಕ್ಕೆ ಭೂ ಒಡೆತನದಲ್ಲಿ ತನ್ನದೇ ಆದ ಹಿತಾಸಕ್ತಿ ಇತ್ತು ಮತ್ತು ಜಮೀನ್ದಾರರು ಔದ್ಯೋಗಿಕರಂಗಗಳಲ್ಲೂ ಹಣ ತೊಡಗಿಸಿದ್ದರು. ಜಮೀನ್ದಾರರ ದೌರ್ಜನ್ಯ ಮತ್ತು ಶಕ್ತಿಗೆ ಸವಾಲೆಸೆಯುವ ಯಾವುದೇ ನಿರ್ಣಾಯಕ ಭೂ ಸುಧಾರಣೆಗಳನ್ನು ಅಲ್ಲಿನ ಭೂಮಾಲೀಕರು ಮತ್ತು ಅವರಿಗೆ ಕುಮ್ಮಕ್ಕಾಗಿದ್ದ ಬಂಡವಾಳಶಾಹಿಗಳು ಹಾಗು ಅವರ ರಾಜಕೀಯ ಪ್ರತಿನಿಧಿಗಳು ವಿರೋಧಿಸುವ ಶತಃಸಿದ್ಧ ಪರಿಸ್ಥಿತಿ ಇತ್ತು. (ಇಂದಿನ ಭಾರತದ ರಾಜಕೀಯ ಆರ್ಥಿಕತೆಯು ಇದೇ ರೀತಿಯದ್ದಾಗಿದೆ)

ಈ ರೀತಿಯ ಕಾಲಘಟ್ಟದ ಒತ್ತಡದಲ್ಲಿ ಅದೆಷ್ಟೇ ಅಲ್ಪಸಂಖ್ಯೆಯಲ್ಲಿದ್ದರೂ ಸಹ, ಕಾರ್ಮಿಕ ವರ್ಗವೇ ಮುಂಚೂಣಿ ಶಕ್ತಿಯಾಗಿ ರೈತಾಪಿ–ಶೋಷಿತ ಸಮುದಾಯಗಳ ಸಕ್ರಿಯ ಬೆಂಬಲದೊಂದಿಗೆ ನೂತನ ಸಾಮಾಜಿಕ ವ್ಯವಸ್ಥೆಯೊಂದರ ನಿರ್ಮಾಣಕ್ಕೆ ಹೆಜ್ಜೆಹಾಕಿ, ಬಂಡವಾಳಿಗಳು ತಮ್ಮ ವ್ಯವಸ್ಥೆಯ ಕಾಲದಲ್ಲಿ ಮಾಡಿ ಮುಗಿಸಲು ವಿಫಲರಾಗಿ ಬಾಕಿ ಉಳಿಸಿರುವ ಪ್ರಜಾತಾಂತ್ರಿಕ ಕ್ರಾಂತಿಯ ಕರ್ತವ್ಯಗಳನ್ನೂ ಮಾಡುತ್ತದೆ ಎಂದು ಟ್ರಾಟ್ಸ್ಕಿ ನಿರಂತರ ಕ್ರಾಂತಿಯ ಸಿದ್ಧಾಂತದಲ್ಲಿ ಪ್ರತಿಪಾದಿಸಿದ್ದರು.

ಕಾರ್ಮಿಕ ವರ್ಗ, ಬಂಡವಾಳಿ ಪ್ರಜಾತಾಂತ್ರಿಕ ಕರ್ತವ್ಯಗಳನ್ನು ತಮ್ಮ ಕ್ರಾಂತಿಕಾರಿ ನೇತೃತ್ವದಲ್ಲಿ ಮಾಡಿದ ನಂತರ, ಮತ್ತೊಮ್ಮೆ ರಾಜ್ಯಾಧಿಕಾರವನ್ನು ಬಂಡವಾಳಶಾಹಿಗೆ ವಾಪಸ್ಸು ಕೊಡದು, ಬದಲಾಗಿ ಕ್ರಾಂತಿಕಾರಿ ಪಕ್ಷದ ನೇತೃತ್ವದಲ್ಲಿ ಸಮಾಜವಾದಿ ಕರ್ತವ್ಯಗಳನ್ನು ಕೈಗೆತ್ತಿಕೊಳ್ಳುವತ್ತ ನಿರಂತರವಾಗಿ ಮುನ್ನುಗ್ಗುತ್ತದೆ. ಇದರಿಂದಾಗಿ ಅಂತರ್ರಾಷ್ಟ್ರೀಯವಾಗಿಯೂ ಕ್ರಾಂತಿಕಾರಿ ಚಳುವಳಿಗಳು ಭುಗಿಲೇಳುತ್ತವೆ ಎಂಬುದೇ ಲಿಯಾನ್ ಟ್ರಾಟ್ಸ್ಕಿಯ ನಿರಂತರ ಕ್ರಾಂತಿಯ ವಾದವಾಗಿತ್ತು. 1917ರ ರಷ್ಯನ್ ಕ್ರಾಂತಿ ಟ್ರಾಟ್ಸ್ಕಿಯ ಈ ಸಿದ್ಧಾಂತವನ್ನು ಅಕ್ಷರಶಃ ಸಾಬೀತುಪಡಿಸಿದ ಘಟನೆಯಾಗಿರುವುದು ಸರ್ವವಿದಿತ.

1905ರಲ್ಲೇ ಟ್ರಾಟ್ಸ್ಕಿ ಈ ನಿರಂತರ ಕ್ರಾಂತಿಯ ಸಿದ್ಧಾಂತವನ್ನು ಪ್ರತಿಪಾದಿಸಿದರು, ಈ ರೀತಿಯ ಪರಿದೃಶ್ಯದ ಬಗ್ಗೆ ಲೆನಿನ್ರಿಗೆ ತಮ್ಮದೇ ಅಭಿಪ್ರಾಯಗಳಿದ್ದರೂ (1917) ಕ್ರಾಂತಿಯ ಹೊತ್ತಿಗೆ ನಡೆದ ವಿದ್ಯಮಾನಗಳಿಂದ ಅವರು ಟ್ರಾಟ್ಸ್ಕಿಯ ಮಾತನ್ನು ಒಪ್ಪಿಕೊಂಡರು. ಬೊಲ್ಷೆವಿಕ್ ಪಕ್ಷದ ಉದಯದಲ್ಲಿ ಟ್ರಾಟ್ಸ್ಕಿ ಪಾಲ್ಗೊಳ್ಳದಿದ್ದರೂ, ಕ್ರಾಂತಿಯ ಕಾಲಘಟ್ಟದಲ್ಲಿ ಅವರನ್ನು ಲೆನಿನ್, ಉತ್ಸಾಹದಿಂದ ಪಕ್ಷಕ್ಕೆ ಬರಮಾಡಿಕೊಂಡರು. “ಪಕ್ಷದಿಂದ ಹೊರಗುಳಿದಿದ್ದ ಅತ್ಯುತ್ತಮ ಬೊಲ್ಷೆವಿಕ್ಎಂದು ಹೊಗಳಿದರು.

ಆದರೆ ಲೆನಿನ್ರ ಕಾಲನಂತರ ಅಧಿಕಾರದ ಗದ್ದುಗೆ ಏರಿದ ಸ್ಟಾಲಿನರ ಮತ್ತು ಅವರ ಸಹಚರ ಮಿಲಿಟರಿ ಬಣ, ಟ್ರಾಟ್ಸ್ಕಿಯವರ ತೀಕ್ಷ್ಣ ವಿಮರ್ಶನಾ ದೃಷ್ಟಿಕೋನವನ್ನು ಸಹಿಸಲಿಲ್ಲ. ಇದಕ್ಕೆ ಮುಖ್ಯ ಕಾರಣ ಲೆನಿನ್ ಮತ್ತು ಟ್ರಾಟ್ಸ್ಕಿಗಳ ಬೊಲ್ಷೆವಿಕ್ ಪಕ್ಷವನ್ನು ಅದರ ಅಂತಸ್ಸತ್ವವಾದ ಅಂತರ್ರಾಷ್ಟ್ರೀಯ ಕ್ರಾಂತಿಯಿಂದ ವಿಮುಖಗಳಿಸಬೇಕಾದ ಅನಿವಾರ್ಯತೆ ಸ್ಟಾಲಿನ್ ಅವರದ್ದಾಗಿತ್ತು. ಹೀಗಾಗಿ ʼಒಂದು ದೇಶದಲ್ಲಿ ಸಮಾಜವಾದಮತ್ತು ʼಎರಡು ಹಂತಗಳ ಕ್ರಾಂತಿʼಯೆಂಬ ಖೋಟಾ ಮತ್ತು ಅತ್ಯಂತ ಅಪಾಯಕಾರಿ ಸಿದ್ಧಾಂತಗಳನ್ನು ಸ್ಟಾಲಿನ್ವಾದಿಗಳು ಪ್ರಪಂಚದಾದ್ಯಂತ ಪ್ರಚಾರ ಮಾಡತೊಡಗಿದರು.

ಅದುವರೆವಿಗೆ ವಿಶ್ವಕ್ರಾಂತಿಯ ವಾಹಕವಾಗಿದ್ದ ಮೂರನೆಯ ಅಂತರ್ರಾಷ್ಟ್ರೀಯ ಸಂಘಟನೆಯನ್ನು ದುರುಪಯೋಗಪಡಿಸಿಕೊಂಡು ತಮ್ಮ ಖೋಟಾ ತತ್ವಗಳನ್ನು ಸ್ಟಾಲಿನ್ ಮುಂದಾಗಿಸಿದರು. ತಮ್ಮ ಈ ಚಿತಾವಣೆಗೆ ಲೆನಿನ್ರ ಸಹಯೋಗಿ, ಅತ್ಯಂತ ಪ್ರತಿಭಾವಂತ, ವಾಗ್ಮಿ ಹಾಗು ಬೋಲ್ಷೆವಿಕ್ ಪಕ್ಷವನ್ನು ಹಾಗು ಕೆಂಪುಸೇನೆಯನ್ನು ಸಂಘಟಿಸಿದ ಟ್ರಾಟ್ಸ್ಕಿ ತಡೆಯಾಗುತ್ತಾರೆಂಬ ಅರಿವು ಅವರಿಗಿತ್ತು. ಮೊದಲಿಗೆ ಟ್ರಾಟ್ಸ್ಕಿಯನ್ನು ಪಕ್ಷದಲ್ಲಿ ಮೂಲೆ ಗುಂಪಾಗಿಸಿ, ತದನಂತರ ಅವರಿಗೆ ಲೆನಿನರ ವಿರೋಧಿಯೆಂಬ ಆರೋಪ ಹೊರಿಸಿ 1929ರ ಸಮಯಕ್ಕೆ ಗಡಿ ಪಾರು ಮಾಡಲಾಯಿತು. ಯೂರೋಪಿನ ಯಾವುದೇ ದೇಶವೂ ಕ್ರಾಂತಿಕಾರಿ ಟ್ರಾಟ್ಸ್ಕಿಗೆ ತಮ್ಮ ದೇಶದಲ್ಲಿ ನೆಲೆಯೂರಲು ಅವಕಾಶ ಕೊಡಲಿಲ್ಲ. ಕೊನೆಗೆ, ತಮ್ಮ ರಾಜಕೀಯ ಗೆಳೆಯರ ಸಹಾಯದಿಂದ ಟ್ರಾಟ್ಸ್ಕಿ, ಮೆಕ್ಸಿಕೋದ ಹೊರಗಡೆ ಒಂದು ರೀತಿಯ ದಿಗ್ಭಂಧನದಲ್ಲಿ ವಾಸಿಸಬೇಕಾಯಿತು. (ಆ ಹೊತ್ತಿಗಾಗಲೇ ಟ್ರಾಟ್ಸ್ಕಿ ಪರಿವಾರದ ಮೇಲೆ ಹಲವಾರು ಬಾರಿ ಅಪಾಯಕಾರಿ ಸಶಸ್ತ್ರ ಹಲ್ಲೆಗಳನ್ನು ಸ್ಟಾಲಿನ್ರ ಸಹಚರರು ಮತ್ತು ಏಜೆಂಟರು ನಡೆಸಿದ್ದರು.) ನೆಲೆಯೇ ಇಲ್ಲದ ಶರಣಾರ್ಥಿಯಾಗಿದ್ದರೂ ಟ್ರಾಟ್ಸ್ಕಿ ತನ್ನ ರಾಜಕೀಯ ವಿಮರ್ಶೆ ಮತ್ತು ಸ್ಟಾಲಿನ್‌ವಾದದ ಟೀಕೆಯನ್ನು ನಿಲ್ಲಿಸಲಿಲ್ಲ.

ಈ ಸಂದರ್ಭದಲ್ಲಿ ಅವರು 1936ರಲ್ಲಿ ಬರೆದ (ರೆವಲ್ಯೂಷನ್ ಬಿಟ್ರೇಡ್) ‘ಕ್ರಾಂತಿಗಾದ ದ್ರೋಹಸ್ಟಾಲಿನ್ ಆಡಳಿತದಲ್ಲಿ ನಡೆದ ಅಕ್ರಮಗಳು, ಭ್ರಷ್ಟಾಚಾರ, ಕ್ರಾಂತಿ ಹಾದಿತಪ್ಪಿದ ಬಗೆಯನ್ನು ವೈಜ್ಞಾನಿಕವಾಗಿ ಚಿತ್ರಿಸಿದ್ದಾರೆ. ಟ್ರಾಟ್ಸ್ಕಿ ಬರೆದ ರೆವಲ್ಯೂಷನ್ ಬಿಟ್ರೇಡ್ ಹೊತ್ತಿಗೆಯಲ್ಲಿ, 1917ರ ಸಮಾಜವಾದಿ ಕ್ರಾಂತಿಯ ಪರಿಣಾಮವಾಗಿ, ಸೋವಿಯತ್ ಒಕ್ಕೂಟದಲ್ಲಿ ಲಾಭಕೋರ ಬಂಡವಾಳಶಾಹಿ ನಿರ್ಮೂಲನೆ, ಕಾರ್ಮಿಕ ರಾಜ್ಯ ಸ್ಥಾಪನೆ ಮತ್ತು ವ್ಯವಸ್ಥಿತ ಆರ್ಥಿಕತೆಯಿಂದಾಗಿ ನಡೆದ ಅಸಾಧಾರಣ ಅಭಿವೃದ್ಧಿಯನ್ನು ವಿವರಿಸಿದ್ದಾರೆ.

ಆದರೆ ಆ ಕಾರ್ಮಿಕ ರಾಜ್ಯ ಹೇಗೆ ಸ್ಟಾಲಿನ್ರ ಕಾಲದಲ್ಲಿ ವಿಕೃತಗೊಂಡಿತು ಮತ್ತು ಎಲ್ಲ ಜನವಿರೋಧವನ್ನು ಸ್ಟಾಲಿನ್ವಾದಿ ಯಂತ್ರ ಹೇಗೆ ಹೊಸಕಿತು ಎಂಬುದನ್ನೂ ವಿವರಿಸಿದ್ದಾರೆ. ಸ್ಟಾಲಿನ್, ಸೋವಿಯತ್ ಒಕ್ಕೂಟದಲ್ಲಿದ್ದ ಎಲ್ಲಾ ಪ್ರಜಾತಂತ್ರವನ್ನು ನಿರ್ನಾಮ ಮಾಡಿ, ತನ್ನ ಸುತ್ತ ಅಧಿಕಾರವನ್ನು ಕೇಂದ್ರಿಕರಿಸಿಕೊಂಡು, ಕಾರ್ಮಿಕವರ್ಗ, ಹಾಗೂ ರೈತಾಪಿಗಳಿಗೆ, ಸಮಾಜವನ್ನು ಮುನ್ನೆಡಸುವಲ್ಲಿ ಇದ್ದ ಎಲ್ಲಾ ಹಕ್ಕುಗಳನ್ನು ಕಿತ್ತುಕೊಂಡ ಬಗೆಯನ್ನು ಟ್ರಾಟ್ಸ್ಕಿ ತಮ್ಮ ಈ ಬರಹದಲ್ಲಿ ವಿವರಿಸಿದ್ದಾರೆ.

ಸ್ಟಾಲಿನರ ಆಡಳಿತ ಸಂದರ್ಭದಲ್ಲಿ ಸೋವಿಯತ್ ಒಕ್ಕೂಟದಲ್ಲಿ ಬಂಡವಾಳಶಾಹಿ ವ್ಯವಸ್ಥೆಯನ್ನು ಬುಡಮೇಲು ಮಾಡಲಾಗಿತ್ತಾದರೂ, ಅದು ಒಂದು ಆರೋಗ್ಯಕರ, ಸಾಮರಸ್ಯ ಕಾರ್ಮಿಕ ರಾಜ್ಯವಾಗಿರಲಿಲ್ಲ, ಬದಲಾಗಿ ಒಂದು ವಿಕೃತ ಅಥವಾ ವಿರೂಪಗೊಂಡ ಕಾರ್ಮಿಕ ರಾಜ್ಯವಾಗಿತ್ತು ಎಂಬುದು ಲೆನಿನ್ರ ಸಹಯೋಗಿ ಟ್ರಾಟ್ಸ್ಕಿಯ ಅಭಿಪ್ರಾಯ. ಕಾರ್ಮಿಕ ರಾಜ್ಯದ ಸ್ಥಾಪನೆ, ಕಾರ್ಮಿಕ ವರ್ಗ ಅದರ ಎಲ್ಲಾ ಹಂತಗಳಲ್ಲೂ ನಿರ್ಧಾರಗಳಲ್ಲಿ ಪಾಲ್ಗೊಂಡು ಒಂದು ಜನತಾಂತ್ರಿಕ ಹತೋಟಿ ಸಾಧಿಸದಿದ್ದಲ್ಲಿ ಒಂದು ನೈಜ ಆರೋಗ್ಯವಂತ ಕಾರ್ಮಿಕ ರಾಜ್ಯದ ಸ್ಥಾಪನೆ ಸಾಧ್ಯವಾಗದು ಎಂಬುದು ಟ್ರಾಟ್ಸ್ಕಿ ಮತ್ತು ಲೆನಿನ್ರ ಖಚಿತ ಅಭಿಪ್ರಾಯವಾಗಿತ್ತು.

ಸೋವಿಯತ್ ಒಕ್ಕೂಟದಲ್ಲಿ ಒಂದು ನೂತನ ರಾಜಕೀಯ ಕ್ರಾಂತಿ ನಡೆಸಬೇಕೆಂಬ ಕರೆಯನ್ನಿತ್ತಿದ್ದ ಟ್ರಾಟ್ಸ್ಕಿಗೆ ಆ ಕ್ರಾಂತಿ ಅಲ್ಲಿದ್ದ ಅಧಿಕಾರಶಾಹಿಯನ್ನು ಕಿತ್ತೊಗೆದು ನೈಜ ಕಾರ್ಮಿಕ ಹತೋಟಿ ಮತ್ತು ಕಾರ್ಮಿಕ ಪ್ರಜಾತಂತ್ರವನ್ನು ಸ್ಥಾಪಿಸುವ ರಾಜಕೀಯ ಕ್ರಾಂತಿಯಾಗಬೇಕೆಂಬ ಕನಸು ಅವರದ್ದಾಗಿತ್ತು. ಅವರ ಈ ವಿಮರ್ಶೆ, ತದನಂತರ ಸ್ಥಾಪನೆಯಾದ ಪೂರ್ವ ಯುರೋಪ್, ಚೈನಾ ಮತ್ತು ಕ್ಯೂಬಾ ಆಡಳಿತಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ತದನಂತರದ ಭವಿಷ್ಯದಲ್ಲಿ ಮಾರ್ಕ್ಸ್ವಾದಿಗಳಿಗೆ ಸಹಾಯ ಮಾಡಿತು. ಈ ದೇಶಗಳಲ್ಲೂ ಸಹ ಬಂಡವಾಳಶಾಹಿ ಆರ್ಥಿಕ ಸಂಬಂಧಗಳು ನಿರ್ಮೂಲನಗೊಂಡರೂ, ಅಲ್ಲಿ ಸ್ಥಾಪನೆ ಗೊಂಡಿದ್ದು, ವಿರೂಪ ಹೊಂದಿದ ವಿಕೃತ ಕಾರ್ಮಿಕ ರಾಜ್ಯಗಳೇ, ಈ ದೇಶಗಳಲ್ಲಿ ನಡೆದ ಕ್ರಾಂತಿಗಳು ಬಂಡವಾಳಶಾಹಿ ಮತ್ತು ಜಮೀನ್ದಾರಿ ಪದ್ಧತಿಗಳನ್ನು ನಾಶಮಾಡಿದವು, ಆದರೆ ಒಂದು ಆರೋಗ್ಯಕರ ಕಾರ್ಮಿಕ ರಾಜ್ಯಕ್ಕೆ ಅವಶ್ಯಕವಾಗಿ ಬೇಕಾದ ಕಾರ್ಮಿಕ ಪ್ರಜಾತಂತ್ರದಆಮ್ಲಜನಕಈ ದೇಶಗಳಲ್ಲಿ ಇರಲಿಲ್ಲ ಎಂಬುದನ್ನು ನಾವು ಮನಗಾಣುವುದು ಅತಿಅವಶ್ಯಕ.

ಮಾರ್ಕ್ಸ್ವಾದದ ದಿಕ್ಸೂಚಿಯನ್ನು ಪಕ್ಕಕ್ಕಿಟ್ಟವರಿಗೆ, ಕ್ರಾಂತಿಯ ಹಾದಿ ಕಾಣದು.

ಕಳೆದ ಒಂದು ದಶಕದಲ್ಲೇ, ಹಲವಾರು ಡೋಲಾಯಮಾನ ಘಟನೆಗಳು ವಿಶ್ವದ ರಾಜಕೀಯ ನಕ್ಷೆಯನ್ನೇ ಏರುಪೇರಾಗಿಸಿದೆ. ಇಂದು ಭಾರತದ ಜನತೆ ಮೋದಿ ರಾಜ್ಯದಲ್ಲಿ ಎದುರಿಸುತ್ತಿರುವ ಸಂಕೀರ್ಣ ಪರಿಸ್ಥಿತಿಯಲ್ಲೇ, ಜಾಗತಿಕವಾಗಿ ಬಂಡವಾಳಶಾಹಿ ವ್ಯವಸ್ಥೆ ತೀವ್ರತರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಮೇರಿಕದ ಟ್ರಂಪ್, ಚೈನಾದ ಕ್ಸೀ, ರಷ್ಯದ ಪೂಟಿನ್, ಶ್ರೀಲಂಕಾದ ರಾಜಪಕ್ಷೆ–ಗೊಟಾಬಯಾ ಸೋದರರು, ಬ್ರೆಜಿಲ್ ದೇಶದ ಬೊಲ್ಸನಾರೊ ಮತ್ತು ಇಲ್ಲಿನ ಜನ ವಿರೋಧಿ ಆಡಳಿತವನ್ನು ನಡೆಸುತ್ತಿರುವ ಆರ್. ಎಸ್.ಎಸ್. ನೇತೃತ್ವದ ಬಿ.ಜೆ.ಪಿ.-ಮೋದಿ ಮುಂತಾದ ಎಲ್ಲಾ ಸರ್ಕಾರಗಳು ವಿಶ್ವ ಬಂಡವಾಳಶಾಹಿಯ ಬಿಕ್ಕಟ್ಟನ್ನು ಜನಸಾಮಾನ್ಯರ ತಲೆಯ ಮೇಲೆ ಹೇರುತ್ತಿವೆ. ಇದುವರೆವಿಗೆ ಹೋರಾಟಗಳಿಂದ ಗಳಿಸಲಾಗಿದ್ದ ಎಲ್ಲಾ ಸುಧಾರಣೆ–ಸವಲತ್ತುಗಳ ಮೇಲೆ ಅವಿರತವಾಗಿ ಧಾಳಿ ನಡೆಸಲಾಗುತ್ತಿದೆ.

ಭಾರತದ ಮಟ್ಟಿಗೆ ವಿಮರ್ಶೆ ಮಾಡುವುದಾದಲ್ಲಿ, ಒಂದೆಡೆ ಬಂಡವಾಳಿ ವ್ಯವಸ್ಥೆಯ ಬಿಕ್ಕಟ್ಟು ಅದರಿಂದಾಗಿ ಕಾರ್ಮಿಕ– ರೈತ, ಸಾಮಾನ್ಯರ ಮೇಲೆ ಆರ್ಥಿಕ ಧಾಳಿ ನಿರಂತರವಾಗಿ ನಡೆದಿದ್ದಾಗ್ಯೂ ಈ ದೇಶದ ಕಮ್ಯೂನಿಸ್ಟ್ ಪಕ್ಷಗಳು ಯಾವುದೇ ಮೂಲಭೂತ ಬದಲಾವಣೆ ಸಾಧ್ಯವಾಗುವಂತಹ ಹೋರಾಟದ ಕಾರ್ಯಕ್ರಮಗಳನ್ನು ರೂಪಿಸದಿರುವುದು, ಮತ್ತು ಕಾರ್ಮಿಕ–ಶೋಷಿತರನ್ನು ಬಂಡವಾಳಿ ವ್ಯವಸ್ಥೆಯ ವಿರುದ್ಧ ಸ್ವತಂತ್ರ ಶಕ್ತಿಯಾಗಿ ಸಂಘಟಿಸುವಲ್ಲಿ ವಿಫಲರಾಗಿರುವುದು ನಿಚ್ಚಳವಾಗಿ ಕಾಣುತ್ತದೆ .ಈ ರೀತಿಯ ಸಂಕೀರ್ಣ ಪರಿಸ್ಥಿತಿಯಲ್ಲಿ ನೈಜ ಮತ್ತು ಮಾರ್ಕ್ಸ್ವಾದʼದ ಟ್ರಾಟ್ಸ್ಕಿ ಮತ್ತು ಲೆನಿನರ ವಿಚಾರಗಳೇ ಅತ್ಯಂತ ನಿರ್ಣಾಯಕ ದಾರಿಯನ್ನು ಹುಡುಕುವಲ್ಲಿ ಕ್ರಾಂತಿಕಾರಿ ಹೋರಾಟಗಾರರಿಗೆ ದಾರಿದೀವಿಗೆಯಾಗಲಿದೆ.

 New Socialist Alternative  (ನವ ಸಮಾಜವಾದಿ ಪರ್ಯಾಯ) ಮತ್ತು ಕಮಿಟಿ ಫಾರ್ವರ್ಕ್ರ್ಸ್ ಇಂಟರ್ನ್ಯಾಷನಲ್ (CWI) ಮಾರ್ಕ್ಸ್ವಾದದ ಸಿದ್ಧಾಂತದಲ್ಲಿ ಅಚಲವಾದ ವಿಶ್ವಾಸ ಇರಿಸಿ ಟ್ರಾಟ್ಸ್ಕಿವಾದದ ವಿಮರ್ಶನ ರೀತಿಯನ್ನು ತನ್ನದಾಗಿಸಿಕೊಂಡಿರುವ ಸಂಘಟನೆಗಳು, CWIʼನ ಅಂತರ್ರಾಷ್ಟ್ರೀಯದ ನೇತೃತ್ವದಲ್ಲಿ 34 ದೇಶಗಳಲ್ಲಿ, ಪ್ರಪಂಚದಾದ್ಯಂತ ಸಾವಿರಾರು ಮಾರ್ಕ್ಸ್ವಾದಿ–ಟ್ರಾಟ್ಸ್ಕಿವಾದಿಗಳು, ಸರಿಯಾದ ಕ್ರಾಂತಿಕಾರಿ ಚಿಂತನೆ ಮತ್ತು ಸಂಘಟನೆಗಳನ್ನು ಬೆಳೆಸಲು ನಡೆಸುತ್ತಿರುವ ಅವಿರತ ಹೋರಾಟ, ಶ್ರಮಗಳೇ ಟ್ರಾಟ್ಸ್ಕಿ ಮತ್ತು ಅವರ ವಿಚಾರಗಳಿಗೆ ಸಿಕ್ಕ ನಿಜವಾದ ಮುನ್ನಡೆಯಾಗಿದೆ.

ಮಾರ್ಕ್ಸ್ವಾದಿಗಳು ವ್ಯಕ್ತಿಪೂಜೆಯನ್ನು ಮಾಡುವುದಿಲ್ಲವಾದರೂ, ಲಿಯಾನ್ ಟ್ರಾಟ್ಸ್ಕಿ ಒಬ್ಬ ಸಾಹಸಿ ಹಾಗೂ ಧೈರ್ಯಶಾಲಿ ಕ್ರಾಂತಿಕಾರಿ, ಒಬ್ಬ ಮಹಾನ್ ಕ್ರಾಂತಿಕಾರಿ ತತ್ವಜ್ಞ, ಮತ್ತು ತನ್ನ ಕೊನೆಯುಸಿರಿನವರೆವಿಗೂ ಸಮಾಜವಾದಿ ಕ್ರಾಂತಿಯ ರಕ್ಷಣೆಗೆ ತನ್ನನ್ನು ತೊಡಗಿಸಿಕೊಂಡವನು ಎಂಬುದು ನಿಸ್ಸಂದೇಹ. ಈ ಕಾರಣಕ್ಕಾಗಿಯೇ ಇಂದು ನಾವು ಮತ್ತು ಮುಂದಿನ ಜನಾಂಗದ ಮಾರ್ಕ್ಸ್ವಾದಿಗಳು ಲಿಯಾನ್ ಟ್ರಾಟ್ಸ್ಕಿಯನ್ನು ಒಬ್ಬ ಕಾರ್ಮಿಕ ವರ್ಗದ ಹೀರೋ ಎಂದು ತಿಳಿಯುತ್ತೇವೆ. ಅದಕ್ಕಾಗಿಯೇ ನಮ್ಮ ರಾಜಕೀಯ ಶತ್ರುಗಳು ನಮ್ಮನ್ನು ಟ್ರಾಟ್ಸ್ಕಿವಾದಿಗಳು ಎಂದು ಜರೆದಾಗ ನಮಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ.

ಟ್ರಾಟ್ಸ್ಕಿಯ ಕನಸಾದ ಅಂತರ್ರಾಷ್ಟ್ರೀಯ ಸಮಾಜವಾದಿ ಕ್ರಾಂತಿಯನ್ನು ನನಸಾಗಿಸಿ, ಅವರ ವಾದ ವಿಚಾರಗಳು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುವ ಜವಾಬ್ದಾರಿ ನಮ್ಮದಾಗಿದೆ.

ಜಗದೀಶ್ ಜಿ ಚಂದ್ರ.