ಕರ್ನಾಟಕದ ಪ್ರಗತಿಪರತೆ ವಿಫಲವಾದದ್ದೆಲ್ಲಿ?
ಕಳೆದ ತಿಂಗಳು ಹೊರಬಿದ್ದ 2019ರ ಲೋಕಸಭಾ ಚುನಾವಣಾ ಫಲಿತಾಂಶ ಇಂದಿಗೂ ಚರ್ಚೆಯಲ್ಲಿದೆ. ದೇಶದ ಇತರೆ ರಾಜ್ಯಗಳಲ್ಲಿ ಕಂಡು ಬಂದ ಫಲಿತಾಂಶಗಳಿಗಿಂತ ಕರ್ನಾಟಕವೂ ಸೇರಿದಂತೆ ದಕ್ಷಿಣ ರಾಜ್ಯಗಳ ಫಲಿತಾಂಶಗಳು, ಬಹುತೇಕ ರಾಜಕೀಯ ಪಂಡಿತರನ್ನು ಅಚ್ಚರಿಗೊಳಿಸಿದ್ದು ಸುಳ್ಳಲ್ಲ.
ಕಳೆದ ಐದು ವರುಷಗಳಲ್ಲಿ ಕೇಂದ್ರದ ಮೋದಿ ಸರ್ಕಾರದ ಆರ್ಥಿಕ ನೀತಿಗಳು ಸಂಪೂರ್ಣ ವಿಫಲಗೊಂಡು ಬಿಜೆಪಿಯ ವರಿಷ್ಠರುಗಳೇ ವಿಚಲಿತರಾದಂತೆ ಕಾಣುತ್ತಿದ್ದರು. ಕೊನೆಯ ಅಸ್ತ್ರವಾಗಿ ಅವರ ಬತ್ತಳಿಕೆಯಲ್ಲಿ ಉಳಿದದ್ದು ಪಾಕಿಸ್ತಾನದ ಮೇಲೆ ಸಣ್ಣ ಯುದ್ದ ಸಾರುವ ತಂತ್ರ. ಬಿಜೆಪಿಯ ಅಂದಿನ ಪ್ರಧಾನಿ ವಾಜಪೇಯಿಯು ಸಹ ಇದೇ ತಂತ್ರದ ಮೊರೆ ಹೋಗಿದ್ದು ಸರ್ವವಿದಿತ. 2004ರ ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದ್ದರೂ, ನಾಲ್ಕು ವರುಷಗಳ ಮೊದಲೇ ನಡೆಸಿದ ‘ಕಾರ್ಗಿಲ್ ಯುದ್ದ’ದ ದೂರಾಲೋಚನೆ ಕಿಂಚಿತ್ತು ವಾಜಪೇಯಿಯ ಕೈ ಹಿಡಿಯಲ್ಲಿಲ್ಲ ಎಂಬುದು ಇತಿಹಾಸ.
ಯುದ್ಧೋನ್ಮಾದದ ಮೊರೆಹೊಕ್ಕ ಬಿಜೆಪಿ ಜನಹಿತವನ್ನು ಕಾಯಬಲ್ಲದೇ?
ಆದರೆ ಬಿಜೆಪಿಯ ಮೋದಿ, ಈ ಯುದ್ಧದ ದುರಾಲೋಚನೆ ನಡೆಸಿದ್ದು ಚುನಾವಣೆಗೆ ಕೇವಲ ಒಂದು ತಿಂಗಳ ಮುಂಚೆ, ಇಂಡಿಯಾ-ಪಾಕಿಸ್ತಾನಗಳ ನಡುವೆ ಇರುವ ದಶಕಗಳ ವೈಮನಸ್ಯ ಮತ್ತು ಕಲಹದ ಲಾಭಪಡೆದು “ಸಣ್ಣ ಯುದ್ಧ”ವೊಂದರ ವಾತಾವರಣ ಸೃಷ್ಠಿ ಮಾಡಿ, ರಾಷ್ಟವಾದದ ಹೆಸರಿನಲ್ಲಿ ಜನರನ್ನು ಮರುಳು ಮಾಡುವ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಈ ಕುತಂತ್ರದ ಸ್ಪಷ್ಟ ಉದ್ದೇಶವಾಗಿತ್ತು. ಕಳೆದ ಫೆಬ್ರುವರಿಯಲ್ಲಿ ಭದ್ರತಾ ವೈಫಲ್ಯದಿಂದಾಗಿ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ಧಾಳಿಯನ್ನೇ ನೆಪವಾಗಿಟ್ಟುಕೊಂಡು, ತದನಂತರ ನಾಟಕೀಯ ರೀತಿಯಲ್ಲೇ ನಡೆಸಿದ ಬಾಲಕೋಟ್ ವಾಯು ನೆಲೆಯ ಮೇಲೆ ನಡೆದ ವೈಮಾನಿಕ ಧಾಳಿ, ಒಂದು ಷಡ್ಯಂತ್ರವೆಂಬುದು ಇಂದು ಬಹಿರಂಗವಾಗಿದೆ.
ಬಾಲಕೋಟ್ ವಾಯುಧಾಳಿಯ ಮಾರನೆ ದಿನವೇ, ಬಿಜೆಪಿಯ ಯಡಿಯೂರಪ್ಪ, ಕರ್ನಾಟಕದಲ್ಲಿ 22 ಸೀಟುಗಳು ಗ್ಯಾರಂಟಿ’ ಎಂದು ಉದ್ಗಾರ ತೆಗೆದದ್ದು, ಸಂಘ ಪರಿವಾರ ಯುದ್ಧೋನ್ಮಾದದ ಹುನ್ನಾರವನ್ನು ಪೂರ್ವಯೋಜಿತವಾಗಿ ಸಿದ್ಧಗೊಳಿಸಿತ್ತೆಂಬುದು, ಅಧಿಕಾರ ಹಿಡಿಯಲು ಹಿಂದುತ್ವವಾದಿ ಬಿಜೆಪಿ ಎಂಥಾ ಅಪಾಯಕಾರಿ ಕೆಲಸಕ್ಕೂ ಸಿದ್ಧವೆಂಬುದು ಈಗ ಸಾಬೀತಾಗಿದೆ.
2006ರಲ್ಲಿ ಜೆ.ಡಿ.ಎಸ್ ನ ಕುಮಾರಸ್ವಾಮಿಯ ಅಧಿಕಾರದಾಹದ ನಡೆಯ ಪರಿಣಾಮವಾಗಿ, ಬಿಜೆಪಿಗೆ ಹಿಂಬಾಗಿಲಿನಿಂದ ಜನಮನ್ನಣೆ ಲಭಿಸಿ ಜೆಡಿಎಸ್-ಬಿಜೆಪಿ ಸರ್ಕಾರ ರಚಿಸಿದ್ದು ಮಾತ್ರವಲ್ಲದೇ ದಕ್ಷಿಣ ಭಾರತದಲ್ಲಿ ಬಿಜೆಪಿ/ಸಂಘಪರಿವಾರ ಭದ್ರಬುನಾದಿ ಹಾಕಲು ಅವಕಾಶವಾಯಿತು. ಈ ರಾಜಕೀಯ ದುರಂತದ ಮುಂದುವರಿದ ಕಥಾಭಾಗವನ್ನು ಇಂದು ಕರ್ನಾಟಕ ಕಾಣುತ್ತಿದೆ.
ದಕ್ಷಿಣದ ಇತರೆ ರಾಜ್ಯಗಳಲ್ಲಿ ಇಂದಿಗೂ ತಳವೂರಲು ಹೆಣಗುತ್ತಿರುವ ಬಿಜೆಪಿ/ಆರ್.ಎಸ್.ಎಸ್ ನಂತಹ ಕೋಮುಶಕ್ತಿಗಳಿಗೆ ಕರ್ನಾಟಕ ಯಾವುದೇ ವಿರೋಧವಿಲ್ಲದೇ ಸುಲಭವಾಗಿ ತುತ್ತಾಗಿದ್ದು ವಿಷಾದನೀಯ. ವೈದಿಕ ಚಿಂತನೆಗಳ ವಿರುದ್ಧ ಬಂಡೆದ್ದು ಉಗಮವಾದ ಶರಣ ಚಳುವಳಿ ಮತ್ತೇ ಅದೇ ವೈದಿಕ ಚಿಂತನೆಗಳಿಗೆ ಶರಣಾಗಿದ್ದು ಕರ್ನಾಟಕ ಧರ್ಮನಿರಪೇಕ್ಷ ಇತಿಹಾಸದ ಮೇಲೊಂದು ಕಪ್ಪುಚುಕ್ಕೆ.
ಅಸ್ಮಿತೆಯ ಗೊಂದಲದಲ್ಲಿದ್ದ ಲಿಂಗಾಯತರು, ಮತ್ತೆ ಶೋಷಣೆಯ ಪ್ರತೀಕವಾಗಿರುವ ಹಿಂದುತ್ವದ ಗೋಸುಂಬೆತನಕ್ಕೆ ಮಾರುಹೋಗಿದ್ದು ಕರ್ನಾಟಕದಲ್ಲಿ ಬಿಜೆಪಿ/ಸಂಘಪರಿವಾರ ಬೆಳೆಯಲು ಕಾರಣವಾಯಿತೇ? ಕೋಮುಶಕ್ತಿಗಳ ಬೆಳವಣಿಗೆಗೆ ಲಿಂಗಾಯತರಂತೆಯೇ ಜಾತಿ ವ್ಯವಸ್ಥೆಯ ಶಿಕಾರಿಗಳಾದ ಒಕ್ಕಲಿಗ, ಕುರುಬ ಮತ್ತು ಇನ್ನಿತರ ದಮನಿತ ಪಂಗಡಗಳ “ನಾಯಕರ” ಸಂಕುಚಿತ ದೃಷ್ಟಿಕೋನವೂ ಸಹಾಯಕವಾಗಿರುವುದನ್ನು ಅಲ್ಲಗಳೆಯಲಾಗದು. ಜಾತಿಪದ್ದತಿ ಇಬ್ಬದಿಯಲ್ಲೂ ಮೊನಚಾಗಿರುವ ಚಾಕುವಿನಂತೆ, ಚುನಾವಣಾ ರಾಜಕೀಯದಲ್ಲಿ ಅದರ ಉಪಯುಕ್ತತೆಯಷ್ಟೇ ಅದು ಅಪಾಯವೂ ಹೌದು.
ಹಿಂದುತ್ವದ ಘೋಷಣೆಯಾದ ‘ನಾವೆಲ್ಲಾ ಹಿಂದೂ – ನಾವೆಲ್ಲಾ ಒಂದು’ ಎಂಬುದು ಜಾತಿ ಪದ್ಧತಿಯ ಅತ್ಯಾಚಾರ, ಅಸಮಾನತೆ ಮತ್ತು ಕ್ರೂರತ್ವವನ್ನು ಗೌಣವಾಗಿಸಿ ಜಾತಿ ಶ್ರೇಣೀಕೃತ ಪದ್ಧತಿಗೆ ‘ಸಂಪ್ರದಾಯದ’ ಮೆರುಗು ಹಚ್ಚಿ ಉಳ್ಳವರ ಸಂಚಾದ ಹಿಂದೂ ಸಾರ್ವಭೌಮತ್ವದ ಕಪೋಲ ಕಲ್ಪನೆಯ ಮೂಲಕ ವಂಚಿತ ಸಮುದಾಯಗಳನ್ನು ಭಾವನಾತ್ಮಕವಾಗಿ ಒಂದೆಡೆ ಕಟ್ಟಿಹಾಕುವ ಹುನ್ನಾರವಾಗಿದೆ.
2006ರಲ್ಲಿ ಅಧಿಕಾರ ಸಿಕ್ಕ ಕೂಡಲೇ ಯಡಿಯೂರಪ್ಪ, ಸರ್ಕಾರದ ಆಯಕಟ್ಟಿನ ಸ್ಥಳಗಳಲ್ಲಿ ಸಂಘಪರಿವಾರದ ಅಣತಿಯಂತೆ ನಡೆಯುವ ಅಧಿಕಾರಿ ವರ್ಗವನ್ನು ನೇಮಕ ಮಾಡಿದ್ದು ಇಂದು ಬಿಜೆಪಿಗೆ ಸಹಕಾರಿಯಾಗುತ್ತಿದೆ. ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ವಿಚಾರವಾದಿಗಳ ಹತ್ಯೆಗಳು, ಸುಳ್ಳುಸುದ್ದಿ, ಅಪಪ್ರಚಾರಗಳು, ಎಗ್ಗಿಲ್ಲದೆ ಸಾಗಿದ್ದರೂ ಅದನ್ನು ತಡೆಯಲು ಸಾಧ್ಯವಾಗದ ರಾಜಕೀಯ ಅಸಹಾಯಕ ಪರಿಸ್ಥಿತಿ ನಿಜಕ್ಕೂ ಆತಂಕಕಾರಿ.
ತನ್ನ ವಿಚಾರಗಳಿಗೆ ವಿರುದ್ಧವಾಗಿರುವವರನ್ನು ಗುರಿಯಾಗಿಸಿ ನಿರಂತರ ಧಾಳಿ ನಡೆಸುವುದರಲ್ಲಿ ಸಂಘಪರಿವಾರ ಕುಖ್ಯಾತಿಗಳಿಸಿದೆ. ದೇಶದ ಇತರೆ ಭಾಗಗಳಲ್ಲಿ ಸಂಘಿಗಳು ನಡೆಸಿದ ಕೋಮು ಅಜೆಂಡಾ ಕರ್ನಾಟಕದಲ್ಲಿ ನಿರಂತರವಾಗಿ ವೇಗದಿಂದ ಸಾಗಿದೆ. ತಮಿಳುನಾಡಿನಲ್ಲಿ ತನ್ನ ವಿಚಾರಗಳಿಗೆ ಇಂದಿಗೂ ಬೆಂಕಿಯುಂಡೆಯಾಗಿರುವ ತಂದೈ ಪೆರಿಯಾರ್ ವಿಚಾರಧಾರೆ ವಿರುದ್ಧ ನಿರಂತರ ಅವಹೇಳನದಲ್ಲಿ ತೊಡಗಿರುವ ಆರ್.ಎಸ್.ಎಸ್ ನ ಅನುಯಾಯಿಗಳು ಕರ್ನಾಟಕದಲ್ಲೂ ಸಹ ಜಾತ್ಯಾತೀತ ಮನೋಭಾವಕ್ಕೆ ಒತ್ತು ನೀಡಿದ, ವಿಶ್ವಮಾನವ ಸಂದೇಶ ಸಾರಿದ ಕುವೆಂಪುರವರ ಬಗ್ಗೆ ಅಪಪ್ರಚಾರ ಮಾಡುತ್ತಾ ತನ್ನ ಚಾಳಿಯನ್ನು ಮುಂದುವರಿಸಿದೆ.
ಜಾತಿ ವ್ಯವಸ್ಥೆಯನ್ನು ಅಪ್ಪಿಕೊಂಡವರು ಹಿಂದುತ್ವವನ್ನು ಹಿಮ್ಮೆಟ್ಟಿಯಾರೇ?
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ, ಬಿಜೆಪಿ 25ರಲ್ಲಿ ಜಯ ಗೊಳಿಸಿದ್ದು ಅಚ್ಚರಿಯೇನಲ್ಲ. ಹಿಂದೂ ಧರ್ಮದ ಜಾತಿ ವ್ಯವಸ್ಥೆಯನ್ನು ಅಪ್ಪಿಕೊಂಡು ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತೇವೆಂಬುದು ಹಾಸ್ಯಾಸ್ಪದ. ಕರ್ನಾಟಕದಲ್ಲಿರುವ ಮೈತಿ ಸರ್ಕಾರದ ಜೆಡಿಎಸ್- ಕಾಂಗ್ರೇಸ್ ಉಭಯ ಪಕ್ಷಗಳೂ ಕೋಮುವಾದಿ ಬಿಜೆಪಿಗೆ ಸವಾಲಾಗಲೇ ಇಲ್ಲ. ಕಾಂಗ್ರೇಸ್ ಈ ಬಾರಿ ಮೃದು ಹಿಂದುತ್ವದ ಪೊರೆ ಕಳಚಿ, ಮತ್ತಷ್ಟು ಮುಂದುವರೆದು ಅರೆ-ಕೇಸರಿ ರಂಗಿನ ಪ್ರಚಾರ ಮಾಡಿದರೂ ನಿಜ-ಕೇಸರಿ ಪಡೆಯ ಧಾರ್ಷ್ಟ್ಯತನದ ಮುಂದೆ ಸೋಲಪ್ಪಿತು. ಹಿಂದೂ ಜಾತಿ ಪದ್ಧತಿಯ ಬೆಂಕಿ ತನ್ನನ್ನು ಒಂದಲ್ಲಾ ಒಂದು ದಿನ ಸುಡುತ್ತದೆ ಎಂಬ ಪರಿವೆಯೇ ಇಲ್ಲದೆ, ಸ್ವಜಾತಿ ಪಕ್ಷಪಾತ ಮತ್ತು ಇನ್ನಿತರ ದಮನಿತ ಜಾತಿಗಳ ಶೋಷಣೆಯನ್ನು ವ್ಯವಸ್ಥಿತವಾಗಿ ಮುಂದುವರಿಸಿರುವ ಅತಿಜಾತಿ ಪಕ್ಷ ಜೆಡಿಎಸ್ , ಬಿಜೆಪಿಯ ಹಿಂದುತ್ವಕ್ಕೆ ಪ್ರತಿಸ್ಪರ್ಧಿಯಾಗಲು ಅರ್ಹತೆಯನ್ನೇ ಕಳೆದುಕೊಂಡಿತ್ತು.. ಜಾತಿ ಆಧಾರಿತ ಜೆಡಿಎಸ್ ಗೆ ಸಂಘಪರಿವಾರ ತೂರಿದ “ಎಲ್ಲಿದ್ದೀಯಪ್ಪಾ” ಎಂಬ ಜಾತಿ ವ್ಯಂಗ್ಯದ ಒಳ ಅರ್ಥವನ್ನು ಗ್ರಹಿಸಿಲು ಅಸಾಧ್ಯವಾಯಿತು.
ಕಳೆದ 30 ವರುಷಗಳಿಂದ ರಾಜ್ಯವನ್ನು ಕೇಸರೀಕರಣಗೊಳಿಸುವಲ್ಲಿ ಆರ್.ಆರ್.ಎಸ್. ಪಡೆ ನಿರತವಾಗಿದೆ. ಇಂದು ರಾಜ್ಯದಲ್ಲಿ ಬಿಜೆಪಿ ಭಾರಿ ಮೊತ್ತದ ಮೋಟ್ ಗಳಿಸುವಲ್ಲಿ “ಸಂಘ”ದ ಪಾತ್ರವನ್ನು ಅಲ್ಲಗಳೆಯಲಾಗದು. ದಕ್ಷಿಣ ಭಾರತದ ಹೆಬ್ಬಾಗಿಲೆಂದು ಕರ್ನಾಟಕವನ್ನು ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿ ಮಾಡಿ, ಶಾಂತಿ, ಸೌರ್ಹಾದತೆ, ಸಹಬಾಳ್ವೆಗೆ ಹೆಸರಾಗಿದ್ದ ಚಿಕ್ಕಮಗಳೂರಿನ ಬಾಬಾಬುಡನ್ ಗಿರಿಯನ್ನು ಗುರಿಯಾಗಿಸಿ ಸಂಘಪರಿವಾರ ಹಬ್ಬಿಸಿದ ಕೋಮು ಜ್ವಾಲೆ ರಾಜ್ಯದ ಕರಾವಳಿ ಮತ್ತು ಇತರೆ ಪ್ರದೇಶಗಳಿಗೂ ಹಬ್ಬಿತು.
ಕೋಮುವಾದಕ್ಕೆ ಸಡ್ಡು ಹೊಡೆದು ಕೋಮು ಸೌರ್ಹದತೆಗಾಗಿ ಹೋರಾಡಿದ ನಿರ್ಭಿಡ ಪತ್ರಕರ್ತೆ ಗೌರಿ ಲಂಕೇಶ್ ರಾಜಕೀಯವಾಗಿ ಬೆಳಕಿಗೆ ಬಂದದ್ದು ಬಾಬಾಬುಡನ್ ಗಿರಿಯ ವಿವಾದದ ಸಮಯದಲ್ಲೇ. ಸಾಮಾಜಿಕ ಸಂಶೋಧನೆಗಳ ಮೂಲಕ ವೈಚಾರಿಕತೆಯನ್ನು ಬಿತ್ತಲು ಪ್ರಯತ್ನಿಸಿದ ಎಂ.ಎಂ.ಕಲ್ಬುರ್ಗಿಯಂತಹ ವಿಚಾರವಾದಿಗಳು ಸಂಘಪರಿವಾರದ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಹಿಂದುತ್ವ ಕೋಮುಶಕ್ತಿಗಳು, ವೈಚಾರಿಕ ಸಿದ್ದಾಂತವನ್ನು ಎದುರಿಸಲಾಗದೆ, ಮಹಾರಾಷ್ಟ್ರದ ಗೋವಿಂದ್ ಪನ್ಸಾರೆ, ನರೇಂದ್ರ ಧಾಭೋಲ್ಕರ್ ರವರನ್ನು ದೈಹಿಕವಾಗಿ ಮುಗಿಸಲೇಬೇಕೆಂದು ಈ ನಾಲ್ವರನ್ನೂ ಗುಂಡಿಕ್ಕಿ ಹತ್ಯೆಗೈದರು.
ಸಂಘಪರಿವಾರದ ವಿಧ್ವಂಸಕ ಕೃತ್ಯಗಳ ಬಗ್ಗೆ ಕೇವಲ ಘೋಷಾ ವಾಕ್ಯಗಳ ಆರ್ಭಾಟಗಳಿಗೇ ಸೀಮಿತಗೊಂಡ “ಪ್ರಗತಿಶೀಲ” ಚಳುವಳಿ ಗೌರಿ ಲಂಕೇಶ್ ಹತ್ಯೆಯನ್ನೇ ಚುನಾವಣೆಯಲ್ಲಿ ಒಂದು ಪ್ರಖರ ಸಾಮಾಜಿಕ-ರಾಜಕೀಯ ಅಸ್ತ್ರವನ್ನಾಗಿ ಬಳಸಿ ಬಿಜೆಪಿ ಸಂಘಪರಿವಾರದವರ ದಾಪುಗಾಲಿಗೆ ಸಬಲವಾದ ಅಡ್ಡಗೋಡೆಗಳನ್ನು ಕಟ್ಟಬಹುದಿತ್ತು. ಪ್ರಗತಿಶೀಲ ಸಮುದಾಯದ ನೇತೃತ್ವಕ್ಕೆ ಸ್ವಯಂ-ನೇಮಕಾತಿ ಮಾಡಿಕೊಂಡ, ಎಡಪಕ್ಷ-ಗುಂಪು ಮತ್ತು ವ್ಯಕ್ತಿಗಳು ಈ ನಿಟ್ಟಿನಲ್ಲಿ ಸಂಪೂರ್ಣ ವಿಫಲಗೊಂಡಿವೆ. ‘ಕಡಿಮೆ ಶತ್ರು-ದೊಡ್ಡ ಶತ್ರು’ ಎಂಬ ರಣತಂತ್ರದಡಿ ತಮ್ಮ ರಾಜಕೀಯ ದಾಳಗಳನ್ನು ನಡೆಸಿದ ಬಹುತೇಕ ಪಕ್ಷಗಳು ಗೌರಿಲಂಕೇಶ್ ಹತ್ಯೆಯ ನಂತರ ಭುಗಿಲೆದ್ದ ಜನಾಕ್ರೋಶ ಮತ್ತು ಸಾರ್ವಜನಿಕ ಅನುಕಂಪವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಕಂಡ ಸೋಲು ನಿಚ್ಚಳವಾಗಿದೆ.
ಸಾಧ್ಯಾ-ಸಾಧ್ಯತೆಗಳು ಏನಿತ್ತು?
‘ಗೌರಿ ಲಂಕೇಶ್ ಹತ್ಯೆಯ ಸಮರ್ಥಕರಿಗೆ ನಮ್ಮ ವೋಟಿಲ್ಲ’ ಎಂಬ ಘೋಷವಾಕ್ಯದಡಿಯಲ್ಲಿ ಎಲ್ಲಾ ಕಾರ್ಯಶೀಲರ ಒಕ್ಕೂಟಮೊಂದರ ರಚನೆಗೆ ಅವಕಾಶವಿತ್ತು, ಈ ರೀತಿಯ ಒಕ್ಕೂಟ ನಿರ್ಮಿಸಿ ಚಿಂತಕರು, ಪ್ರಗತಿಪರರು, ಜಾತ್ಯಾತೀತರು, ದಮನಿತರು, ಕಾರ್ಯೋನ್ಮುಖರಾಗಬಹುದಿತ್ತು. ‘ಕೋಮುವಾದಿಗಳನ್ನು ಸೋಲಿಸಿ, ಕರ್ನಾಟಕ ಉಳಿಸಿ, ಎಂದು ರಾಜ್ಯದ 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬಹುದಿತ್ತು. ಪ್ರತಿ ಕ್ಷೇತ್ರದಲ್ಲೂ ಬಿಜೆಪಿಯ ವಿರುದ್ದ, ಏಕ ಮಾತ್ರ ಒಮ್ಮತದ ಕೋಮುವಾದ ವಿರೋಧಿ ಅಭ್ಯರ್ಥಿಯ ಆಯ್ಕೆಯ ಮೂಲಕ ‘ಕೋಮುವಾದಿ ಶಕ್ತಿಗಳಿಗೆ ಪ್ರತಿರೋಧ ಒಡ್ಡಬಹುದಿತ್ತು.
ದೇವನೂರು ಮಹಾದೇವ, ಕೋ .ರಾಮಯ್ಯ, ದ್ವಾರಕಾನಾಥ್ ಚೊಕ್ಕ, ಗಿರೀಶ್ ಕಾರ್ನಾಡ್, ಮಲ್ಲಿಕಾರ್ಜುನ್ ಖರ್ಗೆ, ದಿನೇಶ್ ಅಮಿನ್ ಮಟ್ಟು, ಎಲ್.ಹನುಮಂತಯ್ಯ, ಕಾಂ.ಬಾಲನ್, ಸಿದ್ದನಗೌಡ ಪಾಟೀಲ್, ಜಿ.ಆರ್.ಶಿವಶಂಕರ್, ಬಿ.ಟಿ.ಲಲಿತಾನಾಯಕ್, ಎನ್.ಮಹೇಶ್, ಪ್ರಕಾಶ್ ರಾಜ್, ಎಂ.ವೆಂಕಟಸ್ವಾಮಿ, ವರಲಕ್ಷೀ, ವಿದ್ಯಾದಿನಕರ್, ಬಿ.ಗೋಪಾಲ್, ಕೆ.ನೀಲಾ, ದು.ಸರಸ್ವತಿ, ಜಿ.ರಾಮಕೃಷ್ಣ, ಡಾ.ಎಚ್.ಎಸ್.ಅನುಪಮಾ, ರಾಜನ್ ಸಿನ್ನಯ್ಯ, ವೀರಸಂಗಯ್ಯ, ಹರಿರಾಮ್, ಚುಕ್ಕಿ ನಂಜುಂಡಸ್ವಾಮಿ, ಜಿ.ಕೆ.ಗೋವಿಂದ್ ರಾವ್, ಕುಂ.ವೀರಭದ್ರಪ್ಪ, ಮರುಳುಸಿದ್ದಪ್ಪ, ಕೆ.ಎಲ್.ಅಶೋಕ್ ರಂತಹ ಇತರ ಜನಪ್ರಿಯ, ಪ್ರಖರ ಕೋಮುವಾದಿ ವಿರೋಧಿ ಅಭ್ಯರ್ಥಿಗಳನ್ನು ಒಂದು ಒಡಂಡಿಕೆಯ ಒಪ್ಪಂದದಡಿ ಸ್ಪರ್ಧೆಗಿಳಿಸಿ ಬಿಜೆಪಿಯ ಅಭ್ಯರ್ಥಿಗಳಿಗೆ ಸಡ್ಡು ಹೊಡೆಯಬಹುದಿತ್ತು.
ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ಒಮ್ಮತದ ಅಭ್ಯರ್ಥಿ ಕೋಮುವಾದ ವಿರೋಧಿ ಪ್ರತಿನಿಧಿಯಾಗಿ ಮತಪ್ರಚಾರದ ಸಮಯದಲ್ಲಿ ‘‘ಗೌರಿ ಲಂಕೇಶ್ ಹತ್ಯೆಯನ್ನೇ ಚುನಾವಣಾ ಪ್ರಚಾರವನ್ನಾಗಿಸಿದ್ದರೆ ಆರ್.ಎಸ್.ಎಸ್ ಮತ್ತು ಬಿಜೆಪಿಯನ್ನು ಖಂಡಿತವಾಗಿಯೂ ಹಿಮ್ಮೆಟ್ಟಬಹುದಿತ್ತು.
ನಿರುದ್ಯೋಗ, ವಸತಿಹೀನತೆ, ಬೆಲೆಏರಿಕೆ, ಬಡತನ, ಜಾತಿದೌರ್ಜನ್ಯ, ಅಪೌಷ್ಟಿಕತೆಯಂತಹ ದುಡಿಯುವ ವರ್ಗದ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲಗೊಂಡ ಮೋದಿ ಸರ್ಕಾರದ ದುರಾಡಳಿತವನ್ನು ಜನರಿಗೆ ಮನಮುಟ್ಟುವಂತೆ ಹೇಳುವಲ್ಲಿ ಯಶಸ್ಸು ಕಾಣದ ಎಡವಿಚಾರವಾದಿ ಪಕ್ಷಗಳು ಎಂದಿನಂತೆ ಎಡವಿದವು.
ಮೋದಿನಾಮಿಕ್ಸ್, ನೋಟುರದ್ಧತಿ, ಮತ್ತು ಜಿ ಎಸ್ ಟಿ ವಿರುದ್ಧ ಮಡುಗಟ್ಟಿದ ದುಡಿಯುವ ಮತ್ತು ಇನ್ನಿತರ ಶೋಷಿತ ವರ್ಗಗಳ ಜನಾಕ್ರೋಶವನ್ನು ಮೊನಚಾಗಿಸಿ ಚುನಾವಣೆ ಮತ್ತು ಚುನಾವಣೇತರ ಹೋರಾಟಗಳನ್ನು ರೂಪಿಸುವಲ್ಲಿ ವಿಫಲಗೊಂಡ ಈ ಪಕ್ಷಗಳ ನಾಯಕತ್ವ ತಮಗರಿವಿಲ್ಲದಂತೆಯೇ ಬಿಜೆಪಿಯ ಕೋಮುವಾದಿ ನಾಗಾಲೋಟಕ್ಕೆ ಕೆಂಪುಹಾಸು ಹಾಸಿ, ಚುನಾವಣೆಗೆ ಮೊದಲೇ ಸೋಲನ್ನು ಒಪ್ಪಿಕೊಂಡಂತೆ ವರ್ತಿಸಿದ್ದು ಕರ್ನಾಟಕ ಕಂಡ ರಾಜಕೀಯ ವಿಪರ್ಯಾಸ.
ಮುಂದೇನು?
ಒಟ್ಟಾರೆ ಎಲ್ಲಾ ಪ್ರಗತಿಪರ, ಕ್ರಿಯಾಶೀಲ ಹೋರಾಟಗಾರ ಗುಂಪು/ಸಂಘಟನೆಗಳಿಗೆ, ಸಮಾಜವಾದಿ ಆಶಯಗಳನ್ನು ಹೊತ್ತು ದುಡಿಯುವ ವರ್ಗ ಮತ್ತು ದಮನಿತರೆಲ್ಲರನ್ನು ಸಂಘಟಿಸಿ ಹೋರಾಟಕ್ಕೆ ಅಣಿಮಾಡುತ್ತಿದ್ದ ಹುರಿಯಾಳುಗಳಿಗೆ ಸಧ್ಯದ ರಾಜಕೀಯ ಸನ್ನಿವೇಶ ಧೃತಿಗೆಡಿಸಿರಲು ಸಾಧ್ಯ.
ಎಡ ಸಿದ್ಧಾಂತ–ಪಕ್ಷಗಳ ನಾಯಕತ್ವಗಳು ಕ್ಷಿಪ್ರ–ಅಡ್ಡಹಾದಿ,ಅನೈತಿಕ ಒಪ್ಪಂದಗಳ ಮೊರೆಹೋಗಿ ದುಡಿಯುವ ವರ್ಗ ಮತ್ತು ದಮನಿತ ಸಮುದಾಯಗಳಿಗೆ ದ್ರೋಹವೆಸಗಿದ್ದಾರೆ. ಮೇಲೆ ಉಲ್ಲೇಖಿಸಿದಂತೆ, ಬಂಡವಾಳಿ ವರ್ಗದೊಳಗೆ “ಪ್ರಗತಿಶೀಲತೆ“ಯನ್ನು ಹುಡುಕಹೋಗಿ ದಾರಿತಪ್ಪಿ ನಮ್ಮ ವರ್ಗದ ದಿಕ್ಕೆಡಿಸಿದ್ದಾರೆ.
ದುಡಿಯುವವರ್ಗದ ಏಳಿಗೆ ಸಮಾಜವಾದಿ ಚಿಂತನೆಗಳು ಸಾಕಾರವಾದಾಗ ಮಾತ್ರ ಸಾಧ್ಯ. ನಮ್ಮ ವರ್ಗದ ಸಖ್ಯ, ಇನ್ನಿತರ ದಮನಿತ–ಶೋಷಿತ ಸಮುದಾಯಗಳೊಂದಿಗೆ ಮಾತ್ರ. ಯಾವುದೇ ಬಂಡವಾಳೀ, ಜಾತಿವಾದಿ, ಮತಾಂಧ, ರಾಜಕೀಯ ಪಕ್ಷ–ಗುಂಪೂ ನಮ್ಮ ವರ್ಗದ ಮಿತ್ರರಲ್ಲ.
ಒಂದು ದಿಟ್ಟ ಮತ್ತು ಸ್ವತಂತ್ರ ಸಮಾಜವಾದಿ ಪರ್ಯಾಯವನ್ನು ಯೋಜಿಸಿ ಮುನ್ನಡೆಸುವ, ನೂತನ ಬೃಹತ್ ದುಡಿಯುವ ಜನರ ಪಕ್ಷವೊಂದನ್ನು ನಿರ್ಮಿಸಿ, ಬಂಡವಾಳಿ–ಜಮೀನ್ದಾರಿ, ಜಾತಿವಾದಿ–ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟೋಣ.
*ವಿಶ್ವನಾಥ್,
ನ್ಯೂ ಸೋಶಿಯಲಿಸ್ಟ್ ಆಲ್ಟರ್ನೇಟಿವ್.